ಬೆಂಗಳೂರು: ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಬಲ್ಲ ಸಂಶೋಧನಾತ್ಮಕ ಬರಹಗಳ ಅಗತ್ಯ ಬಹಳಷ್ಟಿದೆ ಎಂದು ವಿದ್ವಾಂಸ ಪ್ರೊ.ಜಿ.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು. ಸಿದ್ಧಮಂಗಳಾ ಸೇವಾ ಕೇಂದ್ರದಿಂದ ಭಾನುವಾರ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಜಗದಗಲ ಮಂಟಪ ಸಂಶೋಧನಾ ಲೇಖನಗಳ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಕೇವಲ ಪದವಿ ಅಧ್ಯಯನಕ್ಕಾಗಿ ಮಾತ್ರ ಸಂಶೋಧನೆ ನಡೆಸಲಾಗುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ ಸಂಶೋಧಕರಾಗಿ ಅಧ್ಯಯನ ನಡೆಸಿ ಪದವಿ ಪಡೆದುಕೊಂಡ ನಂತರ ಅದನ್ನು ಮರೆತು ಬಿಡುತ್ತಾರೆ. ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಸಂಶೋಧನಾತ್ಮಕ ಬರವಣಿಗೆಮತ್ತು ಸಾಹಿತ್ಯ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುವ ಸಂಶೋಧಕರ ಅಗತ್ಯ ಹೆಚ್ಚಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಬಿಡುವಿನ ವೇಳೆಯಲ್ಲಿ ಕೆಲಸ ಮಾಡುವ ಸಂಶೋಧಕರು ಹೆಚ್ಚಾಗಿದ್ದು, ಕೆಲ ಸಂಶೋಧಕರು ಕಾಲ ಮಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಸಂಶೋಧನೆ ಎಂದರೆ ಅರೆಕಾಲಿಕ ವೃತ್ತಿ ಎಂದು ಭಾವಿಸಿದ್ದಾರೆ. ಸಂಶೋಧನೆ ಪೂರ್ಣ ಪ್ರಮಾಣ ಕೆಲಸವೇ ಹೊರತು ಅರೆಹೊತ್ತಿನ ವೃತ್ತಿಯಲ್ಲ. ಮೂಲ ಗ್ರಂಥವನ್ನು ಅಧ್ಯಯನ ಮಾಡಿ, ಶ್ರೇಷ್ಠ ಲೇಖನ ಅಮೂಲ್ಯ ಕೊಡುಗೆ ನೀಡುವ ಸಂಶೋಧಕರು ನಮ್ಮಲ್ಲಿ ವಿರಳವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕೃತ ಸಂಶೋಧಕರಿಗೆ ಅರ್ಹತೆ ಸಾಲದು. ಅನಧಿಕೃತ ಸಂಶೋಧಕರಿಗೆ ಅವಕಾಶವಿಲ್ಲ ಎಂಬ ದುಸ್ಥಿತಿ ಪರಿಹಾರವಾದಲ್ಲಿ ಉತ್ತಮ ಸಂಶೋಧನಾ ಬರಹಗಳು ಹೊರ ಬರಲಿವೆ. ಈ ನಿಟ್ಟಿನಲ್ಲಿ ಸಂಶೋಧನೆಯಲ್ಲಿ ಆಸಕ್ತಿ ಇರುವ ಅಸಹಾಯಕ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತಿರುವ ಡಾ.ಶೀಲಾದೇವಿ ಎಸ್.ಮಳೀಮಠ ಅವರ ಕಾರ್ಯ ಪ್ರಶಂಸನೀಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಮಾತನಾಡಿ, ಲೇಖಕರು ಸಂಶೋಧನಾತ್ಮಕ ಸಾಹಿತ್ಯಗಳ ಮಹತ್ವವೇನು ಎಂಬುದನ್ನು ಅರಿಯಬೇಕಿದೆ. ಸಂಶೋಧನಾ ಕ್ಷೇತ್ರದಲ್ಲಿ ತಿದ್ದಿ, ತೀಡುವ ಪರಂಪರೆ ಮರುಕಳಿಸಬೇಕು.
ಸಂಶೋಧನಾ ಸಾಹಿತ್ಯ ರಚಿಸುವವನಿಗೆ ಮೂಲಗ್ರಂಥ ಅಧ್ಯಯನ, ಭಾಷೆಯ ಮೇಲಿನ ಹಿಡಿತ, ಪದ ಬಳಕೆ ಹಾಗೂ ಸಾಮಾನ್ಯ ತಿಳಿವಳಿಕೆ ಅಗತ್ಯವಿದೆ ಎಂದು ಹೇಳಿದರು. ಮಹಾರಾಣಿ ಅಮ್ಮಣ್ಣಿ ಕಾಲೇಜು ಸ್ನಾತಕೋತ್ತರ ಮತ್ತು ಸಂಶೋಧನಾ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಅನ್ನದಾನೇಶ, ಸಿದ್ಧಮಂಗಳಾ ಸೇವಾ ಕೇಂದ್ರ ಅಧ್ಯಕ್ಷೆ ಪ್ರೊ.ಜಯಶ್ರೀ ಎಂ. ವಡೆಯರ್ ಮತ್ತಿತರರು ಹಾಜರಿದ್ದರು.