Advertisement

ಜನಾಶೀರ್ವಾದ ಇರುವವರೆಗೆ ಬಿಜೆಪಿ ತಂತ್ರ ಫಲಿಸದು: ಜಗದೀಶ್ ಶೆಟ್ಟರ್

08:33 AM May 07, 2023 | Team Udayavani |

ಹುಬ್ಬಳ್ಳಿ: ನಾನು ಬಸವ ತತ್ವಗಳನ್ನು ನಂಬಿದ ವ್ಯಕ್ತಿಯಾಗಿದ್ದು, ಬಿಜೆಪಿ ರಾಷ್ಟ್ರ-ರಾಜ್ಯ ನಾಯಕರು ನನ್ನನ್ನು ಸೋಲಿಸಿ ಎಂಬ ಒಂದಂಶದ ಪ್ರಚಾರಕ್ಕೆ ಮುಂದಾಗಿದ್ದಾರೆ. ಆದರೆ, ಕರ್ನಾಟಕ ಗುಜರಾತ ಅಲ್ಲ, ಹುಬ್ಬಳ್ಳಿ ಅಹ್ಮದಾಬಾದ್‌ ಅಲ್ಲ. ಕ್ಷೇತ್ರದ ಮತದಾರರ ಆಶೀರ್ವಾದ ಇರುವವರೆಗೂ ಯಾರು ಏನು ಮಾಡಲಾಗದು. ಇದು ಹುಬ್ಬಳ್ಳಿ ಜನರ ಮರ್ಯಾದೆ ಪ್ರಶ್ನೆಯಾಗಿದ್ದು, ತಕ್ಕ ಉತ್ತರ ನೀಡಬೇಕಾಗಿದೆ ಎಂದು ಮಾಜಿ ಸಿಎಂ, ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.

Advertisement

ಯಂಗ್‌ ಸ್ಟಾರ್‌ ಕ್ಲಬ್‌ ಮೈದಾನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ಬಿಜೆಪಿ
ನಾಯಕರಾಗಿ ನೋಡಿದ್ದ ನೀವು, ಇದೀಗ ಕಾಂಗ್ರೆಸ್‌ ನಾಯಕರಾಗಿ ನೋಡುತ್ತಿದ್ದೀರಿ. ಬಿಜೆಪಿಯಿಂದ ಆಗಿರುವ
ಅನ್ಯಾಯ ಮತ್ತೆ ಇಲ್ಲಿ ಹೇಳುವುದು ಬೇಡ. ನಾನು ಕಾಂಗ್ರೆಸ್‌ ಸೇರಿಯಾಗಿದ್ದು, ಪಕ್ಷ ಬೆಳೆಸಲು ಶಕ್ತಿ ಮೀರಿ ಯತ್ನಿಸುವೆ. ಧರ್ಮ ಸಂಘರ್ಷ ನಡೆಯದಂತೆ ಸೌಹಾರ್ದ ಬದುಕು ನಿರ್ಮಾಣಕ್ಕೆ ಯತ್ನಿಸಬೇಕಾಗಿದೆ ಎಂದರು.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್  ಸಿಂಗ್‌ ಸುಖು ಮಾತನಾಡಿ, ಹಲವು ವರ್ಷಗಳಿಂದ ಬಿಜೆಪಿಯಲ್ಲಿ ನಿಷ್ಠಾವಂತರಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಟಿಕೆಟ್‌ ನೀಡದೆ ಷಡ್ಯಂತ್ರ ಮಾಡಿ, ಅವರು ಪಕ್ಷ ತೊರೆಯುವಂತೆ ಮಾಡಲಾಗಿದೆ. ಬಿಜೆಪಿ ಈ ರೀತಿ ಅನೇಕರಿಗೆ ದೋಖಾ ನೀಡುತ್ತ ಬಂದಿದ್ದು, ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಹೇಳಿದರು.

ಹಿಮಾಚಲದಲ್ಲಿ ಚುನಾವಣೆ ವೇಳೆ ರಾಹುಲ್‌ ಗಾಂಧಿಯವರ ಪ್ರೇರಣೆಯಂತೆ 10 ಭರವಸೆಗಳನ್ನು ನೀಡಿದ್ದೆವು. ಅದರಲ್ಲಿ ಪ್ರಮುಖವಾಗಿ ಸರಕಾರಿ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ನೀಡಿದ ಭರವಸೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿಯೂ ಪಕ್ಷ
ಅಧಿಕಾರಕ್ಕೆ ಬಂದರೆ ಇಲ್ಲಿಯೂ ನೀಡಿದ ಭರವಸೆಗಳನ್ನು ಈಡೇರಿಸಲಾಗುವುದು ಎಂದರು.

ವಿಧಾನ ಪರಿಷತ್ತು ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ ಮಾತನಾಡಿ, ಕರ್ನಾಟಕದಲ್ಲಿ ಕೋವಿಡ್‌ ಸಂಕಷ್ಟ, ನೆರೆ
ಸಮಸ್ಯೆ ವೇಳೆ ಬಾರದ ಪ್ರಧಾನಿಯವರು ಇದೀಗ ನಿತ್ಯವೂ ರಾಜ್ಯಕ್ಕೆ ಪ್ರಚಾರಕ್ಕೆ ಬರುತ್ತಿದ್ದಾರೆ, ರೋಡ್‌ ಶೋ
ನಡೆಸುತ್ತಿದ್ದಾರೆ ಎಂದು ಹೇಳಿದರು.

Advertisement

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ನಾಯಕರಾದ ಕೆ.ಸಿ. ವೇಣುಗೋಪಾಲ, ಮಾಣಿಕ್ಯಂ ಠಾಗೋರ್‌, ವಿಶ್ವನಾಥನ್‌, ಸಲೀಂ ಅಹ್ಮದ್‌, ದೀಪಕ
ಚಿಂಚೋರೆ, ಎನ್‌.ಎಚ್‌. ಕೋನರಡ್ಡಿ, ಪ್ರೊ| ಐ.ಜಿ. ಸನದಿ, ಅಲ್ತಾಫ್‌ ಹಳ್ಳೂರು, ಅನಿಲಕುಮಾರ ಇನ್ನಿತರರು ಇದ್ದರು.

30 ವರ್ಷಗಳ ರಾಜಕೀಯ ಜೀವನದಲ್ಲೇ ಇಂತಹ ಗ್ಯಾರೆಂಟಿಗಳನ್ನು ನೋಡಿರಲಿಲ್ಲ. ಜನ ಕಲ್ಯಾಣಕ್ಕೆ ಪೂರಕ ಪ್ರಣಾಳಿಕೆಯನ್ನು ಕಾಂಗ್ರೆಸ್‌ ರೂಪಿಸಿದ್ದು, ಪ್ರಮುಖ 5 ಗ್ಯಾರೆಂಟಿಗಳನ್ನು ನೀಡಿದೆ. 140-150 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬರುವುದು ಖಚಿತ.
-ಜಗದೀಶ ಶೆಟ್ಟರ,
ಹು-ಧಾ ಸೆಂಟ್ರಲ್‌ ಅಭ್ಯರ್ಥಿ

ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಂದೇ ಬಾರಿಗೆ ನನ್ನ ಕ್ಷೇತ್ರಕ್ಕೆ ಆಗಮಿಸಿರುವುದು ನನ್ನ ಭಾಗ್ಯ. ಕಳೆದ 10 ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಇನ್ನಷ್ಟು ಅಭಿವೃದ್ದಿ ಕಾರ್ಯಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮತ್ತೊಮ್ಮೆ ಆಶೀರ್ವಾದ ಮಾಡಿ.
-ಪ್ರಸಾದ ಅಬ್ಬಯ್ಯ,
ಹು-ಧಾ ಪೂರ್ವ ಕ್ಷೇತ್ರದ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next