Advertisement
ಎಲ್ಲಿದೆ ರತ್ನಭಂಡಾರ?:
Related Articles
Advertisement
ಮೊಟ್ಟ ಮೊದಲ ಬಾರಿಗೆ 1805ರಲ್ಲಿ ಪುರಿಯ ಕಲೆಕ್ಟರ್ ಆಗಿದ್ದ ಚಾರ್ಲ್ಸ್ ಗ್ರೋಮ್ ಎಂಬಾತ ಭಂಡಾರದ ಬಾಗಿಲು ತೆರೆದು ಅಲ್ಲಿನ ಧನ-ಕನಕವನ್ನು ಲೆಕ್ಕ ಹಾಕಿದ್ದ. ಜತೆಗೆ ಅಲ್ಲಿನ ಬೆಲೆ ಕಟ್ಟಲಾಗದ ಅಪಾರ ಸಂಪತ್ತನ್ನು ಕಂಡು ದಂಗಾಗಿ ಹೋಗಿದ್ದ. ಆಗ 64 ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಪತ್ತೆಯಾಗಿದ್ದು ಒಂದೊಂದು ಆಭರಣ1.2 ಕೆ.ಜಿ. ತೂಕದ್ದು ಎನ್ನಲಾಗಿದೆ. ಇವು ಅಪರಂಜಿ ಚಿನ್ನ ಮತ್ತು ಹರಳನ್ನು ಹೊಂದಿದ್ದವು. 24 ವಿಧದ ಗೋಲ್ಡ್ ಮೊಹರ್, 128 ಚಿನ್ನದ ನಾಣ್ಯ, 1297 ಬೆಳ್ಳಿ ನಾಣ್ಯ, 106 ತಾಮ್ರದ ನಾಣ್ಯ ಮತ್ತು 1,333 ವಿಧದ ಬಟ್ಟೆಗಳನ್ನು ಲೆಕ್ಕ ಹಾಕಲಾಗಿತ್ತು. ಸ್ವಾತಂತ್ರ್ಯ ಬಳಿಕ 1950ರಲ್ಲಿ ದೇಗುಲ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು ಆಗ ಹೊರ ಭಂಡಾರದಲ್ಲಿ 150 ಕೆ.ಜಿ. ಬಂಗಾರದ ಆಭರಣಗಳು, ಒಳ ಭಂಡಾರದಲ್ಲಿ 180 ಕೆ.ಜಿ. ಬಂಗಾರದ ಆಭರಣ ಮತ್ತು 146 ಬೆಳ್ಳಿ ವಸ್ತುಗಳನ್ನು ಲೆಕ್ಕ ಹಾಕಲಾಗಿತ್ತು. 1978ರಲ್ಲಿ ಕೊನೆಯದಾಗಿ ರತ್ನ ಭಂಡಾರದ ದಾಸ್ತಾನು ಲೆಕ್ಕ ಹಾಕಿದ್ದು ಆಗ ಎರಡೂ ಚೇಂಬರ್‌ನಲ್ಲಿ 128 ಕೆ.ಜಿ. ತೂಕದ 454 ಬಂಗಾರದ, 221.530 ಕೆ.ಜಿ. ತೂಕದ 293 ಬೆಳ್ಳಿ ವಸ್ತುಗಳು ಪತ್ತೆಯಾಗಿದ್ದವು. ಬಳಿಕ 1982 ಮತ್ತು 1985ರಲ್ಲಿ ಈ ರತ್ನ ಭಂಡಾರ ಬಾಗಿಲು ತೆರೆಯಲಾಗಿತ್ತಾದರೂ ಅಲ್ಲಿನ ದಾಸ್ತಾನನ್ನು ಲೆಕ್ಕ ಹಾಕಿರಲಿಲ್ಲ. ಆದರೆ ಅಲ್ಲಿನ ಬಂಗಾರ, ಬೆಳ್ಳಿಯನ್ನು ತೆಗೆದು ದೇವಾಲಯದ ಗೋಪುರ, ದ್ವಾರಗಳ ರಿಪೇರಿಗೆ ಬಳಸಿಕೊಳ್ಳಲಾಗಿತ್ತು. ಈಗ 46 ವರ್ಷಗಳ ಬಳಿಕ ಮತ್ತೆ ರತ್ನಭಂಡಾರದ ಬಾಗಿಲು ತೆಗೆದು ಅಲ್ಲಿನ ದಾಸ್ತಾನು ಲೆಕ್ಕ ಹಾಕುವ ಸಮಯ ಸನ್ನಿಹಿತವಾಗಿದೆ.
ಚುನಾವಣ ವಿಷಯವಾದ ರತ್ನಭಂಡಾರ:
ಬಿಜೆಪಿ 2024ರ ಸಾರ್ವತ್ರಿಕ ಮತ್ತು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರತ್ನ ಭಂಡಾರದ ಬೀಗದ ಕೀ ಕಳೆದು ಹೋದ ಸಂಗತಿಯನ್ನೇ ಹೈಲೈಟ್ ಮಾಡಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪ್ರತೀ ಸಭೆಯಲ್ಲೂ ಇದೇ ವಿಚಾರ ಮುಂಚೂಣಿಗೆ ತಂದರು. ಜತೆಗೆ ಪ್ರಭು ಜಗನ್ನಾಥನ ಆಶೀರ್ವಾದವಿದ್ದರೆ ಅಧಿಕಾರ ಹಿಡಿಯುವುದಾಗಿ ಘೋಷಿಸಿದರು. ಕೊರೊನಾ ಕಾಲದಲ್ಲಿ ಮುಚ್ಚಿದ್ದ ಶ್ರೀ ಜಗನ್ನಾಥ ಮಂದಿರದ ಮೂರು ಬಾಗಿಲುಗಳನ್ನು ತೆರೆಯುವುದಾಗಿ ಘೋಷಿಸಿದರು. ಅದರಂತೆ ಒಡಿಶಾದಲ್ಲಿ ಎರಡು ದಶಕಗಳ ಬಳಿಕ ಆಡಳಿತಾರೂಢ ಬಿಜೆಡಿ ಸೋಲುಂಡು ಬಿಜೆಪಿ ಅಧಿಕಾರಕ್ಕೆ ಏರಿತು. ಈಗಾಗಲೇ ದೇವಸ್ಥಾನದ ಎಲ್ಲ ನಾಲ್ಕು ಬಾಗಿಲುಗಳನ್ನು ತೆರೆದಿದ್ದು ಅದರ ಮುಂದುವರಿದ ಭಾಗವಾಗಿ ರತ್ನಭಂಡಾರದ ಬಾಗಿಲು ತೆರೆದು ಅಲ್ಲಿನ ದಾಸ್ತಾನು ಲೆಕ್ಕ ಹಾಕಲು ಒಡಿಶಾ ಬಿಜೆಪಿ ಸರಕಾರ ಮುಂದಾಗಿದೆ.
ಕೀ ಕಳೆದು ಹೋಯಿತೇ?:
1978ರ ಬಳಿಕ ಹಲವು ಬಾರಿ ರತ್ನಭಂಡಾರದ ಬಾಗಿಲು ತೆರೆದು ದಾಸ್ತಾನು ಲೆಕ್ಕ ಹಾಕುವ ಪ್ರಯತ್ನಗಳು ನಡೆದವಾದರೂ ಆ ಯಾವ ಪ್ರಯತ್ನಗಳು ಯಶಸ್ವಿಯಾಗಿರಲಿಲ್ಲ. 2018ರ ಎಪ್ರಿಲ್‌ನಲ್ಲಿ ಒಡಿಶಾ ಹೈಕೋರ್ಟ್ ಆದೇಶದ ಮೇರೆಗೆ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳನ್ನು ಒಳಗೊಂಡ 16 ಮಂದಿಯ ಸಮಿತಿ ರತ್ನಭಂಡಾರದ ಪ್ರವೇಶಕ್ಕೆ ಮುಂದಾದರೂ ಒಳಗಿನ ಚೇಂಬರ್‌ನ ಬೀಗದ ಕೀ ಸಿಗದ ಕಾರಣ ಪ್ರವೇಶ ವಿಫಲವಾಯಿತು. ಪುರಿಯ ಜಿಲ್ಲಾಧಿಕಾರಿ ಕೀ ತಂದಿರಲಿಲ್ಲ. ಕೀ ಕಳೆದು ಹೋದ ಸಂಗತಿ ಕೋಟ್ಯಂತರ ಜಗನ್ನಾಥನ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಒಳ ಭಂಡಾರಕ್ಕೆ 3 ಕೀಗಳಿದ್ದು ಒಂದು ಪುರಿಯ ಗಜಪತಿ (ದೊರೆ), ಇನ್ನೊಂದು ದೇಗುಲ ಆಡಳಿತ ಮಂಡಳಿ, ಮತ್ತೂಂದು ದೇಗುಲ ಸೇವಕರ ಬಳಿ ಇತ್ತು. ಆದರೆ 1963ರ ಪುರಿಯ ಗಜಪತಿ ದೇಗುಲ ಹಕ್ಕು ಸ್ವಾಮ್ಯದ ಕೇಸ್ ಸೋತ ಬಳಿಕ ತನ್ನ ಬಳಿ ಇದ್ದ ಕೀಯನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು ಎನ್ನಲಾಗಿದೆ.
ಕೇರಳದ ಅನಂತ ಪದ್ಮನಾಭ ಸ್ವಾಮಿ ಸಂಪತ್ತು :
2011ರಲ್ಲಿ ಕೋರ್ಟ್ ಆದೇಶದ ಮೇರೆಗೆ ಕೇರಳದ ತಿರುವನಂತಪುರದ ಶ್ರೀ ಅನಂತಪದ್ಮನಾಭ ಸ್ವಾಮಿಯ ಸಂಪತ್ತಿನ ಲೆಕ್ಕ ಹಾಕಲು ಮುಂದಾಗಲಾಗಿತ್ತು. ಅಲ್ಲಿನ ನೆಲಮಹಡಿಯ 6 ಕೋಣೆಗಳ ಪೈಕಿ 5 ಕೋಣೆಗಳ ಬಾಗಿಲು ತೆರೆದಿದ್ದು ಒಂದು ಲಕ್ಷ ಕೋಟಿಗೂ ಅಧಿಕ ಮೌಲ್ಯದ ಸಂಪತ್ತು ಪತ್ತೆಯಾಗಿತ್ತು. ಆದರೆ ಇನ್ನಷ್ಟು ಸಂಪತ್ತಿನ ಕೋಣೆಗಳನ್ನು ತೆರೆಯಲು ತಿರುವಂಕೂರು ರಾಜಮನೆತನದವರು ಆಕ್ಷೇಪ ಎತ್ತಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರಿಂದ ಆ ಪ್ರಕ್ರಿಯೆಗೆ ತೆರೆ ಬಿದ್ದಿತ್ತು.
ರತ್ನ ಭಂಡಾರವನ್ನು ಹಾವುಗಳು ಕಾಯುತ್ತಿವೆಯಾ?:
ಶ್ರೀ ಜಗನ್ನಾಥನ ರತ್ನ ಭಂಡಾರವನ್ನು ಹಾವುಗಳು ಕಾಯುತ್ತಿವೆ ಎಂಬ ದಂತಕತೆ ಮತ್ತು ಜಾನಪದ ಕತೆಗಳಲ್ಲಿ ವೇದ್ಯವಾಗಿದ್ದು ಅದು ಈಗಲೂ ಪ್ರಚಲಿತದಲ್ಲಿದೆ. ಹಾಗಾಗಿ ಸಮಿತಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಲು ಮುಂದಾಗಿದೆ. ರತ್ನ ಭಂಡಾರ ತೆರೆಯುವ ವೇಳೆ ನಿಪುಣ ಹಾವಾಡಿಗರನ್ನು ಹಾಗೂ ನುರಿತ ವೈದ್ಯರನ್ನು ಬಳಸಿಕೊಳ್ಳಲು ಈಗಾಗಲೇ ನಿರ್ಧರಿಸಲಾಗಿದೆ. ಅಲ್ಲದೆ ಇತ್ತೀಚೆಗೆ ಜಗನ್ನಾಥನ ಕಾರಿಡಾರ್‌ನಲ್ಲಿ ಹಾವುಗಳು ಕೂಡ ಕಂಡು ಬಂದಿದ್ದವು. ಜತೆಗೆ ದೇವಸ್ಥಾನ 12ನೇ ಶತಮಾನದ್ದಾಗಿರುವುದರಿಂದ ಗೋಡೆ ಬಿರುಕುಗಳು, ಬಿಲಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿವೆ. 39 ವರ್ಷಗಳ ಬಳಿಕ ಬಾಗಿಲು ತೆರೆಯುತ್ತಿರುವುದರಿಂದ ಹಾವುಗಳ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲಾಗುತ್ತಿದೆ.
15: ರತ್ನ, ಚಿನ್ನಾಭರಣ ಗಳಿರುವ ಪೆಟ್ಟಿಗೆ
09: ಅಡಿ ಅಗಲ ಮುತ್ತು
03: ಅಡಿ ಎತ್ತರ ಚಿನ್ನಾಭರಣಗಳಿರುವ ಪೆಟ್ಟಿಗೆ ಗಾತ್ರ
1978ರಲ್ಲಿ ಲೆಕ್ಕಕ್ಕೆ ಸಿಕ್ಕಿದ್ದು: 128.380
ಕೆ.ಜಿ. ತೂಕದ 454
ಚಿನ್ನಾಭರಣ: 221.530 ಕೆ.ಜಿ. ತೂಕದ
293: ಬೆಳ್ಳಿ ಆಭರಣ
ರತ್ನಭಂಡಾರ ಓಪನ್ ಯಾವಾಗ?: ಇಂದು ಬೆಳಗ್ಗೆ ಓಪನ್
ಯಾರು ತೆಗೆಯುತ್ತಾರೆ?: ಒಡಿಶಾ ರಾಜ್ಯ ಸರಕಾರವು ಹೈಕೋರ್ಟ್‌ನ ನಿವೃತ್ತ ಜಡ್ಜ್ ಬಿಸ್ವನಾಥ್ ರಥ್ ನೇತೃತ್ವದಲ್ಲಿ ರಚಿಸಲಾದ 16 ಮಂದಿಯ ಸಮಿತಿ.
ಹಿಂದೆ ತೆಗೆದದ್ದು ಯಾವಾಗ?: 1985ರಲ್ಲಿ ರತ್ನಭಂಡಾರದದ ಬಾಗಿಲು ತೆರೆಯಲಾಗಿತ್ತಾದರೂ, ದಾಸ್ತಾನು ಲೆಕ್ಕ ಮಾಡಿರಲಿಲ್ಲ