ಹೇಗ್: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ವಿಚಾರಣೆಯ ವೇಳೆ ಪಾಕಿಸ್ಥಾನ ಬಳಸಿದ ಭಾಷೆಯ ಬಗ್ಗೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ ಭಾರತದ ಪರ ವಕೀಲ ಹರೀಶ್ ಸಾಳ್ವೆ ಕೊನೆಯ ವಾದವನ್ನು ಬುಧವಾರ ಮಂಡಿಸಿದ್ದಾರೆ. ಭಾರತವನ್ನು ನಾಚಿಕೆಗೇಡು, ಸಂವೇದನೆಯಿಲ್ಲ, ಗೌರವವಿಲ್ಲದ ದೇಶ ಎಂದೆಲ್ಲ ಪಾಕ್ ವಕೀಲರು ಪ್ರಸ್ತಾವಿಸಿದ್ದನ್ನು ಸಾಳ್ವೆ ವಿರೋಧಿಸಿದರು. ಅಲ್ಲದೆ ಜಾಧವ್‌ರನ್ನು ಭಾರತೀಯ ಎಂದು ಒಪ್ಪಿಕೊಂಡಿದ್ದೇವೆ. ಬದಲಿಗೆ ಪಾಕಿಸ್ಥಾನ ಪದೇ ಪದೆ ಸ್ವದೇಶಿ ವ್ಯಕ್ತಿಯನ್ನು ತನ್ನ ದೇಶದವನಲ್ಲ ಎಂದು ಹೇಳುತ್ತದೆ. ಆದರೆ ಭಾರತ ಹಾಗೆ ಮಾಡಿಲ್ಲ. ಜಾಧವ್ ತಪ್ಪೊಪ್ಪಿಗೆ ಹೇಳಿಕೆಯ ಕೆಲವು ಭಾಗವನ್ನು ಹೊರತುಪಡಿಸಿ, ಬೇರೆ ಯಾವ ವಿವರಗಳನ್ನೂ ಪಾಕಿಸ್ಥಾನವು ಭಾರತಕ್ಕೆ ನೀಡಿಲ್ಲ. ಅಲ್ಲದೆ ಸಾಮಾನ್ಯ ನಾಗರಿಕನನ್ನು ಸೇನಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುತ್ತಿರುವುದು ಸರಿಯಲ್ಲ ಎಂದು ಭಾರತ ಆಕ್ಷೇಪಿಸಿದೆ. ಭಾರತದ ವಾದಕ್ಕೆ ಗುರುವಾರ ಪಾಕಿಸ್ಥಾನ ಪ್ರತ್ಯುತ್ತರ ನೀಡಲಿದ್ದು, ವಾದ ವಿವಾದ ಮುಕ್ತಾಯಗೊಳ್ಳಲಿದೆ. ಫೆ. 18 ರಿಂದ ಪ್ರಕರಣದ ವಾದ ವಿವಾದ ಆರಂಭವಾಗಿತ್ತು. ಮುಂದಿನ ಕೆಲವೇ ದಿನಗಳಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಪ್ರಕಟಿಸುವ ಸಾಧ್ಯತೆಯಿದೆ.