ಹೈದರಾಬಾದ್: ವಿಧಾನಪರಿಷತ್ ಅನ್ನು ರದ್ದುಗೊಳಿಸುವ ಮಸೂದೆಗೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರದ ಸಚಿವ ಸಂಪುಟ ಅಂಗೀಕಾರ ನೀಡಿರುವುದಾಗಿ ವೈಎಸ್ ಆರ್ ಸಿಪಿ ಶಾಸಕ ಗುಡಿವಾಡಾ ಅಮರನಾಥ್ ತಿಳಿಸಿದ್ದಾರೆ.
ಈಗಾಗಲೇ ಆಂಧ್ರಪ್ರದೇಶವನ್ನು ಮೂರು ರಾಜಧಾನಿಯನ್ನಾಗಿ ಮಾಡುವ ಮಸೂದೆಯನ್ನು ಸೆಲೆಕ್ಟ್ (ಆಯ್ಕೆ) ಸಮಿತಿಗೆ ರವಾನಿಸಿರುವುದಾಗಿ ಹೇಳಿದೆ.
ಮೇಲ್ಮನೆಯನ್ನು ರದ್ದುಗೊಳಿಸುವ ನಿರ್ಣಯ ಆಂಧ್ರಪ್ರದೇಶ ವಿಧಾನಸಭೆಗೆ ಬರಲಿದ್ದು, ಈ ಬಗ್ಗೆ ಸುದೀರ್ಘ ಚರ್ಚೆ ನಡೆಸುವುದಾಗಿ ವೈಎಸ್ ಆರ್ ಸಿಪಿ ಹೇಳಿದೆ. ಆಂಧ್ರಪ್ರದೇಶವನ್ನು ವಿಭಜಿಸಿ ಮೂರು ರಾಜಧಾನಿಯನ್ನಾಗಿ ಮಾಡುವ ಮಸೂದೆಗೆ ಹಾಗೂ ಸಿಆರ್ ಡಿಎ (ಕ್ಯಾಪಿಟಲ್ ರೀಜನ್ ಡೆವಲಪ್ ಮೆಂಟ್ ಅಥೋರಿಟಿ) ರದ್ದುಗೊಳಿಸುವ ಮಸೂದೆ ವಿಧಾನಪರಿಷತ್ ನಲ್ಲಿ ಅಂಗೀಕಾರಗೊಂಡಿಲ್ಲವಾಗಿತ್ತು.
ಆಂಧ್ರಪ್ರದೇಶದ ವಿಧಾನಪರಿಷತ್ ನಲ್ಲಿ 58 ಮಂದಿ ಟಿಡಿಪಿ ಸದಸ್ಯರಿದ್ದು, ಆಂಧ್ರ ವಿಭಜಿಸುವ ಮಸೂದೆಗೆ ಅಂಗೀಕಾರ ಸಿಗದೆ ಹಿನ್ನಡೆ ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಜಿದ್ದಿಗೆ ಬಿದ್ದಿರುವ ವೈಎಸ್ ಆರ್ ಕಾಂಗ್ರೆಸ್ ಪಕ್ಷ ವಿಧಾನಪರಿಷತ್ ಅನ್ನೇ ರದ್ದುಗೊಳಿಸುವ ನಿರ್ಧಾರಕ್ಕೆ ಮುಂದಾಗಿರುವುದಾಗಿ ವರದಿ ತಿಳಿಸಿದೆ.
175 ಸದಸ್ಯ ಬಲದ ಆಂಧ್ರಪ್ರದೇಶದ ವಿಧಾನಸಭೆಯಲ್ಲಿ ಆಡಳಿತಾರೂಢ ವೈಎಸ್ ಆರ್ ಸಿಪಿ 151 ಸದಸ್ಯ ಬಲ ಹೊಂದಿದೆ. ವಿರೋಧ ಪಕ್ಷ ಟಿಡಿಪಿ ಕೇವಲ 26 ಸದಸ್ಯರನ್ನು ಹೊಂದಿದೆ. ಈ ನಿಟ್ಟಿನಲ್ಲಿ ಪ್ರಸ್ತಾಪಿತ ಆಂಧ್ರ ವಿಭಜನೆಯ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸುವ ಇರಾದೆ ವೈಎಸ್ ಆರ್ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ವರದಿ ವಿವರಿಸಿದೆ.
ಆಂಧ್ರಪ್ರದೇಶದ ಮೇಲ್ಮನೆಯನ್ನು 1985ರಲ್ಲಿ ಮೊದಲ ಬಾರಿಗೆ ರದ್ದುಗೊಳಿಸಲಾಗಿತ್ತು. ಟಿಡಿಪಿ ಮತ್ತು ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬಂದ ವೇಳೆ ಮೇಲ್ಮನೆಯನ್ನು ಮತ್ತೆ ಸಕ್ರಿಯಗೊಳಿಸಿತ್ತು. 2007ರಲ್ಲಿ ಜಗನ್ ತಂದೆ ರಾಜಶೇಖರ್ ರೆಡ್ಡಿ ಮೇಲ್ಮನೆಯನ್ನು ಊರ್ಜಿತಗೊಳಿಸಿದ್ದರು ಎಂದು ವರದಿ ತಿಳಿಸಿದೆ.
ಇದೀಗ ರೆಡ್ಡಿ ಪುತ್ರ ಜಗನ್ ಮೋಹನ್ ರೆಡ್ಡಿ ಮತ್ತೆ ಮೇಲ್ಮನೆಯನ್ನು ರದ್ದುಗೊಳಿಸುವ ನಿರ್ಣಯವನ್ನು ಕೈಗೊಂಡಿದ್ದು, ಅದನ್ನು ಆಂಧ್ರಪ್ರದೇಶ ರಾಜ್ಯಪಾಲರಿಗೆ ಕಳುಹಿಸಲಿದ್ದು, ನಂತರ ಕೇಂದ್ರ ಸಚಿವಾಲಯಕ್ಕೆ ಕಳುಹಿಸಲಿದೆ.