ಅಧಿಕಾರ ಇದ್ದಾಗ ಹಿಗ್ಗುವ, ಅಧಿಕಾರ ಇಲ್ಲದಾಗ ಕುಗ್ಗುವ, ಅಹಂಕಾರ ತೋರುವ ಜಾಯಮಾನ ಇವರದ್ದಲ್ಲ. ಅದೇನಿದ್ದರೂ ಸಮಚಿತ್ತ ಭಾವ, ಶಾಂತ ಸ್ವಭಾವ, ಪಕ್ಷ ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸಿದವರು, ಪಕ್ಷ ನಿಷ್ಠೆಗೆ ಬದ್ಧತೆಯ ಅಚ್ಚೊತ್ತಿದವರು, ರಾಜ್ಯ ರಾಜಕೀಯ ಧ್ರುವೀಕರಣಕ್ಕೆ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬಲವರ್ಧನೆಗೆ ತಮ್ಮದೇ ಕೊಡುಗೆ ನೀಡಿದವರು, ಸಂಘ ಶಿಸ್ತು ಮೈಗೂಡಿಸಿಕೊಂಡು, ಸಾಮಾನ್ಯ ಕಾರ್ಯಕರ್ತನಿಂದ ವಿಧಾನಸಭೆ ವಿಪಕ್ಷ ನಾಯಕ, ಸಚಿವ, ಸ್ಪೀಕರ್, ಮುಖ್ಯಮಂತ್ರಿ ಹೀಗೆ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು, ಗ್ರಾಮೀಣಾಭಿವೃದ್ಧಿ, ಉದ್ಯಮ ಅಭಿವೃದ್ಧಿ ದೃಷ್ಟಿಯಿಂದ ತಮ್ಮದೇ ಕೊಡುಗೆ ನೀಡಿದವರು, ಆರು ಬಾರಿ ಆಯ್ಕೆ ಮಾಡಿ ಆಶೀರ್ವಾದ ನೀಡಿದ ಕ್ಷೇತ್ರದ ಜನತೆ, ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಗಾಢ ಸಂಬಂಧ-ಬಾಂಧವ್ಯ ಹೊಂದಿದವರು.
-ಇದು, ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ಒಟ್ಟಾರೆ ವ್ಯಕ್ತಿತ್ವ. ರಾಜ್ಯ ರಾಜಕಾರಣದಲ್ಲಿ ತಮ್ಮದೇ ಪ್ರಭಾವ, ಸಾಧನೆಯ ಛಾಪು ಮೂಡಿಸಿರುವ ಅವರು, ಸೌಮ್ಯ ವ್ಯಕ್ತಿತ್ವ, ಸರಳತೆ, ಸಹನೆ, ತಾಳ್ಮೆ, ಕಠಿಣನ ನಿಲುವಿನ ಪಕ್ಷ ನಿಷ್ಠೆಯೊಂದಿಗೆ ರಾಜಕೀಯ ಕ್ಷೇತ್ರದಲ್ಲಿ ಮಾದರಿಯಾಗಿದ್ದಾರೆ. ವ್ಯಕ್ತಿಗತ ಅಥವಾ ಕೀಳುಮಟ್ಟದ ಟೀಕೆಗಳಿಗೆ ಅವಕಾಶ ನೀಡದೆ ರಚನಾತ್ಮಕ ಟೀಕೆಗಳನ್ನು ಮಾಡುವ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಶೆಟ್ಟರ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ವಿಚಾರ ನಿಧಾನಕ್ಕೆ ಕಾವು ಪಡೆಯುತ್ತಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸದ್ದು ನಿಧಾನಕ್ಕೆ ಜೋರಾಗ ತೊಡಗಿದೆ. ಅಧಿಕಾರ ಹಿಡಿಯುವ ವಿಚಾರದಲ್ಲಿ ಆಡಳಿತ-ವಿಪಕ್ಷಗಳು ನಮ್ಮದೇ ಮುಂದಿನ ಅಧಿಕಾರ ಎಂಬ ಘೋಷಣೆ ಮೊಳಗುತ್ತಿವೆ. ಇಂತಹ ಸನ್ನಿವೇಶದಲ್ಲಿ ರಾಜ್ಯ ರಾಜಕೀಯ, ತಮಗೆ ದೊರೆತ ಅವಕಾಶಗಳನ್ನು ಅಭಿವೃದ್ಧಿಗೆ ಪೂರಕವಾಗಿ, ಉತ್ತರ ಕರ್ನಾಟಕ ಬೆಳವಣಿಗೆಗಾಗಿ ಬಳಕೆ ಮಾಡಿದ ಬಗೆ, ಪಕ್ಷ ಸಂಘಟನೆ, ಬಲವರ್ಧನೆಗೆ ತೋರಿದ ಕಾರ್ಯ, ಪ್ರಧಾನಿ ನರೇಂದ್ರ ಮೋದಿಯವರ ಪ್ರೇರಣೆ, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯುತ್ತದೆ ಎಂಬ ವಿಶ್ವಾಸ ಇನ್ನಿತರೆ ವಿಷಯವಾಗಿ ಜಗದೀಶ ಶೆಟ್ಟರ ಅವರು “ಉದಯವಾಣಿ’ಯೊಂದಿಗೆ ತಮ್ಮ ಮನದಾಳದ ಹಲವು ಅನಿಸಿಕೆಗಳನ್ನು ಅನೌಪಚಾರಿಕವಾಗಿ ಹಂಚಿಕೊಂಡರು.
ಸಂಘ ಶಿಸ್ತು-ಸಂಘದ ಮಾರ್ಗದರ್ಶನದಲ್ಲಿ ಸಾಗಿ ಬಂದಿರುವ ಅವರು, ಅಧಿಕಾರ ಇರಲಿ, ಇಲ್ಲದಿರಲಿ ಜನಪರ ಧ್ವನಿ ಕ್ಷೀಣಿಸಬಾರದು ಎಂಬ ಸಂಘದ ಮಾರ್ಗದರ್ಶನವನ್ನು ಇಂದಿಗೂ ಚಾಚೂ ತಪ್ಪದೇ ಪಾಲಿಸಿಕೊಂಡು ಬಂದವರಾಗಿದ್ದು, ಸಮಚಿತ್ತದಿಂದಲೇ ಸಾಗಿದ್ದಾರೆ.
ಪಕ್ಷ ಬದ್ಧತೆಯೇ ಶ್ರೀರಕ್ಷೆ; ಸಂಘ ಶಿಸ್ತು-ತಾಳ್ಮೆ ಹಲವು ಶೆಟ್ಟರ ಅವರಿಗೆ ಅವಕಾಶಗಳನ್ನು ಸೃಷ್ಟಿಸುವಂತೆ ಮಾಡಿತ್ತು. ಸಾಮಾನ್ಯ ಕಾರ್ಯಕರ್ತರಾಗಿದ್ದ ಅವರನ್ನು ಪಕ್ಷ ಗುರುತಿಸಿ ಹಲವು ಅವಕಾಶ-ಜವಾಬ್ದಾರಿಗಳನ್ನು ನೀಡಿದಾಗ ಅಷ್ಟೇ ಗೌರವ, ಬದ್ಧತೆಯಿಂದ ಅವುಗಳನ್ನು ನಿಭಾಯಿಸಿದ, ನಂಬಿದ ಜನತೆ, ಅವಕಾಶ ನೀಡಿದ ಪಕ್ಷಕ್ಕೆ ಒಳಿತಾಗುವ ಕಾರ್ಯ ಮಾಡುತ್ತ ಬಂದಿರುವುದೇ ಅವರು ರಾಜಕೀಯವಾಗಿ ಒಂದೊಂದೇ ಸಾಧನೆಯ ಮೆಟ್ಟಿಲು ಏರುವುದಕ್ಕೆ ಸಾಧ್ಯವಾಯಿತು. ಎಸ್.ಎಂ.ಕೃಷ್ಣ ಸರಕಾರದಲ್ಲಿ ವಿಧಾನಸಭೆ ವಿಪಕ್ಷ ನಾಯಕನಾಗಿ ಕಾರ್ಯ ನಿರ್ವಹಿಸಿದ್ದ ಶೆಟ್ಟರ, ಸರಕಾರದ ವಿರುದ್ಧ ರಚನಾತ್ಮಕವಾಗಿ ವಿಪಕ್ಷವಾಗಿ ಗಟ್ಟಿಧ್ವನಿ, ಹೋರಾಟ ತೋರುವಲ್ಲಿ ಯಶಸ್ವಿಯಾಗಿದ್ದರು. ವಿಶೇಷವಾಗಿ ತೆಲಗಿ ಪ್ರಕರಣದ ಛಾಪಾ ಕಾಗದ ಹಗರಣ ಕುರಿತಾಗಿ ಸದನದೊಳಗೆ, ಹೊರಗೆ ನಡೆಸಿದ ಹೋರಾಟ ಅಂದಿನ ಸರಕಾರಕ್ಕೆ ದೊಡ್ಡ ಪೆಟ್ಟು ಕೊಟ್ಟಿತ್ತಲ್ಲದೆ, ಸರಕಾರಕ್ಕೆ ದೊಡ್ಡ ಮುಜುಗರ ತಂದೊಡ್ಡಿ, ಕೆಲವರ ತಲೆದಂಡಕ್ಕೂ ಕಾರಣವಾಗಿತ್ತು.
ಮುಂದೆ ಎಸ್.ಎಂ.ಕೃಷ್ಣ ಅವರು ಅವಧಿಗೆ ಮುನ್ನ ಚುನಾವಣೆಗೆ ಮುಂದಾದಾಗ ಉತ್ತರ ಕರ್ನಾಟಕದಲ್ಲಿನ ಜನತಾ ಪರಿವಾರದ ಹಲವರನ್ನು ಪಕ್ಷಕ್ಕೆ ಕರೆ ತರುವಲ್ಲಿ ಶೆಟ್ಟರ ಪ್ರಮುಖ ಪಾತ್ರ ವಹಿಸಿದ್ದರು. ಉತ್ತರದಲ್ಲಿ ಪಕ್ಷ ಬಲವರ್ಧನೆ ಶ್ರಮಿಸಿದ್ದರು. ಮುಂದೆ ಇದು ಪಕ್ಷವನ್ನು ಅಧಿಕಾರಕ್ಕೆ ತರುವ ಮಟ್ಟಿಗೆ ಶಕ್ತಿ ತುಂಬುವ ಕೆಲಸ ಮಾಡಿತ್ತು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲೂ ಶೆಟ್ಟರ ಅವರು, ವಿಧಾನಸಭೆ ವಿಪಕ್ಷ ನಾಯಕನಾಗಿದ್ದರು. ಅಂದಿನ ಸರಕಾರದ ವೈಫಲ್ಯಗಳು, ಅರ್ಕಾವತಿ ಬಡಾವಣೆ ಅಕ್ರಮ, ಅಧಿಕಾರಿಗಳ ಆತ್ಮಹತ್ಯೆ, ಜನವಿರೋಧಿ ನೀತಿಗಳ ವಿರುದ್ಧ ದೊಡ್ಡಮಟ್ಟದ ಹೋರಾಟ ಕೈಗೊಂಡಿದ್ದರಲ್ಲದೆ, ಹಲವರ ತಲೆದಂಡಕ್ಕೂ ಕಾರಣವಾಗಿದ್ದರು. ವಿಧಾನಸಭೆ ವಿಪಕ್ಷ ನಾಯಕನಾಗಿದ್ದಾಗ ಬಹುತೇಕ ಎಲ್ಲ ಜಿಲ್ಲೆಗಳಿಗೆ, ಅನೇಕ ತಾಲೂಕುಗಳಿಗೆ ಭೇಟಿ ನೀಡಿದ್ದ ಶೆಟ್ಟರ, ಜನರ ಸಮಸ್ಯೆ ಆಲಿಸುವುದು, ಸರಕಾರ ವೈಫಲ್ಯಗಳನ್ನು ಗಮನಿಸುವ ಕಾರ್ಯ ಮಾಡಿದ್ದರು. ಅದು ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬಗೆಗಿನ ನಿಲುವು ಬದಲಾಯಿಸುವಂತೆ ಮಾಡಿತ್ತು. ಪಕ್ಷದ ಕಡೆ ಹಲವರ ಒಲವು ಹೆಚ್ಚುವಂತೆ ಮಾಡಿತ್ತು.
ಪಕ್ಷದ ರಾಜ್ಯಾಧ್ಯಕ್ಷ ಜವಾಬ್ದಾರಿ ನೀಡಿದಾಗಲೂ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದರು.
ಉತ್ತರ ಕರ್ನಾಟಕದಲ್ಲಿ ಪಕ್ಷ ಬಲವರ್ಧನೆ, ಸಂಘಟನೆಗೆ ಗಟ್ಟಿಗೊಳಿಸುವಿಕೆ, ಪಕ್ಷದಿಂದ ವಿಧಾನಸಭೆ-ಲೋಕಸಭೆ ಕ್ಷೇತ್ರಗಳಿಗೆ ಸ್ಪರ್ಧೆಗಳು ಅಭ್ಯರ್ಥಿಗಳು ದೊರೆಯುತ್ತಿಲ್ಲ ಎಂಬ ಸ್ಥಿತಿಯಲ್ಲಿ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆಗಿಳಿಯುವಂತೆ, ವಿಧಾನಸಭೆ-ಲೋಕಸಭೆ ಕ್ಷೇತ್ರಗಳಿಗೆ ಒಂದೊಂದು ಕ್ಷೇತ್ರದಲ್ಲಿ ಮೂರ್‍ನಾಲ್ಕು ಜನರು ಪೈಪೋಟಿಗಿಳಿಯವಂತೆ ಪಕ್ಷ ಬಲವರ್ಧಗೊಳಿಸುವಲ್ಲಿ ಕೊಡುಗೆ ನೀಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಎಂದರೆ ಮೂಗು ಮುರಿಯುವ ಸ್ಥಿತಿ ಇತ್ತು. ಇಂದು ಪಕ್ಷವೆಂದರೆ ನಾ ಮುಂದು ತಾ ಮುಂದು ಎನ್ನುವಂತೆ ಮುಖಂಡರು, ನಾಯಕರು ಬರುವಂತಾಗಿದೆ. ಬೂತ್ ಮಟ್ಟದಿಂದಲೂ ಕಾರ್ಯಕರ್ತರ ಪಡೆ ಸನ್ನದ್ಧಗೊಂಡಿದೆ.
ಆರು ಬಾರಿ ಗೆಲುವಿನ ಆಶೀರ್ವಾದ
ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿದ್ದ ಶೆಟ್ಟರ ಅವರನ್ನು ಪಕ್ಷ ವಿಧಾನಸಭೆ ಸ್ಪರ್ಧೆಗೆ ಮುಂದಾಗುವಂತೆ ಸೂಚಿಸಿತ್ತು. 1994ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿ, ರಾಜಕೀಯ ಘಟಾನುಘಟಿಗಳನ್ನು ಮಣಿಸಿ ವಿಧಾನಸಭೆ ಪ್ರವೇಶಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಸತತ ಆರು ಬಾರಿ ಕ್ಷೇತ್ರದ ಮತದಾರರು ಶೆಟ್ಟರ ಅವರಿಗೆ ಗೆಲುವಿನ ಆಶೀರ್ವಾದ ನೀಡುತ್ತಲೇ ಬಂದಿದ್ದಾರೆ. ಅಷ್ಟರ ಮಟ್ಟಿಗೆ ಕ್ಷೇತ್ರ, ಮತದಾರರೊಂದಿಗೆ ಅವಿನಾಭಾವ ಸಂಬಂಧ-ಬಾಂಧವ್ಯ ಅವರದ್ದು.ಕಂದಾಯ, ಗ್ರಾಮೀಣಾಭಿವೃದ್ಧಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹೀಗೆ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ, ಸಾಧನೆ ತೋರಿದ ಕೀರ್ತಿ ಶೆಟ್ಟರ ಅವರದ್ದಾಗಿದೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದಾಗ ನರೇಗಾ ಸೇರಿದಂತೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚು ವೇಗ ನೀಡಿದ್ದರು. ಜತೆಗೆ ಸುಮಾರು 1,300 ಪಿಡಿಒ ಹುದ್ದೆಗಳನ್ನು ಪಾರದರ್ಶಕವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ತೋರಿದ ಸಾಧನೆ, ಪ್ರಗತಿಗೆ ಮೆಚ್ಚಿದ್ದ ಅಂದಿನ ಕೇಂದ್ರ ಸರಕಾರ ಮೂರು ಬಾರಿ ಅತ್ಯುತ್ತಮ ಸಾಧನೆ ಪ್ರಶಸ್ತಿಯನ್ನು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ನೀಡಿತ್ತು. ವಿಧಾನಸಭೆ ಸ್ಪೀಕರ್ ಆಗುವಂತೆ ಪಕ್ಷ ಸೂಚಿಸಿದಾಗ ಹುದ್ದೆ ಒಪ್ಪಿಕೊಂಡಿದ್ದ ಶೆಟ್ಟರ ಅವರು, ಪಕ್ಷ ರಾಜಕಾರಣದಿಂದ ದೂರವಿದ್ದರೆ ವಿನಃ, ಅಭಿವೃದ್ಧಿ ವಿಚಾರದಲ್ಲಿ ಮೊದಲಿದ್ದ ರೀತಿಯಲ್ಲೇ ಸಕ್ರಿಯರಾಗಿ ಕಾರ್ಯ ನಿರ್ವಹಿಸಿದ್ದರು. ಕ್ಷೇತ್ರ, ಉತ್ತರ ಕರ್ನಾಟಕದ ಅಭಿವೃದ್ಧಿ ನಿಟ್ಟಿನಲ್ಲಿ ಸಚಿವರಿಗೆ ಸೂಚನೆ, ಅಧಿಕಾರಿಗಳೊಂದಿಗೆ ಚರ್ಚೆ, ಪ್ರಗತಿ ಪರಿಶೀಲನೆ ಕಾರ್ಯ ಮಾಡಿದ್ದರು. ಸ್ಪೀಕರ್ ಆಗಿ ವಿಧಾನಸಭೆ ಸದಸ್ಯರಿಗೆ ಸದನ ನಿಯಮಾವಳಿ, ವರ್ತನೆ ಇನ್ನಿತರೆ ವಿಷಯಗಳ ಕುರಿತಾಗಿ ತರಬೇತಿ ಕಾರ್ಯ ಕೈಗೊಂಡಿದ್ದರು. ಅಂದಿನ ರಾಷ್ಟ್ರಪತಿ ಡಾ|ಎಪಿಜೆ ಅಬ್ದುಲ್ ಕಲಾಂ ಅವರು ತರಬೇತಿ ಕಾರ್ಯಾಗಾರ ಉದ್ಘಾಟಿಸಿದ್ದರು.
ಉದ್ಯಮ ರಂಗಕ್ಕೆ ಹೊಸರೂಪ.. ಬಿಯಾಂಡ್ ಬೆಂಗಳೂರಿಗೆ ಶಕ್ತಿ..
ಜಗದೀಶ ಶೆಟ್ಟರ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿ ಹಲವು ಹೊಸತನಗಳಿಗೆ ಕಾರಣರಾಗಿದ್ದಾರೆ. ಮುಖ್ಯವಾಗಿ ಉತ್ತರ ಕರ್ನಾಟಕದಲ್ಲಿ ಉದ್ಯಮರಂಗ ಬಲವರ್ಧನೆ ನಿಟ್ಟಿನಲ್ಲಿ ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಹೊಸ ಉದ್ಯಮ ನೀತಿ, ಎಫ್‌ಎಂಸಿಜಿ ಕ್ಲಸ್ಟರ್, ಟಾಯ್ ಕ್ಲಸ್ಟರ್, ಫಾರ್ಮಾ ಪಾರ್ಕ್ ಹೀಗೆ ಉದ್ಯಮ ಬೆಳವಣಿಗೆ ಕಾರ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿದ್ದ ಶೆಟ್ಟರ ಅವರು, ಉದ್ಯಮ ಆರಂಭಕ್ಕೆ ಸುಲಭವಾಗುವಂತೆ ನಿಯಮ-ಪರವಾನಗಿ ಕ್ರಮಗಳನ್ನು ಸರಳಗೊಳಿಸಿದ್ದರು.
ಏಕಗವಾಕ್ಷಿ ವ್ಯವಸ್ಥೆಗೆ ಶಕ್ತಿ ತುಂಬಿದ್ದರು. ರಾಜ್ಯಕ್ಕೆ ಉದ್ಯಮದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಇನ್ವೆಸ್ಟ್ ಕರ್ನಾಟಕ ಪರಿಕಲ್ಪನೆಯಡಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಕರೆದುಕೊಂಡು, ಹೈದ್ರಾಬಾದ್, ಮುಂಬೈ, ಪುಣೆ, ಆಸ್ಸಾಂ ಇನ್ನಿತರೆ ಕಡೆಗಳಲ್ಲಿ ರೋಡ್ ಶೋ ನಡೆಸುವ ಮೂಲಕ ಉದ್ಯಮದಾರರನ್ನು ಆಕರ್ಷಿಸುವ ಕಾರ್ಯ ತೋರಿದ್ದರು. ಇನ್ವೆಸ್ಟ್ ಕರ್ನಾಟಕ ಅಡಿಯಲ್ಲಿ ಉದ್ಯಮದಾರರ ಸಮಾವೇಶ ನಡೆಸಿ ಬಂಡವಾಳ ಹೂಡಿಕೆಗೆ ವೇದಿಕೆ ಕಲ್ಪಿಸಿದ್ದರು. ಇದರ ಫಲವಾಗಿ ಬಿಯಾಂಡ್ ಬೆಂಗಳೂರು ರೂಪದಲ್ಲಿ ಯಾದಗಿರಿ, ಕೊಪ್ಪಳ, ಧಾರವಾಡ ಇನ್ನಿತರೆ ಜಿಲ್ಲೆಗಳಲ್ಲಿ ಹೂಡಿಕೆ, ಉದ್ಯಮಗಳ ನೆಲೆಗೊಳ್ಳುವಿಕೆಗೆ ಶುಭಾರಂಭ ಮಾಡಿದ್ದವು.
ಕೊಪ್ಪಳದಲ್ಲಿ ಆಟಿಕೆ ಸಾಮಗ್ರಿ, ಗೊಂಬೆಗಳ ತಯಾರಿಕೆ ನಿಟ್ಟಿನಲ್ಲಿ ಏಕಸ್ ಕಂಪೆನಿ ಮನವೊಲಿಸಿ ಅಲ್ಲಿ ಟಾಯ್ ಕ್ಲಸ್ಟರ್ ಆರಂಭಕ್ಕೆ ಕೈಗಾರಿಕಾ ಸಚಿವರಾಗಿ ಹೆಚ್ಚು ಆಸಕ್ತಿ ತೋರಿದ್ದರಲ್ಲದೆ ಅಗತ್ಯವಿರುವ ಎಲ್ಲ ಪ್ರೋತ್ಸಾಹ-ಸಹಕಾರ ನೀಡಿದ್ದರು. ಇನ್ನು ಯಾದಗಿರಿ ಜಿಲ್ಲೆಯ ಕಡೇಚೂರ ಕೈಗಾರಿಕಾ ವಸಹಾತುನಲ್ಲಿ ಸುಮಾರು 1 ಸಾವಿರ ಎಕರೆಯಲ್ಲಿ ಫಾರ್ಮಾ ಪಾರ್ಕ್ ಸ್ಥಾಪನೆಗೆ ಸಾಕಷ್ಟು ಶ್ರಮಿಸಿದ್ದರು. ಹೈದಾರಾಬಾದ್ ಇನ್ನಿತರೆ ಕಡೆಯ ಔಷಧ ತಯಾರಿಕಾ ಕಂಪೆನಿಗಳು ಕಡೇಚೂರನಲ್ಲಿ ನೆಲೆಗೊಳ್ಳುವಂತಾಗುವುದಕ್ಕೆ ಕಾಣರಾಗಿದ್ದಾರೆ.ದಕ್ಷಿಣ ಭಾರತದ ಮೊಟ್ಟ ಮೊದಲ ಎಫ್‌ಎಂಸಿಜಿ ಕ್ಲಸ್ಟರ್ ಸ್ಥಾಪನೆ ರುವಾರಿ ಜಗದೀಶ ಶೆಟ್ಟರ ಎಂದರೆ ತಪ್ಪಾಗಲಾರದು. ಎಫ್‌ಎಂಸಿಜಿ ಕ್ಲಸ್ಟರ್ ಸ್ಥಾಪನೆ ನಿಟ್ಟಿನಲ್ಲಿ 2019ರಲ್ಲಿ ಉದ್ಯಮಿ ಉಲ್ಲಾಸ ಕಾಮತ್ ನೇತೃತ್ವದಲ್ಲಿ ವಿಜನ್ ಗ್ರುಪ್ ರಚಿಸಿ ಅದರಿಂದ ವರದಿ ಪಡೆದಿದ್ದರಲ್ಲದೆ, ಅದರ ಅನುಷ್ಠಾನ ನಿಟ್ಟಿನಲ್ಲಿ ತ್ವರಿತ ಕ್ರಮಕ್ಕೂ ಮುಂದಾಗಿದ್ದರು.
ಧಾರವಾಡದ ಮಮ್ಮಿಗಟ್ಟಿ ಬಳಿ ಸುಮಾರು 200 ಎಕರೆ ಭೂಮಿಯನ್ನು ಎಫ್‌ಎಂಸಿಜಿ ಕ್ಲಸ್ಟರ್‌ಗೆಂದೇ ಮೀಸಲಿರಿಸಿದ್ದರು. ಕೆಲವೊಂದು ತಾಂತ್ರಿಕ ತೊಂದರೆಯಿಂದ ಎಫ್ ಎಂಸಿಜಿ ಕ್ಲಸ್ಟರ್ ಸ್ಥಾಪನೆ ವಿಳಂಬವಾಗಿತ್ತಾದರೂ ಇದೀಗ ಕ್ಲಸ್ಟರ್ ವಿಧ್ಯುಕ್ತವಾಗಿ ಚಾಲನೆ ಪಡೆದಿದೆ. ಇದರ ಕೊಡುಗೆಯಲ್ಲಿ ಮಹತ್ವದ ಪಾಲು ಶೆಟ್ಟರದ್ದಾಗಿದೆ. ಧಾರವಾಡದ ಮಮ್ಮಿಗಟ್ಟಿಯಲ್ಲಿ ಏಕಸ್ ಕಂಪೆನಿ ತಯಾರಿಕಾ ಘಟಕ, ಯುಫ್ಲೆಕ್ಸ್ ಉದ್ಯಮ ಸೇರಿದಂತೆ ಹಲವಾರು ಉದ್ಯಮಗಳನ್ನು ಕರೆತರುವಲ್ಲಿ ಶ್ರಮಿಸಿದ್ದಾರೆ.
23 ಸಾವಿರ ಕುಟುಂಬಗಳಿಗೆ ಬದುಕು
ವಿಧಾನಸಭೆ ಚುನಾವಣೆಗೆ ಇನ್ನು 12-13 ತಿಂಗಳು ಇದೆ ಎನ್ನುವಾಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜಗದೀಶ ಶೆಟ್ಟರ ಅವರಿಗೆ ಮುಖ್ಯಮಂತ್ರಿ ಪಟ್ಟ ಲಭಿಸಿತ್ತು. ಇದ್ದ ಅಲ್ಪ ಅವಧಿಯಲ್ಲಿಯೇ ಹಲವು ಹೊಸತನಗಳಿಗೆ ನಾಂದಿಯಾಡಿದ್ದರು. ಎದುರಾದ ಹಲವು ಸಂಕಷ್ಟ, ಪಕ್ಷಗೊಳಗಿನ ಆಂತರಿಕ ಬಿಕ್ಕಟ್ಟು, ಜಲ ವಿವಾದ ಇನ್ನಿತರೆ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಛಾತಿ ತೋರಿದ್ದರು. ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ ಅವರು ಹಲವಾರು ವರ್ಷಗಳಿಂದ ಸೇವೆ ಕಾಯಂಗೆ ಬೇಡಿಕೆ ಇರಿಸಿದ್ದ, ನಿರಂತರ ಹೋರಾಟ ಮಾಡುತ್ತ ಬಂದಿದ್ದ ಸುಮಾರು 23 ಸಾವಿರ ದಿನಗೂಲಿ ನೌಕರರನ್ನು ಕಾಯಂಗೊಳಿಸುವ ಐತಿಹಾಸಿಕ ನಿರ್ಣಯದೊಂದಿಗೆ ಸುಮಾರು 23 ಸಾವಿರ ಕುಟುಂಬಗಳ ಬದುಕಿಗೆ ಭದ್ರತೆ ಒದಗಿಸುವ, ಬೆಳಕು ತೋರುವ ಕಾರ್ಯ ಮಾಡಿದ್ದರು.
ಸೇವೆ ಕಾಯಂ ಭಾಗ್ಯ ಪಡೆದ ಕುಟುಂಬಗಳು ಇಂದಿಗೂ ಶೆಟ್ಟರ ಅವರ ಕಾರ್ಯವನ್ನು ಸ್ಮರಿಸುತ್ತಿದ್ದು, ಧನ್ಯತಾ ಭಾವ ತೋರುತ್ತಿವೆ. ಹೊಸ ಜಿಲ್ಲೆ ಘೋಷಿಸುವುದೇ ಕಷ್ಟ ಅದಕ್ಕೆ ಇಚ್ಛಾಶಕ್ತಿ ಇರಬೇಕು, ಇನ್ನೂ ಹೊಸ ತಾಲೂಕುಗಳ ಘೋಷಣೆ ಇನ್ನೂ ಕಷ್ಟದ ಕಾರ್ಯ ಎಂದೇ ಹೇಳಲಾಗುತ್ತದೆ. ಆದರೆ ಜಗದೀಶ ಶೆಟ್ಟರ ಅವರು ಮುಖ್ಯಮಂತ್ರಿಯಾಗಿದ್ದಾಗ 43 ಹೊಸ ತಾಲೂಕುಗಳನ್ನು ಘೋಷಣೆ ಮಾಡಿದ್ದರು. ಆಡಳಿತಾತ್ಮಕ-ಕಾನೂನಾತ್ಮಕ ತೊಂದರೆಯಾದೀತೆಂಬ ಅಧಿಕಾರಿಗಳ ಅನಿಸಿಕೆಗಳನ್ನು ಬದಿಗೊತ್ತಿ, ಐತಿಹಾಸಿಕ ತಾಣ, ಕಿತ್ತೂರು ರಾಣಿ ಚನ್ನಮ್ಮನ ಪುಣ್ಯಭೂಮಿ ಕಿತ್ತೂರು ಒಂದನ್ನೇ ತಾಲೂಕೆಂದು ಘೋಷಣೆ ಮಾಡಿ, ಅದನ್ನು ತಾಲೂಕು ಆಗಿಸುವಲ್ಲಿ ಯಶಸ್ವಿಯಾಗಿದ್ದರು.
ರೈತರ 25 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ್ದರಲ್ಲದೆ, ಚಾಮರಾಜನಗರ ಜಿಲ್ಲೆಗೆ ಹೋದರೆ ಮುಖ್ಯಮಂತ್ರಿಯಾಗಿದ್ದವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಹುಸಿಗೊಳಿಸುವ ನಿಟ್ಟಿನಲ್ಲಿ ನಾಲ್ಕು ಬಾರಿ ಅಲ್ಲಿಗೆ ಭೇಟಿ ನೀಡಿದ್ದರು.ಜಗದೀಶ ಶೆಟ್ಟರ ಅವರು ಪಕ್ಷಕ್ಕೆ ನಿಷ್ಠರಾಗಿ, ಬದ್ಧ ಕಾರ್ಯಕರ್ತರಾಗಿ, ಪಕ್ಷ ವಹಿಸಿದ ವಿವಿಧ ಅವಕಾಶಗಳನ್ನು ಅಧಿಕಾರ ಎಂದು ಅಹಂಕಾರ ತೋರದೆ, ದೊರೆತ ಜವಾಬ್ದಾರಿ ಎಂದು ಸೇವಾ ಬದ್ಧತೆ ತೋರಿದವರು. ಕ್ಷೇತ್ರದ ಜತೆಗೆ ಹುಬ್ಬಳ್ಳಿ-ಧಾರವಾಡ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದವರಾಗಿದ್ದಾರೆ.
ತುಪ್ಪರಿ-ಬೆಣ್ಣೆಹಳ್ಳ ಅಭಿವೃದ್ಧಿಗೆ ಕೊಡುಗೆ
ಜಗದೀಶ ಶೆಟ್ಟರ ಅವರು ಬೆಣ್ಣೆಹಳ್ಳ,-ಡೋಣಿ ನದಿ ಅಭಿವೃದ್ಧಿ ನಿಟ್ಟಿನಲ್ಲಿ ಪರಮಶಿವಯ್ಯ ಅವರ ನೇತೃತ್ವದ ಸಮಿತಿ ರಚಿಸಿ ಅಧ್ಯಯನ ನಡೆಸಿ ವರದಿ ಪಡೆದಿದ್ದರು. ಪರಮಶಿವಯ್ಯ ಅವರ ವರದಿಯಲ್ಲಿ ಉಲ್ಲೇಖೀಸಿದ, ಶಿಫಾರಸ್ಸು ಮಾಡಿದಂತೆ ಇದೀಗ ತುಪ್ಪರಿ ಹಳ್ಳ, ಬೆಣ್ಣೆಹಳ್ಳದ ಅಭಿವೃದ್ಧಿಗೆ ಸರಕಾರ ಕ್ರಮ ಕೈಗೊಂಡಿದೆ. ತುಪ್ಪರಿಹಳ್ಳ-ಬೆಣ್ಣೆಹಳ್ಳಗಳ ಪ್ರವಾಹ ತಡೆ ಜತೆಗೆ ದೊರೆಯುವ ನೀರು ನೀರಾವರಿ, ಕುಡಿಯುವ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಈಗಾಗಲೇ ಕಾಮಗಾರಿಗಳಿಗೆ ಶ್ರೀಕಾರ ಹಾಕಲಾಗಿದೆ. ಆ ಮೂಲಕ ನೀರಾವರಿ ಯೋಜನೆಗಳ ಜಾರಿ ನಿಟ್ಟಿನಲ್ಲಿಯೂ ಜಗದೀಶ ಶೆಟ್ಟರ ಅವರು ತಮ್ಮದೇ ಕೊಡುಗೆ ನೀಡಿದ್ದಾರೆ.
ಮಿತಭಾಷಿ, ಕ್ಷೇತ್ರದ ನೆಚ್ಚಿನ ನಾಯಕ..
ಜಗದೀಶ ಶೆಟ್ಟರ ಅವರು ಮಿತಭಾಷಿ, ಇನ್ನೊಬ್ಬರು ಹೇಳುವುದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವ ನಾಯಕ, ವಿಶೇಷವಾಗಿ ತಮಗೆ ರಾಜಕೀಯವಾಗಿ ಶಕ್ತಿ ತುಂಬಿದ ಕ್ಷೇತ್ರದ ಜನತೆಯ ಜತೆ ಅನ್ಯೋನ್ಯ ಬಾಂಧವ್ಯ, ಕ್ಷೇತ್ರ ಸಾಕಷ್ಟು ಮತದಾರರನ್ನು ಹೆಸರಿಡಿದು ಕರೆದು ಮಾತನಾಡಿಸುವಷ್ಟು ಪ್ರೀತಿಯ ಸಂಪರ್ಕ ಹೊಂದಿದ್ದಾರೆ.ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಆಸಕ್ತಿ ಹೊಂದಿರುವ ಜಗದೀಶ ಶೆಟ್ಟರ ಅವರು ಕ್ಷೇತ್ರದ ಜನತೆಯ ದುಃಖ, ದುಮ್ಮಾನಗಳಿಗೆ ಸದಾ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ.
ಕ್ಷೇತ್ರ ವ್ಯಾಪ್ತಿಯ ವಿವಿಧ ಕೊಳಗೇರಿಗಳಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವ ಜನರಿಗೆ ಅವರ ನಿವೇಶನ, ಮನೆಗಳ ಹಕ್ಕುಪತ್ರ ವಿತರಿಸುವ ನಿಟ್ಟಿನಲ್ಲಿ ತೋರಿದ ವಿಶೇಷ ಆಸಕ್ತಿ ಅದೆಷ್ಟೋ ಕುಟುಂಬಗಳಿಗೆ ಸ್ವಂತ ಸೂರಿನ ನೆಮ್ಮದಿ ಒದಗಿಸುವಂತೆ ಮಾಡಿದೆ. ಕ್ಷೇತ್ರದ ಅಭಿವೃದ್ಧಿ ಕುರಿತಾಗಿ ತೋರಿದ ಕಳಕಳಿ, ಜನರೊಂದಿಗೆ ನೇರ ಸಂಪರ್ಕ ಕಾರಣದಿಂದ ಹುಬ್ಬಳ್ಳಿ ಗ್ರಾಮೀಣ ಹಾಗೂ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಮತದಾರರು ಸತತವಾಗಿ ಆರು ಬಾರಿ ಜಗದೀಶ ಶೆಟ್ಟರ ಅವರನ್ನು ಆಯ್ಕೆ ಮಾಡಿರುವುದು ಅವರ ಸಾಧನೆ, ಕಳಕಳಿಗೆ ಸಾಕ್ಷಿಯಾಗಿದೆ.
ಅತಿ ಹೆಚ್ಚು ಅವಧಿಗೆ ವಿಪಕ್ಷ ನಾಯಕ
ಜಗದೀಶ ಶೆಟ್ಟರ ಅವರು ರಾಜ್ಯ ರಾಜಕೀಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷ, ವಿಧಾನಸಭೆ ವಿಪಕ್ಷ ನಾಯಕ, ಸಚಿವ, ಸ್ಪೀಕರ್, ಮುಖ್ಯಮಂತ್ರಿ ಸ್ಥಾನಗಳೆಲ್ಲವನ್ನು ನಿಭಾಯಿಸಿದ ವಿರಳರಲ್ಲಿ ಪ್ರಮುಖರಾಗಿ ಗೋಚರಿಸುತ್ತಿದ್ದಾರೆ. ಜಗದೀಶ ಶೆಟ್ಟರ ಅವರು, ವಿಧಾನಸಭೆ ವಿಪಕ್ಷ ನಾಯಕರಾಗಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅವಧಿಗೆ ಕಾರ್ಯ ನಿರ್ವಹಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಧಾನಸಭಾ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರಿದ್ದಾರೆ. ಸಿದ್ಧರಾಮಯ್ಯ ಅವರು ಮೊದಲ ಅವಧಿಯಲ್ಲಿ 3 ವರ್ಷ 338 ದಿನಗಳು, ಎರಡನೇ ಅವಧಿಗೆ 2019ರ ಅಕ್ಟೋಬರ್‌ದಿಂದ ಇಲ್ಲಿಯವರೆಗೆ ಮುಂದುವರೆದಿದ್ದಾರೆ. (3ವರ್ಷ 66 ದಿನ). ನಂತರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಇದ್ದಾರೆ. ಎಚ್.ಡಿ.ದೇವೇಗೌಡ ಅವರು ಎರಡು ಅವಧಿಗೆ ವಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿದ್ದು, ಮೊದಲ ಸಲ 1 ವರ್ಷ 43 ದಿನ ಕಾರ್ಯ ನಿರ್ವಹಿಸಿದ್ದರೆ, ಎರಡನೇ ಅವಧಿಯಲ್ಲಿ 3 ವರ್ಷ 359 ದಿನ ಕಾರ್ಯ ನಿರ್ವಹಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೂರು ಬಾರಿ ವಿಧಾನಸಭೆ ವಿಪಕ್ಷ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೊದಲ ಬಾರಿಗೆ 1ವರ್ಷ 357 ದಿನ, ಎರಡನೇ ಬಾರಿಗೆ 1ವರ್ಷ 238 ದಿನ, ಮೂರನೇ ಬಾರಿಗೆ 1 ವರ್ಷ 62 ದಿನ ಮಾಡಿದ್ದಾರೆ. ಜಗದೀಶ ಶೆಟ್ಟರ ಅವರು ಎಸ್.ಎಂ.ಕೃಷ್ಣ ಅವರ ಸರಕಾರದಲ್ಲಿ ವಿಧಾನಸಭೆ ವಿಪಕ್ಷ ನಾಯಕರಾಗಿ 4 ವರ್ಷ 120 ದಿನ ಕಾರ್ಯ ನಿರ್ವಹಿಸಿದ್ದರೆ, ಸಿದ್ದರಾಮಯ್ಯ ಅವರ ಸರಕಾರದಲ್ಲಿ ವಿಧಾನಸಭೆ ವಿಪಕ್ಷ ನಾಯಕರಾಗಿ 4 ವರ್ಷ 114 ದಿನ ಕಾರ್ಯ ನಿರ್ವಹಿಸುವ ಮೂಲಕ ರಾಜ್ಯದಲ್ಲಿಯೇ ಇಲ್ಲಿಯವರೆಗೆ ವಿಧಾನಸಭೆ ವಿಪಕ್ಷ ನಾಯಕರಾಗಿ ಕಾರ್ಯ ನಿರ್ವಹಿಸಿದವರಲ್ಲಿ ಅತಿ ಹೆಚ್ಚಿನ ಅವಧಿಗೆ ಕಾರ್ಯ ನಿರ್ವಹಿಸಿದವರಾಗಿದ್ದಾರೆ.
ಹುಬ್ಬಳ್ಳಿ -ಧಾರವಾಡ ಅಭಿವೃದ್ಧಿಗೆ ನಿರಂತರ ಯತ್ನ..
ತಾವು ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ- ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ಹಾಗೂ ಹುಬ್ಬಳ್ಳಿ -ಧಾರವಾಡ ಸಮಗ್ರ ಅಭಿವೃದ್ಧಿ ಜಗದೀಶ ಶೆಟ್ಟರ ಅವರ ಚಿಂತನೆ, ಯೋಜನೆ, ಯತ್ನ, ಅನುಷ್ಠಾನ ನಿಟ್ಟಿನಲ್ಲಿ ನಿರಂತರ ಕ್ರಮ ಕೈಗೊಂಡಿದ್ದಾರೆ.
ಅವಳಿನಗರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗುವಂತೆ ಮಾಡಿದ ಯತ್ನಗಳಲ್ಲಿ ಶೆಟ್ಟರ ಅವರದ್ದು ಸಿಂಹಪಾಲು ಎಂದರೆ ತಪ್ಪಾಗಲಾರದು.
ಅವಳಿನಗರದ ನೃಪತುಂಗ ಬೆಟ್ಟ, ಇಂದಿರಾ ಗಾಜಿನಮನೆಯ ಮಹಾತ್ಮಗಾಂಧಿ ಉದ್ಯಾನವನ, ತೋಳನಕೆರೆ, ಉಣಕಲ್ಲ ಕೆರೆ, ಕಲಕೇರಿ ಕೆರೆ, ಸಾಧನಕೇರಿ ಹೀಗೆ ವಿವಿಧ ಉದ್ಯಾನವನ, ಕೆರೆಗಳಿಗೆ ಆಧುನಿಕ ಹಾಗೂ ಅಭಿವೃದ್ಧಿ ಸ್ಪರ್ಶ ನೀಡುವಲ್ಲಿ ಶ್ರಮಿಸಿದ್ದಾರೆ. ರಾಜ್ಯದ ಮೊದಲ ಟೆಂಡರ್‌ಶ್ಯುರ್ ರಸ್ತೆ ನಿರ್ಮಾಣ, ಕೇಂದ್ರದ ಸಿಆರ್‌ಎಫ್‌ನಿಧಿ ಅಡಿಯಲ್ಲಿ ಬಹುತೇಕ ಮುಖ್ಯ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿಸುತ್ತಿರುವುದು, ಅವಳಿನಗರಕ್ಕೆ 24/7 ನೀರು ಪೂರೈಕೆಯನ್ನು ಎಲ್ಲ 87 ವಾರ್ಡ್‌ಗಳಿಗೆ ವಿಸ್ತರಣೆ, ಮಲಪ್ರಭಾ ನದಿಯಿಂದ ಸಗಟು ನೀರು ಪೂರೈಕೆಗೆ ಕ್ರಮ, ಧಾರವಾಡ ಜಿಲ್ಲೆಯ ಪ್ರತಿ ಗ್ರಾಮ-ಪಟ್ಟಣದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರಿನ ಸಂಪರ್ಕದ ಜಲಜೀವನ ಮಿಷನ್ ಜಾರಿಗೆ ಶ್ರಮ, ಒಳಚರಂಡಿ ವ್ಯವಸ್ಥೆ, ವಿವಿಧ ಮೂಲಭೂತ ಸೌಲಭ್ಯಗಳ ನೀಡಿಕೆ ನಿಟ್ಟಿನಲ್ಲಿ ಪ್ರಾಮಾಣಿಕ ಯತ್ನ ತೋರಿದ್ದಾರೆ.
ಧ್ಯಾನದಲ್ಲಿ ತೊಡಗುವವರಿಗೆ ಅನುಕೂಲವಾಗುವಂತೆ ಉತ್ತರ ಕರ್ನಾಟಕದ ಮೊದಲ ಧ್ಯಾನಕೇಂದ್ರ ಪಿರಾಮಿಡ್‌ನ್ನು ಹುಬ್ಬಳ್ಳಿಯಲ್ಲಿ ನಿರ್ಮಾಣಗೊಳ್ಳುವುದಕ್ಕೆ ಕಾರಣರಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ನಡುವೆ ರಾಜ್ಯದ ಮೊದಲ ಬಿಆರ್ ಟಿಎಸ್ ಸಾರಿಗೆ ಸೇವೆ ಆರಂಭಕ್ಕೂ ಶೆಟ್ಟರ ಅವರ ಕೊಡುಗೆ ಅಪಾರವಾಗಿದೆ. ಹುಬ್ಬಳ್ಳಿ-ಧಾರವಾಡ ನಡುವೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಶೆಟ್ಟರ ಶ್ರೀಕಾರ ಹಾಕಿದ್ದರು. ಮುಂದೆ ಇದು ಅಷ್ಟಪಥ ರಸ್ತೆಯಾಗಿ ರೂಪುಗೊಂಡಿತ್ತಲ್ಲದೆ ರಾಜ್ಯದ ಮೊದಲ ಬಿಆರ್‌ಟಿಎಸ್ ಸಾರಿಗೆ ಸೇವೆ ಜಾರಿಗೆ ಕಾರಣವಾಗಿತ್ತು.
ಕೇಂದ್ರ ಸರಕಾರ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಮೊದಲ ಪಟ್ಟಿಯಲ್ಲಿ ಆಯ್ಕೆಯಾಗದಿದ್ದಾಗ ಕೇಂದ್ರದ ಮನವೊಲಿಸಿ, ಎರಡನೇ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರುವಂತೆ ತೋರಿದ ವಿವಿಧ ಜನಪ್ರತಿನಿಧಿಗಳ ಯತ್ನದಲ್ಲಿ ಶೆಟ್ಟರ ಪಾತ್ರವೂ ಪ್ರಮುಖವಾಗಿತ್ತು.
ಸ್ಮಾರ್ಟ್ ಸಿಟಿ ಯೋಜನೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಆಯ್ಕೆಯಾದ ನಂತರದಲ್ಲಿ ಯೋಜನೆ ಅಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ವಿಚಾರವಾಗಿ ಅಧಿಕಾರಿಗಳಿಗೆ ಅಗತ್ಯ ಸಲಹೆ-ಸೂಚನೆ-ಮಾರ್ಗದರ್ಶನ, ಪ್ರಗತಿ ಪರಿಶೀಲನೆ ಇನ್ನಿತರೆ ಕಾರ್ಯ ಕೈಗೊಳ್ಳುವ, ಕಾಮಗಾರಿಗಳ ಪರಿಶೀಲನೆ ಇನ್ನಿತರೆ ಕಾರ್ಯ ಕೈಗೊಳ್ಳುವ ಮೂಲಕ ಅವಳಿನಗರದ ಅಭಿವೃದ್ಧಿ ಪರ್ವಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಮಹಾನಗರದಲ್ಲಿ ಫ್ಲೈಓವರ್‌ಗಳ ನಿರ್ಮಾಣ, ನಗರ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ ಅಭಿವೃದ್ಧಿ, ಹೊಸೂರು ಬಸ್ ನಿಲ್ದಾಣ ನಿರ್ಮಾಣದಲ್ಲೂ ಶೆಟ್ಟರ ಶ್ರಮ ತನ್ನದೇ ಕೊಡುಗೆ ನೀಡಿದೆ.
ಸಂಘ ಕಲಿಸಿದ ಶಿಸ್ತು, ಪಕ್ಷ ನೀಡಿದ ಅವಕಾಶ, ಜವಾಬ್ದಾರಿಯನ್ನು ಬದ್ಧತೆಯಿಂದ ನಿರ್ವಹಿಸಿದ್ದೇನೆ. ಅಧಿಕಾರದಲ್ಲಿದ್ದಾಗ ರಾಜ್ಯ ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ನಿಟ್ಟಿನಲ್ಲಿ ಶ್ರಮಿಸಿದ್ದೇನೆ. ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ನಮ್ಮ ಶ್ರಮಕ್ಕೆ ಸಾಕ್ಷಿ ಹೇಳುತ್ತಿದೆ. ಕ್ಷೇತ್ರದ ಮತದಾರರು ಸತತ ಆರು ಬಾರಿ ಆಯ್ಕೆ ಮಾಡಿರುವುದು ಅವರು ನನ್ನ ಮೇಲಿಟ್ಟಿರುವ ವಿಶ್ವಾಸ-ನಂಬಿಕೆಗೆ ಪ್ರತೀಕವಾಗಿದೆ. ಮತದಾರರ ಆಶೀರ್ವಾದದಿಂದಲೇ ನಾನು ಶಾಸಕ, ವಿಧಾನಸಭೆ ವಿಪಕ್ಷ ನಾಯಕ, ಸಚಿವ, ಸ್ಪೀಕರ್, ಮುಖ್ಯಮಂತ್ರಿ ಸೇರಿದಂತೆ ಹಲವು ಹುದ್ದೆಗಳನ್ನು ಪಡೆಯುವುದಕ್ಕೆ ಸಾಧ್ಯವಾಗಿದೆ. ಅವರ ನಂಬಿಕೆ-ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಮುಂದೆಯೂ ಅದು ಮುಂದುವರಿಯುತ್ತದೆ ಎಂಬುದಕ್ಕೆ ಯಾವುದೇ ಅನುಮಾನ ಇಲ್ಲವೇ ಇಲ್ಲ. ಮುಂಬರುವ ವಿಧಾನಸಭೆ ಕ್ಷೇತ್ರ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಿಂದ ನಾನೇ ಸ್ಪರ್ಧಿಸುವೆ. ಸತತ ಏಳನೇ ಬಾರಿಗೂ ಕ್ಷೇತ್ರದ ಜನತೆ ಆಶೀರ್ವದಿಸುವ ಅಚಲ ನಂಬಿಕೆ-ವಿಶ್ವಾಸ ನನ್ನದು. –
ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿ