Advertisement

ನರೇಗಾ ಭ್ರಷ್ಟಾಚಾರದ ತನಿಖೆ ಶುರು

11:37 AM Oct 18, 2019 | Naveen |

ಜಗಳೂರು: ಬೆಳಗ್ಗೆಯಿಂದ ತನಿಖಾ ತಂಡದವರು ಬರುತ್ತಾರೆ ಎಂದು ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾದು ಕಾದು, ಸಂಜೆ ಇನ್ನೇನು ಮನೆಗೆ ಹೋಗೋಣ ಎನ್ನುವ ವೇಳೆ ಆಗಮಿಸಿದ ತನಿಖಾ ತಂಡದವರು ಕತ್ತಲಲ್ಲಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.

Advertisement

ತಾಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ವ್ಯಾಪಕ ಅಕ್ರಮ ನಡೆದಿರುವ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಆಯುಕ್ತರು ಒಟ್ಟು 7 ತನಿಖಾ ತಂಡಗಳನ್ನು ರಚಿಸಿದ್ದು, ಒಂದು ವಾರದೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.

ತಾಲೂಕಿನ ಹಿರೇಮಲ್ಲನಹೊಳೆ, ಮುಸ್ಟೂರು, ದೋಣಿಹಳ್ಳಿ. ಕಲ್ಲೇದೇವರಪುರ, ತೋರಣಗಟ್ಟೆ, ಬಿದರಕೆರೆ. ಬಿಸ್ತುವಳ್ಳಿ, ಗುತ್ತಿದುರ್ಗ, ಹಾಲೇಕಲ್ಲು ಗ್ರಾಮಗಳ ವ್ಯಾಪ್ತಿ ಹೊಂದಿರುವ ತನಿಖಾ ತಂಡಗಳು ಅ. 17ರಿಂದ ತನಿಖೆ ಆರಂಭಿಸಬೇಕಿತ್ತು.

ತನಿಖಾ ತಂಡಗಳು ಬರುವ ಹಿನ್ನಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಮತ್ತು ಅಧಿಕಾರಿಗಳು ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡು ಬೆಳಗ್ಗೆಯಿಂದ ಕಾಯುತ್ತಿದ್ದರೂ ಸಂಜೆಯವರೆಗೆ ತನಿಖಾ ತಂಡದ ಸುಳಿವೇ ಇರಲಿಲ್ಲ ಸಂಜೆ 6 ಗಂಟೆ ವೇಳೆ ತಾಲೂಕಿನ ಮುಸ್ಟೂರು ಗ್ರಾಮಕ್ಕೆ ಹಾಸನ ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ಮಹೇಶ್‌, ನೋಡಲ್‌ ಅಧಿಕಾರಿ ಲಕ್ಷ್ಮೀಕಾಂತ್‌, ತುಮಕೂರು ಜಿಲ್ಲಾ ಪಂಚಾಯತ್‌ನ ಡಿಎಂಐಎಸ್‌ ಮಲ್ಲಿಕಾರ್ಜುನ ಸ್ವಾಮಿ, ಚಿಕ್ಕಮಗಳೂರು ಜಿಲ್ಲಾ ಪಂಚಾಯತ್‌ನ ತಾಂತ್ರಿಕ ಸಂಯೋಜಕ ಪುನೀತ್‌ ಎ.ಎಸ್‌ ಒಳಗೊಂಡ ತಂಡ ಆಗಮಿಸಿತು. ತಂಡ ನರೇಗಾ ಯೋಜನೆಯಡಿ ನಿರ್ಮಿಸಿದ ಶಾಲಾ ಕಾಂಪೌಂಡ್‌, ರಸ್ತೆ ಸೇರಿದಂತೆ ಇತರೆ ಕಾಮಗಾರಿಗಳನ್ನು ಕತ್ತಲೆಯಲ್ಲಿಯೇ ಪರಿಶೀಲಿಸಿತು.

ತಾಲೂಕಿನ ಹಿರೇಮಲ್ಲನಹೊಳೆ, ಗುರುಸಿದ್ದಪುರ, ಕೆಚ್ಚೇನಹಳ್ಳಿ, ಹನುಮಂತಪುರ , ದಿದ್ದಿಗಿ, ಕ್ಯಾಸೇನಹಳ್ಳಿ ಗ್ರಾಮ ಪಂಚಾಯಿತಿಗಳು ಸೇರಿದಂತೆ ಬಹುತೇಕ ಗ್ರಾಂ ಪಂಚಾಯಿತಿಗಳಲ್ಲಿ ನಕಲಿ ಜಾಬ್‌ ಕಾರ್ಡ್‌ಗಳನ್ನು ಶಾಲಾ ಮಕ್ಕಳು ಮತ್ತು ಸತ್ತವರ ಹೆಸರಿನಲ್ಲಿ ಕೂಡ ಸೃಷ್ಟಿಸಿ 10 ಕೋಟಿಗೂ ಹೆಚ್ಚಿನ ಅಕ್ರಮ, ಒಂದು ಕಾಮಗಾರಿಗೆ ನಾಲ್ಕೈದು ಬಾರಿ ಬಿಲ್‌ ಪಾವತಿ, ಕೆರೆ, ಗೊಕಟ್ಟೆ ಗಳ ಹೂಳೆತ್ತದೇ ಹಣ ಗುಳುಂ, ಪಿಡಿಓ ಸಂಬಂಧಿ ವೆಂಡರ್‌ಗಳ ಖಾತೆಗೆ ಸಾಮಗ್ರಿ ವೆಚ್ಚ ಹಾಕಿಕೊಂಡು ಕೋಟಿಗಟ್ಟಲೆ ಅನುದಾನ ದುರುಪಯೋಗ ಸೇರಿದಂತೆ ಮೊದಲಾದ ದೂರುಗಳು ಜಿಲ್ಲಾ ಪಂಚಾಯಿತಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ಹೋದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸರಕಾರ ಆದೇಶ ನೀಡಿದೆ.

Advertisement

ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಶಕ ವೀರಭದ್ರಸ್ವಾಮಿ, ಎಡಿ ಶಿವಕುಮಾರ್‌, ಪಿಡಿಒ ಮತ್ತು ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next