Advertisement

ಜಾಧವ್‌ ಜಾದೂಗೆ ಖರ್ಗೆ ಮನೆಗೆ…

11:43 PM May 23, 2019 | Lakshmi GovindaRaj |

ಕಲಬುರಗಿ: ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ, ಸೋಲಿಲ್ಲದ ಸರದಾರ ಮಲ್ಲಿಕಾರ್ಜನ ಖರ್ಗೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಡಾ|ಉಮೇಶ ಜಾಧವ್‌ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರ ಪರಿಣಾಮ ಹೈವೋಲ್ಟೆಜ್‌ ಕ್ಷೇತ್ರವಾಗಿ ಮಾರ್ಪಟ್ಟು ಇಡೀ ದೇಶದ ಗಮನ ಸೆಳೆದಿದ್ದ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕೊನೆಗೂ ಬಿಜೆಪಿ ಗೆಲುವಿನ ನಗೆ ಬೀರಿದೆ.

Advertisement

ಬಿಜೆಪಿಯ ಡಾ| ಉಮೇಶ ಜಾಧವ್‌ ಅವರು ಖರ್ಗೆ ಅವರನ್ನು 95 ಸಾವಿರಕ್ಕೂ ಅತ್ಯಧಿಕ ಮತಗಳಿಂದ ಸೋಲಿಸಿ ಸಂಸತ್‌ ಪ್ರವೇಶಿಸಿದ್ದಾರೆ. ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ನಡೆದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಿಂದ ಹಿಡಿದು ಕೊನೆ ಸುತ್ತಿನವರೆಗೂ ಮುನ್ನಡೆ ಸಾಧಿಸುತ್ತಾ ಬಂದ ಡಾ| ಜಾಧವ್‌ ಕೊನೆಗೆ ಸೋಲಿಲ್ಲದ ಸರದಾರನಿಗೆ ಸೋಲುಣಿಸಿದರು.

ಮಲ್ಲಿಕಾರ್ಜುನ ಖರ್ಗೆಗೆ ಎರಡು ಬಾರಿ ಮಾತ್ರ ಮುನ್ನಡೆ: ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಡಾ| ಜಾಧವ್‌ ಆರು ಕ್ಷೇತ್ರಗಳಲ್ಲಿ ಭಾರಿ ಮುನ್ನಡೆ ಸಾಧಿಸಿದ್ದರೆ, ಖರ್ಗೆ ಎರಡು ಕ್ಷೇತ್ರಗಳಲ್ಲಿ ಮಾತ್ರ ಲೀಡ್‌ ಪಡೆದರು. ಈ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಮೂವರು ಶಾಸಕರಿದ್ದರೆ, ನಾಲ್ಕು ಕಡೆ ಕಾಂಗ್ರೆಸ್‌ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದರೂ ಕಾಂಗ್ರೆಸ್‌ ಗೆಲ್ಲಲು ಸಾಧ್ಯವಾಗಲಿಲ್ಲ.

ಪುತ್ರನ ಕ್ಷೇತ್ರದಲ್ಲೇ ಹಿನ್ನಡೆ: ಗುರುಮಿಠಕಲ್‌ ವಿಧಾನಸಭೆ ಕ್ಷೇತ್ರದಿಂದ ಸತತ ಎಂಟು ಬಾರಿ ಹಾಗೂ ಒಂದು ಸಲ ಚಿತ್ತಾಪುರದಿಂದ ವಿಧಾನಸಭೆಗೆ ಪ್ರವೇಶಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಲ ಎರಡೂ ಕ್ಷೇತ್ರಗಳಲ್ಲಿ ತೀವ್ರ ಹಿನ್ನಡೆ ಅನುಭವಿಸಿದರು. ಚಿತ್ತಾಪುರ ಕ್ಷೇತ್ರವನ್ನು ಅವರ ಪುತ್ರ ಸಚಿವ ಡಾ| ಪ್ರಿಯಾಂಕ್‌ ಖರ್ಗೆ ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಸ್ವಕ್ಷೇತ್ರದಲ್ಲಿಯೇ ಹಿನ್ನಡೆ ಅನುಭವಿಸಿದ್ದರಿಂದ ಬೇರೆಯವರ ಮೇಲೆ ಗೂಬೆ ಕೂರಿಸದಂತಾಗಿದೆ.

ಸೋಲಿಲ್ಲದ ಸರದಾರ: ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ 50 ವರ್ಷಗಳ ರಾಜಕೀಯ ಜೀವನದುದ್ದಕ್ಕೂ ಒಮ್ಮೆಯೂ ಸೋತವರಲ್ಲ. ಇದೇ ಕಾರಣಕ್ಕೆ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. ಗುರುಮಿಠಕಲ್‌ ಕ್ಷೇತ್ರದಿಂದ ಸತತ ಎಂಟು ಸಲ, ತದನಂತರ ಚಿತ್ತಾಪುರ ವಿಧಾನಸಭೆ ಕ್ಷೇತ್ರದಿಂದ ಒಮ್ಮೆ ಸೇರಿ ಸತತ ಒಂಭತ್ತು ಸಲ, ತದನಂತರ ಕಲಬುರಗಿ ಲೋಕಸಭೆಯಿಂದ 2009 ಹಾಗೂ 2014ರಲ್ಲಿ ಸತತ ಎರಡು ಸಲ ಲೋಕಸಭೆಗೆ ಗೆದ್ದಿದ್ದರು. ಈ ಸಲ ಗೆದ್ದಿದ್ದರೆ ಖರ್ಗೆ ಹ್ಯಾಟ್ರಿಕ್‌ ಗೆಲುವು ಸಾಧಿಸಿದಂತಾಗುತ್ತಿತ್ತಲ್ಲದೇ ಸೋಲಿಲ್ಲದ ಸರದಾರ ಬಿರುದು ಮುಂದುವರಿಸಿಕೊಂಡು ಬಂದಂತಾಗುತ್ತಿತ್ತು. 2009ರಲ್ಲಿ 13,404 ಹಾಗೂ 2014ರಲ್ಲಿ 74,733 ಮತಗಳ ಅಂತರದಿಂದ ಮಲ್ಲಿಕಾರ್ಜುನ ಖರ್ಗೆ ಗೆದ್ದಿದ್ದರು.

Advertisement

ಒಟ್ಟಾರೆ ಮತದಲ್ಲಿ ಗೊಂದಲ, ನಿವಾರಣೆ: ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟಾರೆ 11,84,241 ಮತದಾನವಾಗಿದೆ. ಆದರೆ, ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ 13 ಲಕ್ಷಕ್ಕೂ ಅಧಿಕ ಮತಗಳೆಂದು ತೋರಿಸಿದ್ದರಿಂದ ಕೆಲ ಕಾಲ ಗೊಂದಲ ಉಂಟಾಯಿತು. ಈ ಕುರಿತು ಕಾಂಗ್ರೆಸ್‌ನ ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್‌ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದರು. ತದನಂತರ ಅಧಿಕಾರಿಗಳು ಸರಿಪಡಿಸಿದರು. ಇದರಿಂದ ಅಭ್ಯರ್ಥಿಗಳು ಪಡೆದ ಮತಗಳಲ್ಲಿ ಏರಿಳಿತವಾಯಿತು.

ಜನ ನನಗೆ ಆಶೀರ್ವಾದ ಮಾಡಿಲ್ಲ. ಸೋಲನ್ನು ಸ್ವಾಗತಿಸುತ್ತೇನೆ. ಇವಿಎಂ ಕುಂಟು ನೆಪ ಹೇಳ್ಳೋಲ್ಲ. ಈಗ ಸೋತಿದ್ದ ರಿಂದ ಅದರ ಬಗ್ಗೆ ಮಾತನಾಡಲು ಸಿದ್ಧನಿಲ್ಲ. ಗೋಲ್‌ಮಾಲ್‌, ಆ ಮಾಲ್‌ ಈ ಮಾಲ್‌ ಅನ್ನೋ ಸಂಸ್ಕೃತಿ ನನ್ನದಲ್ಲ. ಜನ ನನ್ನ ತಿರಸ್ಕರಿ ಸಿದ್ದಾರೆ. ಈ ತೀರ್ಪು ಸ್ವಾಗತಿಸುತ್ತೇವೆ. ಸೋಲು-ಗೆಲುವು ಸಹಜ.
-ಮಲ್ಲಿಕಾರ್ಜುನ ಖರ್ಗೆ, ಪರಾಜಿತ ಅಭ್ಯರ್ಥಿ

ನಮ್ಮನ್ನು ಗೆಲ್ಲಿಸಿದ ಕಲಬುರಗಿ ಜಿಲ್ಲೆಯ ಮತದಾರರಿಗೆ ನೊಬೆಲ್‌ ಪ್ರಶಸ್ತಿ ನೀಡಬೇಕು. ತಮಗೆ ಮಾಡು ಇಲ್ಲ ವೇ ಮಡಿ ಚುನಾವಣೆಯಾಗಿತ್ತು. ನಾನು ಎಂಪಿ, ಮಗ ಎಂಎಲ್‌ಎ ಆಗಲು ಸಚಿವ ಪ್ರಿಯಾಂಕ್‌ ಖರ್ಗೆ ಕಾರಣ. ಮಲ್ಲಿಕಾ ರ್ಜುನ ಖರ್ಗೆ ಅವರಿಗೆ ಮತದಾರರು ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ.
-ಉಮೇಶ ಜಾಧವ್‌, ಗೆದ್ದ ಬಿಜೆಪಿ ಅಭ್ಯರ್ಥಿ

ಕಲಬುರಗಿ (ಬಿಜೆಪಿ)
-ವಿಜೇತರು ಡಾ.ಉಮೇಶ್‌ ಜಿ. ಜಾಧವ್‌
-ಪಡೆದ ಮತ 6,15,894
-ಎದುರಾಳಿ ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್‌)
-ಪಡೆದ ಮತ 5,20,726
-ಗೆಲುವಿನ ಅಂತರ 95,168

ಕಳೆದ ಬಾರಿ ಗೆದ್ದವರು: ಮಲ್ಲಿಕಾರ್ಜುನ ಖರ್ಗೆ (ಕಾಂಗೆ‌Åಸ್‌)

ಗೆಲುವಿಗೆ 3 ಕಾರಣ
-ಬಿಜೆಪಿ ಉಸ್ತುವಾರಿ ಎಂಎಲ್ಸಿ ಎನ್‌.ರವಿಕುಮಾರ್‌ ರಣತಂತ್ರ ರೂಪಿಸಿದ್ದು
-ಯಾರು ಲೀಡ್‌ ಕೊಡ್ತಾರೆಯೋ ಅವರಿಗೆ ಮುಂದಿನ ಸಲ ಟಿಕೆಟ್‌ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದ್ದು
-ಮಾಲೀಕಯ್ಯ ಗುತ್ತೇದಾರ ಸೇರಿ ಹಲವು ನಾಯಕರ ಒಗ್ಗಟ್ಟಿನ ಹೋರಾಟ, ಮೋದಿ ಅಲೆ

ಸೋಲಿಗೆ 3 ಕಾರಣ
-ಪ್ರಚಾರದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತ್ರ ಟೀಕಿಸುತ್ತಾ ಬಂದಿರುವುದು.
-ಪ್ರಿಯಾಂಕ್‌ ಖರ್ಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು
-ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಕೆಲಸ ಮಾಡದಿರುವುದು.

Advertisement

Udayavani is now on Telegram. Click here to join our channel and stay updated with the latest news.

Next