ಹುಬ್ಬಳ್ಳಿ: ಬಿಜೆಪಿಗೆ ಜನಾದೇಶವಿದ್ದರೂ ಬಹುಮತ ಇಲ್ಲದ್ದು ನಮ್ಮ ದುರಾದೃಷ್ಟ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದರೆ ಒಂದು ವಾರದಲ್ಲೇ ಮಹಾನಗರದ ಅಭಿವೃದ್ಧಿಗೆ ಅವಶ್ಯವಿರುವ ಎಲ್ಲಾ ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿದ್ದವು ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ ಹೇಳಿದರು.
ಆರನೇ ಬಾರಿ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಇಲ್ಲಿನ ಗೋಕುಲ ಕೈಗಾರಿಕೆ ಪ್ರದೇಶದಲ್ಲಿ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಗರದ ಕೈಗಾರಿಕೆ ಪ್ರದೇಶಗಳ ಸಮಸ್ಯೆಗಳ ಕುರಿತು ಹಿಂದಿನ ರಾಜ್ಯ ಸರಕಾರಕ್ಕೆ ಮನವಿ ಮಾಡಿದ ನಂತರ ಒಂದಿಷ್ಟು ಕಾಮಗಾರಿಗಳು ನಡೆಯುತ್ತಿವೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಒಂದು ವಾರದಲ್ಲೇ ಕೈಗಾರಿಕೆ ಪ್ರದೇಶಗಳ ಸಮಸ್ಯೆಗಳು, ನಗರಕ್ಕೆ ಅವಶ್ಯವಿರುವ ಕುಡಿಯುವ ನೀರಿನ ಯೋಜನೆ ಸೇರಿದಂತೆ ಬಹುತೇಕ ಕಡತಗಳು ವಿಲೇವಾರಿಯಾಗುತ್ತಿದ್ದವು ಎಂದರು.
ಸಮ್ಮಿಶ್ರ ಸರಕಾರದ ಜಂಜಾಟಗಳು ಇನ್ನೂ ಮುಗಿದಿಲ್ಲ. ಆರ್.ವಿ. ದೇಶಪಾಂಡೆಯವರು ಕೈಗಾರಿಕಾ ಮಂತ್ರಿಯಾದರೆ
ಇಲ್ಲಿನ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ದೊರೆಯಲಿದೆ. ಇಲ್ಲಿನ ಸಮಸ್ಯೆಗಳ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳ
ಗಮನಕ್ಕೆ ತಂದರೂ ಯಾವುದಾದರೂ ಒಂದು ತಾಂತ್ರಿಕ ನೆಪ ಹುಡುಕಿ ಕಡತ ವಿಲೇವಾರಿ ಮಾಡುವುದಿಲ್ಲ. ನಿಷ್ಠೆಯಿಂದ ಕೆಲಸ ಮಾಡುವ ಮನಸ್ಥಿತಿ ಅಧಿಕಾರಿಗಳಲ್ಲಿ ಕಡಿಮೆಯಾಗುತ್ತಿದೆ. ಮಹಾನಗರ ಪಾಲಿಕೆ ಆಯುಕ್ತರು ಪಾಲಿಕೆ ಕಾರ್ಯಗಳ ಸೂಕ್ತ ನಿರ್ವಹಣೆಗೆ ಮುಂದಾಗುತ್ತಿಲ್ಲ. ಇತ್ತೀಚೆಗೆ ಮೂರ್‍ನಾಲ್ಕು ಸಭೆಗಳಿಗೆ ಆಹ್ವಾನ ನೀಡಿದರೂ ಬರಲಿಲ್ಲ. ಇಂತಹ ಅಧಿಕಾರಿಗಳಿಂದ ಕೆಲಸ ನಿರೀಕ್ಷಿಸಲು ಸಾಧ್ಯವೇ? ಎಂದರು.
ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ವಿಶ್ವನಾಥ ಗೌಡರ ಮಾತನಾಡಿ, ಎಂ.ಟಿ. ಸಾಗರ ಕೈಗಾರಿಕೆ ಪ್ರದೇಶದ 72 ಉದ್ದಿಮೆದಾರರಿಗೆ ಖರೀದಿ ಪತ್ರ ವಿತರಿಸುವುದು, ಗೋಕುಲ ಕೈಗಾರಿಕೆ ಪ್ರದೇಶದಲ್ಲಿ ಮೂಲ ಸೌಲಭ್ಯ, ಔದ್ಯೋಗಿಕ ವಸಹಾತುಗಳ ತೆರಿಗೆ ಗೊಂದಲ ಬಗೆಹರಿಸುವುದು, ಸಕಾಲಕ್ಕೆ ಕೈಗಾರಿಕಾ ಅದಾಲತ್ ಸೇರಿದಂತೆ ಇತರೆ ಸಮಸ್ಯೆಗಳಿಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಲ್ಪಿಸಸಲು ಮನವಿ ಮಾಡಿದರು. ಮಹೇಶ ಬುರ್ಲಿ, ಅಶೋಕ ಕಲಬುರ್ಗಿ, ನಾಗರಾಜ ದಿವಟೆ, ಮಲ್ಲೇಶ ಜಾಡರ, ಮನೋಹರ ಕೊಟ್ಟೂರಶೆಟ್ಟರ, ವಿಜಯ ಹಟ್ಟಿಹೊಳಿ ಇದ್ದರು.