Advertisement

ಕೋವಿಡ್ ಗೆದ್ದು ಬಂದ ನಟ ಕೋಮಲ್ : ವೈದ್ಯರ, ನರ್ಸ್ ಗಳ ಪಾದಗಳಿಗೆ ನಮಿಸಿದ ಜಗ್ಗೇಶ್

01:03 PM Apr 28, 2021 | Team Udayavani |

ಬೆಂಗಳೂರು: ಕನ್ನಡದ ಕಾಮಿಡಿ ನಟ ಕೋಮಲ್ ಅವರು ಮಹಾಮಾರಿ ಕೋವಿಡ್ ವಿರುದ್ಧ ಹೋರಾಡಿ ಗೆಲುವು ಸಾಧಿಸಿ, ಸಂಪೂರ್ಣ ಗುಣಮುಖರಾಗಿದ್ದಾರೆ.

Advertisement

ಕೋಮಲ್ ಆರೋಗ್ಯ ಸ್ಥಿತಿ ಸೀರಿಯಸ್ ಆಗಿರುವ ವಿಚಾರವನ್ನು ನಟ ಜಗ್ಗೇಶ್ ಇಷ್ಟು ದಿನ ಬಹಿರಂಗ ಪಡಿಸಿರಲಿಲ್ಲ. ಈಗ ಕೋಮಲ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮನದಾಳದ ಮಾತುಗಳನ್ನು ಜಗ್ಗೇಶ್ ಹಂಚಿಕೊಂಡಿದ್ದಾರೆ. ಜೊತೆಗೆ ಸಾವಿನ ದವಡೆಯಿಂದ ಕೋಮಲ್‌ರನ್ನ ಪಾರು ಮಾಡಿದ ರಾಯರಿಗೆ ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಜಗ್ಗೇಶ್ ಧನ್ಯವಾದ ಹೇಳಿದ್ದಾರೆ.

ನಟ ಜಗ್ಗೇಶ್ ಟ್ವೀಟ್ :

”ನಾನು ಇಷ್ಟು ದಿನ ಮುಚ್ಚಿಟ್ಟು ಪಡುತ್ತಿದ್ದ ಯಾತನೆ ರಾಯರಿಗೆ ಮಾತ್ರ ಗೊತ್ತು. ಭಕ್ತನ ಗುರುಗಳ ನಡುವೆ ನಡೆದಿತ್ತು ಭಾವನಾತ್ಮಕ ಭಕ್ತಿಯ ಬೇಡಿಕೆ. ಅದು ಒಂದೇ… ರಾಯರೇ, ನಾನು ಕಾಯಾ ವಾಚಾ ಮನಸಾ ಸತ್ಯವಾಗಿ ನಡೆದುಕೊಂಡಿದ್ದರೆ, ಹೃದಯದಿಂದ ಒಳ್ಳೆಯತನ ಅನುಸರಿಸಿದ್ದರೆ, ಮನುಷ್ಯ, ಪಕ್ಷಿ ಪ್ರಾಣಿಯ ಆತ್ಮದಲ್ಲಿ ಸಮಾನವಾಗಿ ದೇವರಿದ್ದಾನೆ ಎಂದು ನಂಬಿದ್ದರೆ, ಯಾರಿಗೂ ಕೇಡು ಬಯಸದೆ ಮೋಸ ವಂಚನೆ ಅನ್ಯಾಯ ಮಾರ್ಗದಲ್ಲಿ ನಡೆದು ನೊಂದವರಿಗೆ ನಂಬಿದವರಿಗೂ ಭುಜಕೊಟ್ಟು ಬದುಕಿದ್ದರೆ, ನನ್ನ ತಂದೆ-ತಾಯಿಯನ್ನು ನೋಯಿಸದೆ ಉತ್ತಮ ಮಗನಂತೆ ಸಂತೈಸಿದ್ದರೆ, ಅನ್ನಕೊಟ್ಟ ಶಾರದೆ ಸೇವೆ ನಿಷ್ಠೆಯಿಂದ ಮಾಡಿದ್ದರೆ, ಕಾಯಕ ಮಾಡುವ ಎಲ್ಲಾ ಕ್ಷೇತ್ರದಲ್ಲೂ ಪ್ರಾಮಾಣಿಕನಾಗಿದ್ದರೆ, ರಾಯರು ನನ್ನ ಹೃದಯದಲ್ಲಿದ್ದರೆ ಸಾವಿನ ಮನೆ ಕದತಟ್ಟುತ್ತಿರುವ ನನ್ನ ತಮ್ಮನಿಗೆ ಸಾವು ಗೆಲ್ಲುವ ಶಕ್ತಿ ನೀಡಿ ಎಂದು!”

”ರಾಯರು ನನ್ನ ಬೇಡಿಕೆ ಬೃಂದಾವನದಿಂದ ಎದ್ದು ಬಂದು ಪಕ್ಕ ನಿಂತು ಅವನನ್ನು ಉಳಿಸಿಬಿಟ್ಟರು! ಕೋಮಲ್ ಈಗ ಸೇಫ್. ಚಿತ್ರರಂಗದಲ್ಲಿ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕಲು ಸ್ವಂತ ವ್ಯವಹಾರ ಬೆಂಗಳೂರಿನ ಕಾರ್ಪೊರೇಷನ್‌ನಲ್ಲಿ ಶುರು ಮಾಡಿ ಯಶಸ್ವಿಯಾದ. ಆದರೆ, ಇತ್ತೀಚೆಗೆ ತನಗೆ ಬರಬೇಕಾದ ಬಿಲ್‌ಗೆ ಅಲ್ಲಿನ ಕೆಲ ಲಂಚಬಾಕ ಅಧಿಕಾರಿಗಳು ಹಣಕ್ಕೆ ಪೀಡಿಸಿ ಅಲೆಸಿಬಿಟ್ಟರು. ಅದನ್ನು ಪಡೆಯಲು ದಿನ ಓಡಾಡುತ್ತಿದ್ದ ತಮ್ಮನಿಗೆ ಕೊರೊನಾ ಮಾರಿ ಮೈಸೇರಿ ತುಂಬಾ ಸೀರಿಯಸ್ ಆಗಿಬಿಟ್ಟ”

Advertisement

”ದೇವರಿಗೆ ಗೊತ್ತು ನಾನು ಎಲ್ಲರಿಂದ ಮುಚ್ಚಿಟ್ಟು ಅಣ್ಣನಾಗಿ ಅವನ ಉಳಿಸಿಕೊಂಡ ಕಷ್ಟ! ಅವನಿಗೆ ಸಹಾಯ ಮಾಡಿದ ಡಾ.ಮಧುಮತಿ, ನಾದಿನಿ ಡಾ.ಲಲಿತಾ, ನರ್ಸ್‌ಗಳ ಪಾದಕ್ಕೆ ನನ್ನ ನಮನ” ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ತಾವು ನಂಬುವ ರಾಯರಿಗೆ ಜಗ್ಗೇಶ್ ನಮಸ್ಕಾರ ಮಾಡಿದ್ದಾರೆ.

”ಕೋಮಲ್ ಆಸ್ಪತ್ರೆಗೆ ಎರಡು ವಾರಗಳ ಹಿಂದೆ ಸೇರಿಸುವಾಗ ಎಲ್ಲರೂ ಕಂಗಾಲಾದರು. ನಾನು 18 ಅಧ್ಯಾಯ ಭಗವದ್ಗೀತೆ ಓದಿ ಮುಗಿಸಿ ಅವನೊಟ್ಟಿಗೆ ರಾಯರ ಅಕ್ಷತೆ, ಮೃತ್ತಿಕೆ, ರಾಯರ ಬೃಂದಾವನ ತೊಳೆಯುವ ಪವಿತ್ರ ಜಲ ಕಳಿಸಿಕೊಟ್ಟೆ. ಮಿಕ್ಕಿದ್ದು ರಾಯರ ಪವಾಡ. 80% ಶ್ವಾಸಕೋಶಕ್ಕೆ ಹೊಕ್ಕಿ 80ಕ್ಕೆ ಇಳಿದಿದ್ದ ಆಕ್ಸಿಜನ್ ಇಂದು 98ಕ್ಕೆ ಬಂದಿದೆ. ಭವರೋಗವೈದ್ಯ ಗುರುರಾಯರು ಗುರುಭ್ಯೋ ನಮಃ” ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next