ಮೈಸೂರು: ರಾಜ್ಯದಲ್ಲಿ ಕೈಗಾರಿಕೆಗಳು ಪುನಶ್ಚೇತನ ಗೊಂಡಿದ್ದು, ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿಯ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ತೆರವಾದ ನಂತರ ದೇಶ, ರಾಜ್ಯದಲ್ಲಿ ಕೈಗಾರಿಕೆಗಳು ಚೇತರಿಸಿಕೊಳ್ಳುತ್ತಿವೆ. ಮೊದಲಿನ ಸ್ಥಿತಿಗೆ ಬರುವ ವಿಶ್ವಾಸ, ನಿರೀಕ್ಷೆ ಮಾಡಿದಕ್ಕಿಂತ ಜಾಸ್ತಿ ಚೇತರಿಕೆ ಕಂಡಿದೆ. ದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉದ್ಯಮಿಗಳು 3 ಲಕ್ಷದ 70 ಸಾವಿರ ಕೋಟಿ ಬಂಡವಾಳ ಹೂಡಲು ಮುಂದಾಗಿದ್ದು, ಅದರಲ್ಲಿ ಕರ್ನಾಟಕದಲ್ಲಿ 1 ಲಕ್ಷದ 59 ಸಾವಿರ ಕೋಟಿ ಬಂಡವಾಳ ತೊಡಗಿಸಲಾಗುತ್ತಿದೆ. ಅಂದಾಜು ಶೇ.41ರಷ್ಟು ಬಂಡವಾಳ ಹೂಡಿಕೆ ಆಗಿರುವುದ ರಿಂದ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದೇವೆ ಎಂದು ತಿಳಿಸಿದರು.
ಲಾಕ್‌ಡೌನ್ ಜಾರಿಯಾದ ಮೇಲೆ ಕೈಗಾರಿಕೆಗಳ ಮೇಲೆ ದೊಡ್ಡ ಹೊಡೆತ ಬಿದ್ದಿದ್ದರಿಂದ ಮತ್ತೆ ಹಳೆಯ ಪರಿಸ್ಥಿತಿಗೆ ಬರುತ್ತದೋ ಅಥವಾ ಇಲ್ಲವೇ ಎನ್ನುವ ವಾತಾವರಣ ಇತ್ತು. ಆದರೆ, ಈಗ ಬಂಡವಾಳ ಹೂಡಲು ಉದ್ಯಮಿಗಳು ಹೆಚ್ಚಾಗಿ ಬರುತ್ತಿದ್ದಾರೆ ಎಂದರು.
ಕೈಗಾರಿಕೆಗಳ ಭೂ ಸಮಸ್ಯೆ ಇತ್ಯರ್ಥಕ್ಕೆ 79ಎ ಮತ್ತು ಬಿ ನಿಯಮ ಸಡಿಲಗೊಳಿಸಲಾಗಿದೆ. ಕಟ್ಟಡಗಳಿಗೆ ಎನ್‌ಓಸಿ ಕೊಡಲು ಇದ್ದ ಹಲವಾರು ನಿಯಮಗಳನ್ನು ಬದಲಾವಣೆ ಮಾಡಿ ಸರಳೀಕರಣಗೊಳಿಸಿ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಉದ್ಯಮಿಗಳು ಒಂದೇ ಕಡೆ ಅನುಮತಿ ಪಡೆಯುವುದಕ್ಕೆ ಬೇಕಾದ ಕ್ರಮಗಳನ್ನು ಕೈಗೊಂಡ ಫಲವಾಗಿ ರಾಜ್ಯದಲ್ಲಿ ಬಂಡವಾಳ ತೊಡಗಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಸಿಡಿಯ ಸತ್ಯಾಸತ್ಯತೆ ಪರಿಶೀಲಿಸಬೇಕು: ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ತಕ್ಷಣಕ್ಕೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಸಿಡಿಯ ಸತ್ಯಾಸತ್ಯತೆ ಪರಿಶೀಲಿಸಬೇಕಾಗಿದೆ. ನಾನೇನೂ ತಪ್ಪು ಮಾಡಿಲ್ಲ, ಇದೊಂದು ರಾಜಕೀಯಪ್ರೇರಿತವೆಂದು ರಮೇಶ್ ಜಾರಕಿಹೊಳಿಯೇ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರದಲ್ಲಿ ನೇರವಾಗಿ ಯಾರನ್ನೂ ತಪ್ಪಿತಸ್ಥರನ್ನಾಗಿ ಮಾಡುವುದು ಸರಿಯಲ್ಲ. ಮೊದಲು ವಿವರಣೆ ಪಡೆದುಕೊಳ್ಳಬೇಕು. ಈ ಬಗ್ಗೆ ಅವರೊಂದಿಗೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿಸಿದರು.