ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಚಿಕ್ಕಪ್ಪ ವೈಎಸ್ ವಿವೇಕಾನಂದ ರೆಡ್ಡಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಗಂಭೀರ ಆರೋಪ ಮಾಡಿದ್ದಾರೆ.
ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಈಗಾಗಲೇ ಜಗನ್ ಮೋಹನ್ ರೆಡ್ಡಿ ಅವರು ತನ್ನದೇ ಚಿಕ್ಕಪ್ಪನನ್ನು ಕೊಂದಿದ್ದಾರೆ. ಇನ್ನೆಷ್ಟು ಕುಟುಂಬ ಸದಸ್ಯರನ್ನು ಕೊಲ್ಲಲು ನಿರ್ಧರಿಸಿದ್ದಾರೆ, ರಾಜ್ಯವನ್ನು ನಾಶಮಾಡಲು ಸಿದ್ಧರಿದ್ದೀರಾ ಎಂದು ನಾನು ಜಗನ್ ರೆಡ್ಡಿ ಅವರನ್ನು ಕೇಳುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.
ಜಗನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಸರ್ಕಾರ ತನ್ನ ತಂದೆ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು 53 ದಿನಗಳ ಕಾಲ “ಕಾನೂನುಬಾಹಿರವಾಗಿ” ಬಂಧಿಸಿದೆ ಎಂದು ನಾರಾ ಲೋಕೇಶ್ ಆರೋಪಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಟಿಡಿಪಿ ಕಾರ್ಯಕರ್ತರ ಮೇಲೆ ನನ್ನ ಮೇಲೆ ಕೊಲೆ ಯತ್ನ, ದೌರ್ಜನ್ಯ ಸೇರಿದಂತೆ 22 ಪ್ರಕರಣಗಳು ದಾಖಲಾಗಿವೆ. ಅಧಿಕಾರಿಗಳು ಮತ್ತು ವೈಎಸ್‌ಆರ್‌ಸಿಪಿ ನಾಯಕರು ಉದ್ದೇಶಪೂರ್ವಕವಾಗಿ ಟಿಡಿಪಿ ನಾಯಕರಿಗೆ ತೊಂದರೆ ನೀಡಿದ್ದಾರೆ ಮತ್ತು ಅವರ ಹೆಸರನ್ನು ರೆಡ್ ಬುಕ್‌ನಲ್ಲಿ ಬರೆದಿಡಲಾಗಿದೆ ಎಂದು ನಾರಾ ಲೋಕೇಶ್ ಹೇಳಿದ್ದಾರೆ.