ಬ್ರಿಟನ್‌ನ ಪ್ರಸಿದ್ಧ ಐಶಾರಾಮಿ ಕಾರು ಕಂಪನಿ ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ, ತನ್ನ ಅತ್ಯಂತ ನಿರೀಕ್ಷೆಯ ಜಾಗ್ವಾರ್ ಐ ಪೇಸ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ವಿಶೇಷವೆಂದರೆ ಇದೊಂದು ಎಲೆಕ್ಟ್ರಿಕ್ ಐಶಾರಾಮಿ ಕಾರಾಗಿದ್ದು, ಇದರ ದರ 1.06 ಕೋಟಿ ರೂ.ನಿಂದ 1.12 ಕೋಟಿ ರೂ. ವರೆಗೆ ಇದೆ. ಭಾರತದಲ್ಲಿ ಮರ್ಸಿಡೀಸ್ ಬೆಂಝ್ಇಕ್ಯೂಸಿ ನಂತರ ಕಾಲಿಡುತ್ತಿರುವ ಎರಡನೇ ಐಶಾರಾಮಿ ಕಾರು.
ಕಳೆದ ನವೆಂಬರ್ ನಲ್ಲೇ ಈ ಐಶಾರಾಮಿ ಕಾರಿನ ಬುಕಿಂಗ್ ಆರಂಭವಾಗಿತ್ತು. ಆದರೆ, ಇನ್ನೂ ಲಾಂಚ್ ಆಗಿರಲಿಲ್ಲ. ಆದರೆ, ಈಗಾಗಲೇ ಜಾಗತಿಕವಾಗಿ ಲಾಂಚ್ ಆಗಿದ್ದು, ಇದಕ್ಕೆ ಹಲವಾರು ಪ್ರಶಸ್ತಿಗಳು ಸಿಕ್ಕಿವೆ. ಅಂದರೆ, 2019ರ ವರ್ಲ್ಡ್ ಕಾರ್ ಆಫ್ ದಿ ಇಯರ್, ವರ್ಲ್ಡ್ ಕಾರ್ ಡಿಸೈನ್ ಆಫ್ ದಿ ಇಯರ್, ವರ್ಲ್ಡ್ ಗ್ರೀನ್ ಕಾರ್ ಪ್ರಶಸ್ತಿಗಳು ದೊರೆತಿವೆ. ಪ್ರಶಸ್ತಿಗಳನ್ನು ಒಮ್ಮೆಗೇ ತೆಗೆದುಕೊಂಡ ಏಕೈಕ ಕಾರು ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.
ಇದು ಫ್ಯೂಚರಿಸ್ಟಿಕ್ ಕಾರಾಗಿದ್ದು, ಇದರಲ್ಲಿ ಪಿವಿ ಪ್ರೋ ಇನ್ಫೋಟೈನ್ ಮೆಂಟ್ ಸಿಸ್ಟಂ ಇದೆ. 10 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಸೌಲಭ್ಯವಿದೆ. ಇದರಲ್ಲಿ 16 ಸ್ಪೀಕರ್ ಗಳಿದ್ದು, 380 ವ್ಯಾಟ್‌ನ ಮೆರಿಡಿಯನ್ 3 ಡಿ ಸರೌಂಡ್ ಆಡಿಯೋ ಸಿಸ್ಟಂ ಇದೆ. ವಯರ್ ಲೆಸ್ ಚಾರ್ಜಿಂಗ್,
ಪಿಎಂ 2.5 ಏರ್ ಫಿಲ್ಟರ್, ಪ್ಯಾನೋರಾಮಿಕ್ ಸನ್ ರೂಫ್, 8 ವೇ ಅಡ್ಜಸ್ಟಬಲ್ ಸೆಮಿ ಪವರ್ಡ್ ಲಕ ಟೆಕ್ ನ್ಪೋರ್ಟ್ ಸೀಟ್, ಇಂಟರ್ಯಾಕ್ಟೀವ್ ಡ್ರೈವರ್ ಡಿಸ್ಪ್ಲೇ, 3ಡಿ ಸೋಲಾರ್ ಕ್ಯಾಮೆರಾ, ಡ್ರೈವರ್ ಕಂಡೀಶನ್ ಮಾನಿಟರ್, ಹೆಡ್ ಅಪ್ ಡಿಸ್ಪ್ಲೇ, ಅಡಾಪ್ಟೀವ್ ಕ್ರೂಸ್ ಕಂಟ್ರೋಲ್ ಸೇರಿ ಹಲವಾರು ವಿಶೇಷಗಳಿವೆ.
ಭದ್ರತೆ ವಿಚಾರಕ್ಕೆ ಬಂದರೆ, ಇದರಲ್ಲಿ ಆರು ಏರ್ ಬ್ಯಾಗ್‌ಗಳು, ಎಬಿಎಸ್, ಇಎಸ್ಸಿ, ಎಮರ್ಜೆನ್ಸಿ ಬ್ರೇಕ್ ಅಸಿ, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್, 360 ಡಿಗ್ರಿ ಕ್ಯಾಮೆರಾಗಳಿವೆ. ಈ ಕಾರಿನಲ್ಲಿ 90 ಕೆಡಬ್ಲ್ಯೂ ಎಚ್ ಲಿಥಿಯಮ್ -ಇಯಾನ್ ಬ್ಯಾಟರಿ ಇದೆ. 45
ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್ ಆಗಲಿದೆ. ಇದನ್ನು 100 ಕೆಡಬ್ಲ್ಯೂ ಚಾರ್ಜಿಂಗ್ ಪೋರ್ಟ್ ಮೂಲಕ ಚಾರ್ಜ್ ಮಾಡಬೇಕು. ಒಂದು ವೇಳೆ 7ಕೆಡಬ್ಲೂ ಎಚ್ ಎಸಿ ಮೂಲಕ ಚಾರ್ಜ್ ಮಾಡಿದರೆ ಫುಲ್ ಚಾರ್ಜ್ ಆಗಲು 10 ಗಂಟೆಗಳು ಬೇಕು. ಒಮ್ಮೆ ಚಾರ್ಜ್ ಮಾಡಿದರೆ 480 ಕಿ.ಮೀ. ಹೋಗಬಹುದು. ಕೇವಲ 4.8 ಸೆಕೆಂಡ್ ಗಳಲ್ಲಿ 100 ಕಿ.ಮೀ. ವೇಗ ಪಡೆದುಕೊಳ್ಳಬಹುದು. ಕಾರಿನ ಬ್ಯಾಟರಿಗೆ 8 ವರ್ಷ ಅಥವಾ 1,60,000 ಕಿ.ಮೀ.ಗಳ ವಾರಂಟಿ ಕೊಡಲಾಗಿದೆ.
ಸೋಮಶೇಖರ ಸಿ.ಜೆ