ಬ್ರಹ್ಮಾವರ: ಸಕ್ಕರೆ ಕಾರ್ಖಾನೆ ನಿಲುಗಡೆಗೊಂಡ ಕೆಲವು ವರ್ಷಗಳ ಬಳಿಕ ಹೋದ ವರ್ಷ ಬೆಲ್ಲದ ಗಾಣಕ್ಕೆ ಕೈ ಹಾಕಿದ ಆಡಳಿತ ಮಂಡಳಿ ಇದರಲ್ಲಿ ಸ್ವಲ್ಪ ಯಶ ಸಾಧಿಸಿದ ಪರಿಣಾಮ ಈ ವರ್ಷ ಡಿ. 18ರಿಂದ ಬೆಲ್ಲದ ಉತ್ಪಾದನೆ ಆರಂಭವಾಗಲಿದೆ. ಹೋದ ವರ್ಷ ಎರಡು ತಿಂಗಳು ಬೈಕಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವಾಗ ಕುದಿಯುವ ಕಬ್ಬಿನ ಹಾಲಿನ ಘಮ ಘಮ ಮೂಗಿಗೆ ಬರುತ್ತಿತ್ತು. ಈ ವರ್ಷ ಮತ್ತೆ ಆ ಘಮಘಮ ಅನುಭವವಾಗಲಿದೆ.
ಹೋದ ವರ್ಷ 15 ಎಕ್ರೆ ಕಬ್ಬು ದೊರಕಿ ಸುಮಾರು ಎರಡು ತಿಂಗಳು ಬೆಲ್ಲದ ಗಾಣ ನಡೆದು ಸುಮಾರು 12 ಟನ್ ಬೆಲ್ಲ ಉತ್ಪಾದನೆಯಾಗಿದ್ದರೆ ಈ ಬಾರಿ 40 ಎಕ್ರೆಗಳ ಕಬ್ಬು ದೊರಕಿ ಮೂರೂವರೆ ತಿಂಗಳು ನಡೆದು 80 -100 ಟನ್ ಬೆಲ್ಲ ಉತ್ಪಾದನೆಯಾಗಬಹುದು ಎಂಬ ವಿಶ್ವಾಸ ವಿದೆ. ಜಿಲ್ಲೆಯಲ್ಲಿ ಸುಮಾರು 80 ಎಕ್ರೆ ಕಬ್ಬು ಬೆಳೆದಿದ್ದರೂ ಇತರ ಬೆಲ್ಲದ ಗಾಣಗಳಿಗೆ ಕಬ್ಬು ಪೂರೈಕೆಯಾಗಲಿದೆ.
ಇಷ್ಟರಲ್ಲಿ ಬೆಲ್ಲ ಉತ್ಪಾ ದನೆ ಆರಂಭ ವಾಗಬೇಕಾಗಿತ್ತು. ಮಳೆ ಕಾರಣದಿಂದ ಕಬ್ಬು ಪೂರೈಸಲು ಕಷ್ಟವಾಗಿ ತಡವಾಗಿದೆ. ಹೋದ ವರ್ಷದ ಯಂತ್ರವನ್ನು ಸುಸಜ್ಜಿತಗೊಳಿಸಲಾಗಿದೆ. ಒಂದು ವೇಳೆ ಕಬ್ಬು ಪೂರೈಕೆ ಹೆಚ್ಚಿಗೆಯಾದರೆ ಇನ್ನೊಂದು ಯಂತ್ರವನ್ನು ಅಳವಡಿಸುವ ಸಾಧ್ಯತೆಯೂ ಇದೆ. ಗಾಣದ ಸ್ಥಳದಲ್ಲಿಯೇ ಗ್ರಾಹಕರಿಗೆ ನೇರವಾಗಿ ಬೆಲ್ಲವನ್ನು ಕೊಡ ಲಾಗುತ್ತದೆ. ಶುದ್ಧ ಸಾವಯವ ಬೆಲ್ಲ ಇದಾಗಿದ್ದು ಈ ಬಾರಿ ಕೆ.ಜಿ.ಗೆ 80 ರೂ. ನಿಗದಿಪಡಿಸಲಾಗಿದೆ. ಇದರಲ್ಲಿ 12 ರೂ. ಕಂಟೈನರ್ ದರವಾಗಿದೆ.
ದಿನವೊಂದಕ್ಕೆ 10 ಟನ್ ಕಬ್ಬು ಅರೆಯುವ ಸಾಮರ್ಥ್ಯವಿದ್ದು ಸುಮಾರು 750 ಕೆ.ಜಿ. ಬೆಲ್ಲ ಉತ್ಪಾದನೆಯಾಗಲಿದೆ. ಜೋನಿ ಬೆಲ್ಲ ಸಹಿತ ಸುಮಾರು 1 ಟನ್ ಉತ್ಪಾದನೆಯಾಗಲಿದೆ.
ಒಂದು ಟನ್ ಕಬ್ಬಿಗೆ 3,200 ರೂ.ಗಳನ್ನು ಆಡಳಿತ ಮಂಡಳಿ ರೈತರಿಗೆ ಕೊಡಲಿದೆ. ಸರಕಾರ ಘೋಷಿಸಿದ ಬೆಂಬಲ ಬೆಲೆ ಟನ್‌ಗೆ 2,850 ರೂ. ರೈತರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಕ್ರಮ ವಹಿಸಿದ್ದೇವೆ ಎಂದು ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ ಎಂದು ಹೇಳಿದ್ದಾರೆ.
ವರ್ಷಪೂರ್ತಿ ಬೆಲ್ಲ
ಸುಮಾರು 200-300 ಎಕ್ರೆ ಕಬ್ಬು ಬೆಳೆದರೆ ಬಾಯ್ಲರ್ ಅಳವಡಿಸಿ ವರ್ಷಪೂರ್ತಿ ಬೆಲ್ಲವನ್ನು ಉತ್ಪಾದಿಸುವ ಆಶಯವಿದೆ. ದೇವಸ್ಥಾನಗಳು, ಕಲ್ಯಾಣ ಮಂಟಪಗಳಿಂದ ಬಹಳ ಬೇಡಿಕೆ ಇದೆ. ನಮಗೆ ಪೂರೈಸಲು ಆಗುತ್ತಿಲ್ಲ.
– ಬೈಕಾಡಿ ಸುಪ್ರಸಾದ ಶೆಟ್ಟಿ, ಅಧ್ಯಕ್ಷರು, ಸಕ್ಕರೆ ಕಾರ್ಖಾನೆ, ಬ್ರಹ್ಮಾವರ