ಇಸ್ಲಾಮಾಬಾದ್: ಪಾಕ್‌ನಲ್ಲಿ ಬಂಧಿಯಾಗಿರುವ ಕುಲಭೂಷಣ್ ಜಾಧವ್‌ರಿಗೆ ಕಾನ್ಸುಲರ್ ಭೇಟಿಗೆ ಗುರುವಾರ ಅವಕಾಶ ಕಲ್ಪಿಸಿಯೂ ಕಳ್ಳಾಟ ಆಡಿದ್ದ ಪಾಕಿಸ್ಥಾನ, ಭಾರತದ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಮತ್ತೂಮ್ಮೆ ಕಾನ್ಸುಲರ್‌ಗಳನ್ನು ಭೇಟಿಯಾಗಲು ಅನುಮತಿ ನೀಡುವುದಾಗಿ ಶುಕ್ರವಾರ ಹೇಳಿದೆ. ಗುರುವಾರದ ಮಾತುಕತೆ ಅರ್ಥಪೂರ್ಣವೂ ಆಗ ಲಿಲ್ಲ, ವಿಶ್ವಾಸಾರ್ಹವೂ ಆಗಲಿಲ್ಲ ಎಂದು ಭಾರತ ಆರೋಪಿ ಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಜಾಧವ್ ಅವರನ್ನು ಭೇಟಿಯಾಗಲು ಕಾನ್ಸುಲರ್‌ಗಳಿಗೆ ಮೂರನೇ ಬಾರಿಗೆ ಅವಕಾಶ ನೀಡಲು ನಾವು ಸಿದ್ಧರಿದ್ದೇವೆ ಮತ್ತು ಮಾತುಕತೆಯ ವೇಳೆ ಯಾವೊಬ್ಬ ಪಾಕಿಸ್ತಾನಿ ಅಧಿಕಾರಿಯೂ ಸ್ಥಳದಲ್ಲಿರದಂತೆ ನೋಡಿಕೊಳ್ಳುತ್ತೇವೆ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮಹೂದ್ ಖುರೇಷಿ ಶುಕ್ರವಾರ ಹೇಳಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಗುರುವಾರ ಭಾರತದ ಇಬ್ಬರು ರಾಜತಾಂತ್ರಿಕ ಅಧಿಕಾರಿಗಳು ಜಾಧವ್‌ರನ್ನು ಭೇಟಿಯಾಗಿ ಚರ್ಚಿಸಿದ್ದರು.