ಜಗ್ಗೇಶ್ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ… ಹೌದು, ಜಗ್ಗೇಶ್ ಸಾರ್ವಜನಿಕವಾಗಿಯೇ ಆ ಪ್ರತಿಭೆಗಳಿಗೆ ಮನೆಯೊಂದನ್ನು ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಆ ಮನೆ ಈಗ ನಿರ್ಮಾಣಗೊಂಡು, ಮಾ.12 ರಂದು ಗೃಹಪ್ರವೇಶಕ್ಕೆ ಸಿದ್ಧವಾಗಿದೆ. ಅಷ್ಟಕ್ಕೂ ಜಗ್ಗೇಶ್ ಆ ಮಾತು ಕೊಟ್ಟಿದ್ದು ಯಾರಿಗೆ ಎಂಬ ಪ್ರಶ್ನೆಗೆ ಉತ್ತರ ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿಯ ಪ್ರತಿಭಾವಂತ ಅಂಧ ಸಹೋದರಿಯರು.
ವಾಹಿನಿಯೊಂದರಲ್ಲಿ ಗಾಯನದ ಮೂಲಕ ಗಮನಸೆಳೆದ ರತ್ನಮ್ಮ ಹಾಗು ಮಂಜಮ್ಮ ಸಹೋದರಿಯರು, ಸೂರಿಲ್ಲದ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದರು. ಅದ್ಭುತ ಪ್ರತಿಭಾವಂತರಾದ ಆ ಸಹೋದರಿಯರ ಮಾತು ಆಲಿಸಿದ್ದ ಜಗ್ಗೇಶ್ ಹಾಗು ಅವರ ಪತ್ನಿ ಪರಿಮಳಾ ಸಹಾಯ ಹಸ್ತ ಚಾಚಿದ್ದರು. ಸೂರಿಲ್ಲದ ಅವರಿಗೆ ಸೂರು ಕಲ್ಪಿಸುವ ಕುರಿತು ಹೇಳಿದ್ದರು. ಅದರಂತೆ ಈಗ ಆ ಹಳ್ಳಿಯಲ್ಲಿ ಮನೆ ನಿರ್ಮಾಣಗೊಂಡಿದ್ದು, ಮಾ.12 ರಂದು ಗೃಹಪ್ರವೇಶ ನಡೆಯಲಿದೆ.
ಸದ್ಯಕ್ಕೆ ಆ ಮನೆಯ ಫೋಟೋವೊಂದು ಸಾಮಾಜಿಕ ತಾಣದಲ್ಲಿ ಬಹಿರಂಗಗೊಂಡಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ನಿರ್ಮಾಣ ಹಂತದಲ್ಲಿರುವ ಮನೆಯ ಕೆಲಸ ಬಹುತೇಕ ಪೂರ್ಣಗೊಂಡಿದೆ. ಇನ್ನೊಂದು ವಿಶೇಷವೆಂದರೆ, ಆ ಮನೆಗೆ “ಜಗ್ಗೇಶ್ ಪರಿಮಳ ನಿಲಯ’ ಎಂದು ನಾಮಕರಣ ಮಾಡಲಾಗಿದೆ. ಮನೆಯ ಗೋಡೆಯ ಮೇಲೆ ಬಣ್ಣದ ಅಕ್ಷರಗಳಲ್ಲಿ “ಜಗ್ಗೇಶ್ ಪರಿಮಳ ನಿಲಯ’ ಎಂಬ ಹೆಸರು ಬರೆಯಲಾಗಿದೆ.
ಇದರೊಂದಿಗೆ ಎದುರಿನ ಗೋಡೆಗೆ ಸಂಗೀತದ ಸಂಕೇತವಿರುವ ಚಿತ್ತಾರಗಳನ್ನೂ ಬಿಡಿಸಲಾಗಿದ್ದು, ತಾರಸಿಯಲ್ಲಿ ಕನ್ನಡ ಧ್ವಜ ನೆನಪಿಸುವ ಹಳದಿ-ಕೆಂಪು ಬಣ್ಣವನ್ನು ಬಳಿದಿರುವುದು ವಿಶೇಷ. ಅದೇನೆ ಇರಲಿ, ವಾಹಿನಿಯೊಂದರ ರಿಯಾಲಿಟಿ ಶೋನಲ್ಲಿ ಗಮನಸೆಳೆದ ಅಂಧ ಸಹೋದರಿಯರಾದ ರತ್ನಮ್ಮ ಹಾಗೂ ಮಂಜಮ್ಮ ಅವರು ತಮ್ಮ ಸಮಸ್ಯೆ ಕುರಿತು ಹೇಳಿಕೊಂಡಿದ್ದರು. ಕಿತ್ತು ತಿನ್ನುವ ಬಡತನದ ಕುರಿತು ಹೇಳಿಕೊಂಡ ಅವರ ಮಾತುಗಳು ಹಲವರ ಕಣ್ಣುಗಳನ್ನು ಒದ್ದೆ ಮಾಡಿಸಿದ್ದವು.
ಈಗ ಸಮಸ್ಯೆಗೆ ಸ್ಪಂದಿಸಿರುವ ಜಗ್ಗೇಶ್ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಜಗ್ಗೇಶ್ ಅವರೊಂದಿಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಸೇರಿದಂತೆ ಹಲವರು ಸಹ ಕೈ ಜೋಡಿಸಿದ್ದರು. ಜಗ್ಗೇಶ್ ನೇತೃತ್ವದಲ್ಲಿ ಈ ಮನೆ ನಿರ್ಮಾಣಗೊಂಡಿದ್ದು, ಗೃಹಪ್ರವೇಶ ಸಂದರ್ಭದಲ್ಲಿ ರಂಭಾಪುರಿ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಕೂಡ ಭಾಗವಹಿಸುತ್ತಿದ್ದಾರೆ.