Advertisement

ರಾಜ್ಯ ಸರ್ಕಾರ ಮೀಸಲಾತಿ ವಿಚಾರದಲ್ಲಿ ಜನರಿಗೆ ಮೋಸ ಮಾಡಿದೆ: ಜಗದೀಶ ಶೆಟ್ಟರ

02:05 PM May 11, 2023 | Team Udayavani |

ಹುಬ್ಬಳ್ಳಿ: ಕ್ಷೇತ್ರದಲ್ಲಿನ ಸುಖ-ದುಃಖಗಳಿಗೆ ಭಾಗಿಯಾಗದೆ ಕೇವಲ ದೆಹಲಿಯಿಂದ ಟಿಕೆಟ್ ತಂದಾಕ್ಷಣ  ಗೆದ್ದೇಬಿಟ್ಟೆ ಎಂಬುದು ಭ್ರಮೆಯಾಗಲಿದೆ ಎಂದು ಹು.ಧಾ. ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ  ಟಾಂಗ್ ನೀಡಿದರು.

Advertisement

ಗುರುವಾರ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿಯವರು ನನಗೆ ಮಾಡಿರುವ ಅವಮಾನ, ಲಿಂಗಾಯತ ಸಮಾಜದವರನ್ನು ಮೂಲೆಗುಂಪು ಮಾಡುವ ಷಡ್ಯಂತ್ರವನ್ನು ಸವಾಲಾಗಿ ಸ್ವೀಕರಿಸಿ ಫೀಲ್ಡಿಗೆ ಇಳಿದಿದ್ದೆ, ಜನ ತೋರುವ ಬೆಂಬಲ ಪ್ರೋತ್ಸಾಹದಿಂದ ಸುಮಾರು 25 ರಿಂದ 30ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದರು.

ಲಿಂಗಾಯತರು, ಎಸ್ ಎಸ್ ಕೆ ಸಮಾಜ ಸೇರಿದಂತೆ ವಿವಿಧ ಸಮಾಜದವರು ನನ್ನನ್ನು ಬೆಂಬಲಿಸಿದ್ದು ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಹೊಸ ಮತದಾರರನ್ನು ನೋಂದಣಿ ಮಾಡಿಸಿದೆ,  ಅದರಲ್ಲಿಯೂ ಬಹುತೇಕರು ನನ್ನನ್ನು ಬೆಂಬಲಿಸಿದ್ದಾರೆ ಎಂದರು.

ಕ್ಷೇತ್ರದಲ್ಲಿ ನಾನು ಲೆಕ್ಕಾಚಾರ ಮಾಡಿದ್ದಕ್ಕಿಂತಲೂ ದುಪ್ಪಟ್ಟು ಪ್ರಮಾಣದ ಬೆಂಬಲ ವ್ಯಕ್ತವಾಗಿದೆ ಕಳೆದ ಆರು ಚುನಾವಣೆಗಳಲ್ಲಿ ನಾನು ಹಣ ಹಂಚಿಕೆ ಮಾಡಿರಲಿಲ್ಲ. ಆದರೆ ಬಿಜೆಪಿಯವರು ಕೆಲವು ಕಡೆಗಳಲ್ಲಿ ಹತಾಶರಾಗಿ ಹಣ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರ , ಬೆಲೆ ಏರಿಕೆ ಜನರಿಗೆ ಬೇಸರ ತರಿಸಿದೆ ಮೀಸಲಾತಿ ವಿಚಾರದಲ್ಲಿ ಜನರಿಗೊಂದು ಕೋರ್ಟ್ ಗೊಂದು  ಹೇಳಿಕೆ ನೀಡಿರುವ ಬಿಜೆಪಿಯವರು,  ಜನರಿಗೆ ಮೋಸ ಮಾಡಿದ್ದಾರೆ ಎಂದು ಆಪಾದಿಸಿದರು.

Advertisement

ಮುಖ್ಯಮಂತ್ರಿಯವರು ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ತೋರುತ್ತಾರೆಂಬ ಜನರ ನಿರೀಕ್ಷೆ ಹುಸಿಯಾಗಿದ್ದು ಕೈಗಾರಿಕೆಗಳಿಗೆ ಎರಡು ಎಕರೆ ಜಮೀನು ನೀಡಲಾಗಿಲ್ಲ ಈ ಭಾಗದ ಅಭಿವೃದ್ಧಿಗೆ ಇಚ್ಛಾ ಶಕ್ತಿ ತೋರಿಲ್ಲ ಎಂಬ ನೋವು ಜನರಲ್ಲಿದೆ ಎಂದರು.

ನಿಮ್ಮನ್ನು ಸಚಿವರನ್ನಾಗಿಸಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಶ್ರಮಿಸಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ ಏಣಿ ಹತ್ತಿ ನಿಚ್ಚಣಿಕೆ ತೆಗೆದು ಹಾಕಿದರೂ ಅಂತಾರಲ್ಲ ಅದೇ ರೀತಿಯಾಗಿದೆ. ನನ್ನ ಹಿರಿತನದ ಕಾರಣದಿಂದ ಸಚಿವ ಸ್ಥಾನ ಸಿಕ್ಕಿದೆ ಜೋಶಿಯವರು ಇತ್ತೀಚಿಗೆ ಸುಳ್ಳು ಹೇಳುವುದನ್ನು ಕಲಿತಿದ್ದಾರೆ ಎಂದೆನಿಸುತ್ತಿದೆ.

ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಸಚಿವ ಸ್ಥಾನ ದೊರಕಿಸಲು ನಾನು ಒತ್ತಡ ತಂದಿದ್ದು, ಲಾಬಿ ಮಾಡಿದ್ದು ನಿಜ, ಜೋಶಿಯವರು ಅರವಿಂದ ಬೆಲ್ಲದವರಿಗೆ ಸಚಿವ ಸ್ಥಾನ ಕೊಡಿಸಲು ಯತ್ನಿಸಿದ್ದರು ಎಂದರು.

ಲಿಂಗಾಯತ ನಾಯಕನಾದ ನನ್ನನ್ನು ಬಿಜೆಪಿಯವರು ಮೂಲೆಗುಂಪು ಮಾಡಿರುವುದು ಈ ಭಾಗದ ಸುಮಾರು 15 ರಿಂದ 20 ವಿಧಾನಸಭಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ ನಾನು ಬಿ ಎಲ್ ಸಂತೋಷ ಮತ್ತು ಪ್ರಹ್ಲಾದ ಜೋಶಿ ವಿರುದ್ಧ ಟೀಕಿಸಿದ್ದೇನೆ ವಿನಃ ಇಡೀ ಬ್ರಾಹ್ಮಣ ಸಮಾಜವನ್ನು ಅಲ್ಲ. ಚುನಾವಣೆಯಲ್ಲಿ ಬ್ರಾಹ್ಮಣ ಸಮಾಜವಾದವರು ಹೆಚ್ಚಿನ ರೀತಿಯಲ್ಲಿ ನನ್ನನ್ನು ಬೆಂಬಲಿಸಿದ್ದಾರೆ ಎಂದರು.

ಬಿಜೆಪಿ ಅವರಿಗೆ ಅಹಂಕಾರ ಬಂದಿದ್ದು ಅವರಿಗೆ ಬುದ್ಧಿ ಕಲಿಸಲು ಜನರು ತೀರ್ಮಾನಿಸಿದ್ದಾರೆ.ಸಿದ್ದರಾಮಯ್ಯ, ಡಿಕೆ ಶಿವಕುಮಾರ ಅವರ ಸಂಘಟಿತ ಯತ್ನದಿಂದ ರಾಜ್ಯದಲ್ಲಿ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು ನನ್ನ ರಾಜಕೀಯ ಅನುಭವದಲ್ಲಿ ಹೇಳುವುದಾದರೆ ಕಾಂಗ್ರೆಸ್ ನಿಶ್ಚಳ  ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next