Advertisement

ಪಾಕ್‌ ದುರ್ನಡತೆ: ಜಾಧವ್‌ ತಾಯಿ, ಪತ್ನಿಗೆ ಪಾಕ್‌ ಅವಮಾನ

06:00 AM Dec 27, 2017 | Team Udayavani |

ಹೊಸದಿಲ್ಲಿ: ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಭೇಟಿಯಾಗಲು ತಾಯಿ ಹಾಗೂ ಪತ್ನಿಗೆ ಅವಕಾಶ ನೀಡಿರುವುದಕ್ಕೆ “ಮಾನವೀಯತೆ’ಯ ಲೇಪನ ಹಚ್ಚಿದ್ದ ಪಾಕಿಸ್ಥಾನ, ನಿಜಕ್ಕೂ ಅವರನ್ನು ನಡೆಸಿಕೊಂಡದ್ದು ಮಾತ್ರ ಅತ್ಯಂತ ಅಮಾನವೀಯವಾಗಿ ಎಂಬ ಅಂಶ ಬೆಳಕಿಗೆ ಬಂದಿದೆ.

Advertisement

ಜಾಧವ್‌ ಭೇಟಿಗೆ ಮುನ್ನ ಅವರ ಪತ್ನಿ, ತಾಯಿಯ ಮಂಗಳಸೂತ್ರ, ಬಿಂದಿ ಹಾಗೂ ಬಳೆಗಳನ್ನು ಬಿಚ್ಚಿಸಲಾಯಿತು. ಪತ್ನಿ ಚೇತನ್‌ ಕುಲ್‌ ಅವರ ಶೂಗಳನ್ನು ಬಿಚ್ಚಿಸಲಾಯಿತಲ್ಲದೆ, ಅದನ್ನು ಮತ್ತೆ ವಾಪಸ್‌ ಕೂಡ ಕೊಟ್ಟಿಲ್ಲ. ಎಷ್ಟೋ ದಿನಗಳ ಅನಂತರ ಭೇಟಿಯಾಗುತ್ತಿರುವ ತಾಯಿ, ಪತ್ನಿಯನ್ನು ಆಲಿಂಗಿಸಲೂ ಸ್ಪರ್ಶಿಸಲೂ ಅವಕಾಶ ನೀಡಲಿಲ್ಲ. ಮಗನಿಗೆಂದು ತಾಯಿ ಮಮತೆಯಿಂದ ತಂದಿದ್ದ ಉಡುಗೊರೆಯನ್ನೂ ನೀಡಲು ಬಿಡಲಿಲ್ಲ. ಸೌಂಡ್‌ ಪ್ರೂಫ್ ಇರುವಂಥ ಗಾಜಿನ ಪರದೆಯ ಮೂಲಕ ಅವರನ್ನು ಪ್ರತ್ಯೇಕವಾಗಿ ಕೂರಿಸಲಾಯಿತು. ಅಷ್ಟೇ ಅಲ್ಲ, ತಾಯಿ ಅವಂತಿ ರೂಢಿಯಂತೆ ಮಗನೊಂದಿಗೆ ಮಾತೃಭಾಷೆ ಮರಾಠಿಯಲ್ಲಿ ಮಾತನಾಡಲು ಮುಂದಾದಾಗ ಅಲ್ಲೇ ಇದ್ದ ಮಹಿಳಾ ಅಧಿಕಾರಿ ಕೂಡಲೇ ಇಂಟರ್‌ಕಾಮ್‌ ಅನ್ನು ಆಫ್ ಮಾಡಿದರು. ಯಾವ ಕಾರಣಕ್ಕೂ ಮಾತೃಭಾಷೆಯಲ್ಲಿ ಮಾತನಾಡುವಂತಿಲ್ಲ, ಆಂಗ್ಲ ಭಾಷೆಯಲ್ಲೇ ಮಾತನಾಡಬೇಕು ಎಂದು ಖಡಕ್ಕಾಗಿ ಹೇಳುವ ಮೂಲಕ ಆತ್ಮೀಯ ಮಾತುಕತೆಗೂ ಅಡ್ಡಿಪಡಿಸಿದರು. ವಿದೇಶಾಂಗ ಇಲಾಖೆಯ ಕೊಠಡಿ ಸೇರಿದ ಬಳಿಕ ಯಾವುದೇ ಆಹಾರ ಸೇವಿಸುವಂತಿಲ್ಲ  ಎಂದೂ ತಾಯಿ ಹಾಗೂ ಪತ್ನಿಗೆ ಸೂಚಿಸಲಾಗಿತ್ತು.

21 ತಿಂಗಳ ಕಾಯುವಿಕೆಯ ಬಳಿಕ ಜಾಧವ್‌ರನ್ನು ಕಾಣಲು ಬಂದ ತಾಯಿ ಹಾಗೂ ಪತ್ನಿಯನ್ನು ನಡೆಸಿಕೊಂಡ ರೀತಿಗೆ ಭಾರತದ ವಿದೇಶಾಂಗ ಇಲಾಖೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಾಕ್‌ ಮಣ್ಣಿನಲ್ಲಿ ಕಾಲಿಟ್ಟಾಗಿನಿಂದ ಅಲ್ಲಿಂದ ವಾಪಸಾಗುವವರೆಗೂ ಜಾಧವ್‌ ತಾಯಿ ಅವಂತಿ ಹಾಗೂ ಪತ್ನಿ ಚೇತನ್‌ ಕುಲ್‌ಅವರನ್ನು ಅಲ್ಲಿನ ಪತ್ರಕರ್ತರು ಸಹಿತ ಎಲ್ಲರೂ ಅವಮಾನಿಸಿದ್ದಾರೆ. ಅಷ್ಟೇ ಅಲ್ಲದೆ, ಅವರ ಧಾರ್ಮಿಕ ಸಂವೇದನೆಗಳಿಗೂ ಪಾಕಿಸ್ಥಾನ ಬೆಲೆ ಕೊಟ್ಟಿಲ್ಲ ಎಂದು ವಿದೇಶಾಂಗ ಇಲಾಖೆ ಆರೋಪಿಸಿದೆ.

ಪಾಕ್‌ನಿಂದ ವಾಪಸ್‌ ಬಂದ ಜಾಧವ್‌ ತಾಯಿ, ಪತ್ನಿ ದಿಲ್ಲಿಯಲ್ಲಿರುವ ವಿದೇಶಾಂಗ ಕಚೇರಿಗೆ ತೆರಳಿ, ಸಚಿವೆ ಸುಷ್ಮಾ ಸ್ವರಾಜ್‌ ಅವರನ್ನು ಭೇಟಿ ಮಾಡಿದರು.

ಕೊಲೆಗಾರನ ತಾಯಿ ಎಂದರು!: 40 ನಿಮಿಷ ಪುತ್ರನೊಂದಿಗೆ ಮಾತುಕತೆ ನಡೆಸಿ ಹೊರಬಂದ ಜಾಧವ್‌ ತಾಯಿ ಅವಂತಿ ಅವರನ್ನು ಹೊರಗಿದ್ದ ಪತ್ರ ಕರ್ತರು, “ಖಾತಿಲ್‌ ಕೀ ಮಾ’ (ಕೊಲೆಗಾರನ ತಾಯಿ) ಎಂದು ಸಂಬೋಧಿಸಿದರು. ಭೇಟಿ ಬಳಿಕ ಕಾರು ಹತ್ತಲೆಂದು ಬಂದ ಅವಂತಿ ಮತ್ತು ಚೇತನ್‌ ಕುಲ್‌ ಅವರನ್ನು ಉದ್ದೇಶಪೂರ್ವಕವಾಗಿಯೇ ಕಾರಿನೊಳಗೆ ಕೂರಿಸಿ ಕಾಯಿಸಲಾಯಿತು. ಈ ಮೂಲಕ ಅವರನ್ನು ಪತ್ರಕರ್ತರು ಮುತ್ತಿಗೆ ಹಾಕಲು ಸ್ವತಃ ಅಲ್ಲಿನ ಅಧಿಕಾರಿಗಳೇ ಪ್ರೇರಣೆ ನೀಡಿದಂತಿತ್ತು ಎಂಬ ಆರೋಪವೂ ಕೇಳಿಬಂದಿದೆ.

Advertisement

ಹೆತ್ತಮ್ಮನಿಗೆ ಕಂಡಿತ್ತು ಗಾಯ: ಮಾತುಕತೆ ವೇಳೆ ಜಾಧವ್‌ ಕಿವಿ ಹಾಗೂ ತಲೆಯಲ್ಲಿ ಗಾಯವಿರುವುದನ್ನು ಸ್ವತಃ ಅವರ ತಾಯಿಯೇ ಗುರುತಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. “ನನ್ನ ಮಗ ಏನೆಂದು ನನಗೆ ಗೊತ್ತು. ಆದರೆ, ಆತನಲ್ಲಿ ಮಾತಾಡಿದಾಗ ಅವನು ನನ್ನ ಮಗನೆಂದು ಅನಿಸಲಿಲ್ಲ’ ಎಂದು ಜಾಧವ್‌ ತಾಯಿ ಅವಂತಿ ಹೇಳಿದ್ದರು, ಅವನ ದೇಹದಲ್ಲಿ ಗಾಯ ವಿರುವುದು ಏಕೆ ಎಂದೂ ಪ್ರಶ್ನಿಸಿದ್ದರು. ಜತೆಗೆ “ಯಾವ ಕಾರಣಕ್ಕೂ ಸುಳ್ಳು ಹೇಳಬೇಡ. ನೀನೊಬ್ಬ ಉದ್ಯಮಿ ಎಂಬ ಸತ್ಯ ವನ್ನು ಅವರಿಗೆ ಹೇಳು’ ಎಂದರು ಎಂದು ಮೂಲಗಳನ್ನು ಉಲ್ಲೇಖೀಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಒತ್ತಡದಲ್ಲಿದ್ದಂತೆ ಕಾಣುತ್ತಿತ್ತು: ಪಾಕಿಸ್ಥಾನವು ಮಾತು ಕತೆಗೆ ಅವಕಾಶ ಮಾಡಿಕೊಟ್ಟರೂ ಜಾಧವ್‌ ಬಹಳ ಒತ್ತಡದಲ್ಲಿದ್ದಂತೆ ಕಂಡುಬಂದರು. ಅವರ ಬಹುತೇಕ ಮಾತುಗಳನ್ನು ಮೊದಲೇ ಹೇಳಿಕೊಟ್ಟು ಹೇಳಿಸಿದಂತಿತ್ತು. ಅನಂತರ ಬಿಡುಗಡೆ ಮಾಡಲಾದ ವೀಡಿಯೋ ಕೂಡ ಹಾಗೆಯೇ ಇತ್ತು. ಆ ಮೂಲಕ ಅವರು ಪಾಕಿಸ್ಥಾನದಲ್ಲಿ ಬೇಹುಗಾರಿಕೆ ನಡೆಸಲು ಬಂದಿದ್ದರು ಎಂಬ ವಾದಕ್ಕೆ ಪುಷ್ಟಿ ನೀಡಲು ಪಾಕಿಸ್ಥಾನ ಯತ್ನಿಸಿತು ಎಂದು ವಿದೇಶಾಂಗ ಇಲಾಖೆ ಆರೋಪಿಸಿದೆ. ಜತೆಗೆ ಈ ಎಲ್ಲ ವಿದ್ಯಮಾನಗಳನ್ನು ನೋಡುವಾಗ ಜಾಧವ್‌ಅವರ ಆರೋಗ್ಯ ಹಾಗೂ ಪರಿಸ್ಥಿತಿ ಬಗ್ಗೆ ಆತಂಕ ಉಂಟಾಗಿದೆ ಎಂದು ಹೇಳಿದೆ. ಒಟ್ಟಾರೆಯಾಗಿ ಜಾಧವ್‌ ಕುಟುಂಬದ ಭೇಟಿಯನ್ನು ಪಾಕಿ ಸ್ಥಾನವು ಅತ್ಯಂತ ಕೆಟ್ಟದಾಗಿ ನಡೆಸಿತು. ಎರಡೂ ದೇಶಗಳು ಹೊಂದಿದ್ದ ವಿಶ್ವಾಸಾರ್ಹತೆಯನ್ನು ಪಾಕಿಸ್ಥಾನವು ಉಲ್ಲಂ ಸಿತು ಎಂದೂ ಇಲಾಖೆ ಅಭಿಪ್ರಾಯಪಟ್ಟಿದೆ.
ಟ್ವೀಟಿಗರಲ್ಲಿ ಎದ್ದ  ಪ್ರಶ್ನೆಗಳಿವು
 ಜಾಧವ್‌ ಅವರು ತೂಕ ಕಳೆದುಕೊಂಡು ಅಷ್ಟೊಂದು ಕೃಶವಾಗಿದ್ದೇಕೆ?
 ಅವರ ತಲೆ ಮತ್ತು ಕುತ್ತಿಗೆಯಲ್ಲಿ ಕಪ್ಪು ಮತ್ತು ನೀಲಿಮಿಶ್ರಿತ ಗಾಯವಿರುವುದೇಕೆ?
 ಅವರ ಕಿವಿಯೆಲುಬಿನ ಭಾಗ 
ಕಾಣುತ್ತಿಲ್ಲ ಏಕೆ?

Advertisement

Udayavani is now on Telegram. Click here to join our channel and stay updated with the latest news.

Next