ಆಳಂದ: ಪಂಚಪೀಠಗಳಲ್ಲಿ ಒಂದಾಗಿರುವ ಶ್ರೀಶೈಲ ಪೀಠದಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ 500 ಕೋಣೆಗಳ ಭಕ್ತ ನಿವಾಸ ಹಾಗೂ 100 ಹಾಸಿಗೆಯುಳ್ಳ ಆಸ್ಪತ್ರೆ ಸೇರಿ ಸಮಾಜೋ ಧಾರ್ಮಿಕ ಕಾರ್ಯಕ್ಕೆ ಸಮುದಾಯ ಭವನ ನಿರ್ಮಾಣದಂತ ಪ್ರಮುಖ ಕಾರ್ಯಗಳನ್ನು ನೆರವೇರಿಸಲು ಉದ್ದೇಶಿಸಲಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ|ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.
ಪಟ್ಟಣದ ಶಾಸಕ ಸುಭಾಷ ಗುತ್ತೇದಾರ ನಿವಾಸಕ್ಕೆ ಈಚೆಗೆ ಭೇಟಿ ನೀಡಿದ ವೇಳೆ ಶ್ರೀಶೈಲ ಪೀಠದ ಧ್ಯೇಯೋದ್ದೇಶ ಕುರಿತು ವಿವರಿಸಿದ ಅವರು, ಸಮಾಜಕ್ಕೆ ವ್ಯಕ್ತಿ ದೊಡ್ಡವನ್ನಲ್ಲ. ಎಂದಿಗೂ ಸಮಾಜ ಮತ್ತು ಭಕ್ತರು ಜೀವಾಳವಾಗಿದ್ದಾರೆ. ಈ ಯಾತ್ರೆಗೆ ಶಾಸಕ ಸುಭಾಷ ಗುತ್ತೇದಾರ ಅವರನ್ನು ಸ್ವಾಗತ ಸಮಿತಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದರು.
ತಮ್ಮ ದ್ವಾದಶ ಪೀಠಾರೋಹಣ ಮಹೋತ್ಸವ, ಜನ್ಮ ಸುವರ್ಣಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ, ಸಾಮಾಜಿಕ, ಜನಜಾಗೃತಿ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆ ಅ.29ರಿಂದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಶ್ರೀ ಕ್ಷೇತ್ರ ಯಡೂರನಿಂದ 33ದಿನಗಳ ವರೆಗೆ 600ಕಿ.ಮೀ ಶ್ರೀಶೈಲ ಪೀಠದ ವರೆಗೆ ನಡೆಯಲಿದೆ. ಪಾದಯಾತ್ರೆ ವೇಳೆ ವಾಸ್ತವ್ಯ ಮಾಡುವ ಗ್ರಾಮದಲ್ಲಿ ಸಸಿ ನೆಡುವುದು ಸೇರಿದಂತೆ ಭಕ್ತರಿಗೆ ಹಿತೋಪದೇಶ ನಡೆಯಲಿದೆ. ಯಾತ್ರೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ ಎಂದು ನುಡಿದರು.
ಜಗದ್ಗುರುಗಳ ಜೊತೆಯಲ್ಲಿದ್ದ ಪಡಸಾವಳಿ ಉದಗೀರ ಮಠದ ಶಂಭುಲಿಂಗ ಶಿವಾಚಾರ್ಯರು ಮಾತನಾಡಿ, ಶಾಸಕ ಸುಭಾಷ ಗುತ್ತೇದಾರ ಅವರು ಶ್ರೀಶೈಲ ಕ್ಷೇತ್ರದ ಭಕ್ತ ನಿವಾಸಕ್ಕೆ 25ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅಲ್ಲದೆ, ಇನ್ನೂ ಅನೇಕ ಭಕ್ತಾದಿಗಳು ಈ ಸತ್ಕಾರ್ಯಕ್ಕೆ ದೇಣಿಗೆ ನೀಡುತ್ತಿದ್ದಾರೆ ಎಂದರು.
ಇದಕ್ಕೂ ಮುನ್ನ ಶಾಸಕರು ಮತ್ತವರ ಪುತ್ರ ಹರ್ಷಾನಂದ ಗುತ್ತೇದಾರ ಜಗದ್ಗುರುಗಳನ್ನು ಸ್ವಾಗತಿಸಿ, ಪಾದಪೂಜೆ ನಡೆಸಿದರು. ಅಕ್ಕಲಕೋಟದ ಬಸವಲಿಂಗ ಮಹಾಸ್ವಾಮೀಜಿ, ಇನ್ನಿತರ ಮಠಾಧಿಧೀಶರು, ಭಕ್ತಾದಿಗಳು ಇದ್ದರು. ಬಳಿಕ ಪಟ್ಟಣದ ರೇವಣಸಿದ್ಧಪ್ಪ ನಾಗೂರೆ ನಿವಾಸದಲ್ಲಿ ರೇವಣಸಿದ್ಧ ದಂಪತಿ ಜಗದ್ಗುರುಗಳ ಪಾದಪೂಜೆ ನೆರವೇರಿಸಲಾಯಿತು.