Advertisement

ಚಿತ್ರ ವಿಮರ್ಶೆ: ದೇಸಿ ಆಟದಲ್ಲಿ ಮಿಂಚಿದ ಗುರು-ಶಿಷ್ಯರು

10:43 AM Sep 24, 2022 | Team Udayavani |

ಕ್ರಿಕೆಟ್‌, ಫ‌ುಟ್‌ಬಾಲ್‌, ಹಾಕಿ, ಟೆನ್ನಿಸ್‌, ಬಾಕ್ಸಿಂಗ್‌, ಕರಾಟೆ ಹೀಗೆ ವಿವಿಧ ಕ್ರೀಡೆಗಳನ್ನು ಆಧರಿಸಿದ ಹತ್ತಾರು ಸಿನಿಮಾಗಳು ಈಗಾಗಲೇ ಬೇರೆ ಬೇರೆ ಭಾಷೆಗಳಲ್ಲಿ ಬಂದಿದೆ. ಆದರೆ ಇದೇ ಮೊದಲ ಬಾರಿಗೆ, ನಮ್ಮ ನಡುವೆಯೇ ಇದ್ದು, ಕಳೆದು ಹೋಗಿರುವ ಅಪ್ಪಟ ದೇಸಿ ಕ್ರೀಡೆ ಖೋ-ಖೋವನ್ನು ಬಿಗ್‌ ಸ್ಕ್ರೀನ್‌ ಮೇಲೆ ಪರಿಚಯಿಸಿರುವ ಸಿನಿಮಾ “ಗುರು ಶಿಷ್ಯರು’.

Advertisement

ಹೆಸರೇ ಹೇಳುವಂತೆ, “ಗುರು ಶಿಷ್ಯರು’ ಒಬ್ಬ ಗುರು, ಒಂದಷ್ಟು ಶಿಷ್ಯರು ಮತ್ತು ಖೋ ಖೋ ಕ್ರೀಡೆಯ ಸುತ್ತ ನಡೆಯುವ ಸಿನಿಮಾ. ಇಲ್ಲೊಂದು ಗಟ್ಟಿಕಥೆಯಿದೆ, ಅಪ್ಪಟ ದೇಸಿ ಕ್ರೀಡೆಯೊಂದು ಮೂಲೆಗುಂಪಾದ ವೇದನೆಯಿದೆ. ಖೋ-ಖೋ ಕ್ರೀಡೆಗಾಗಿ ತುಡಿಯುವ ಜೀವಗಳ ಮಿಡಿತವಿದೆ. ಖೋ-ಖೋ ಹುಡುಕಾಟದ ಜೊತೆಗೊಂದಿಷ್ಟು ಹುಡುಗಾಟವನ್ನು ಇಟ್ಟುಕೊಂಡು 90ರ ದಶಕದ ಕಾಲಘಟ್ಟದಲ್ಲಿ ಗುರುಶಿಷ್ಯರನ್ನು ನವಿರಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಜಡೇಶ್‌.

ನ್ಯಾಶನಲ್‌ ಖೋ- ಖೋ ಚಾಂಪಿಯನ್‌ ಒಬ್ಬ ಹೇಗೆಲ್ಲ ಬದಲಾಗುತ್ತಾನೆ. ಖೋ-ಖೋ ಒಂದು ಊರಿನ ಜನರ ಜೀವನವನ್ನು ಹೇಗೆಲ್ಲ ಬದಲಾಯಿಸುತ್ತದೆ ಅನ್ನೋದು “ಗುರು ಶಿಷ್ಯರು’ ಸಿನಿಮಾದ ಕಥೆಯ ಒಂದು ಎಳೆ. ಮೊದಲಾರ್ಧ ಸಂಪೂರ್ಣ ಕಾಮಿಡಿಯಾಗಿ ಸಾಗುವ ಸಿನಿಮಾದ ಕಥೆ ಮಧ್ಯಂತರದ ನಂತರ ಗಂಭೀರವಾಗುತ್ತದೆ. ತರಲೆ, ತುಂಟಾಟ, ಕಾದಾಟ, ಬದುಕಿನ ಹೋರಾಟ, ಪ್ರೀತಿ-ಪ್ರೇಮ ಹೀಗೆ ಎಲ್ಲ ಅಂಶಗಳನ್ನು ರಸವತ್ತಾಗಿ ಹಿಡಿದಿಟ್ಟಿರುವ ಸಿನಿಮಾ “ಗುರು ಶಿಷ್ಯರು’. ಆ ರಸವತ್ತನ್ನು ಆಸ್ವಾಧಿಸಬೇಕೆಂದಿದ್ದರೆ, “ಗುರು ಶಿಷ್ಯರು’ ಸಿನಿಮಾವನ್ನು ತೆರೆಮೇಲೆ ಕಣ್ತುಂಬಿಕೊಳ್ಳುವುದು ಒಳಿತು.

ಇದನ್ನೂ ಓದಿ:ಸೋಲಿನೊಂದಿಗೆ ಟೆನ್ನಿಸ್ ಅಂಕಣಕ್ಕೆ ಅಂತಿಮ ವಿದಾಯ ಹೇಳಿದ ರೋಜರ್ ಫೆಡರರ್

ಇದೇ ಮೊದಲ ಬಾರಿಗೆ ಶರಣ್‌ ಈ ಸಿನಿಮಾದಲ್ಲಿ ದೈಹಿಕ ಶಿಕ್ಷಕನಾಗಿ, ಖೋ ಖೋ ತರಬೇತುದಾರನಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಬಹುತೇಕ ಸಿನಿಮಾಗಳಲ್ಲಿ ಸಂಪೂರ್ಣವಾಗಿ ಪ್ರೇಕ್ಷಕರನ್ನು ನಗಿಸುತ್ತಿದ್ದ ಶರಣ್‌, ಈ ಸಿನಿಮಾದಲ್ಲಿ ನಗಿಸುವುದರ ಜೊತೆಗೆ ಅಲ್ಲಲ್ಲಿ ಕಣ್ಣಂಚನ್ನು ಒದ್ದೆ ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ. ನಿಶ್ವಿ‌ಕಾ ನಾಯ್ಡು ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿಮಾನಿಯಾಗಿ, 90ರ ದಶಕದ ಅಪ್ಪಟ ಹಳ್ಳಿ ಹುಡುಗಿ ಲುಕ್‌ನಲ್ಲಿ ಗಮನ ಸೆಳೆಯುತ್ತಾರೆ. ಬಾಲ ನಟರಾದ ಹೃದಯ್‌, ಏಕಾಂತ್‌, ಸೂರ್ಯ, ರಕ್ಷಕ್‌, ಮಣಿಕಂಠ ನಾಯಕ್‌ ತಮ್ಮ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ. ಮಾಸ್ತಿ ಡೈಲಾಗ್ಸ್‌ ಪ್ರೇಕ್ಷಕರಿಗೆ “ಖೋ’ ಕೊಡುತ್ತ ಕಚಗುಳಿಯಿಡುತ್ತದೆ.

Advertisement

ಅಜನೀಶ್‌ ಸಂಗೀತದ ಎರಡು ಹಾಡುಗಳು ಥಿಯೇಟರ್‌ ಹೊರಗೂ ಗುನುಗುವಂತಿದ್ದು, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಗಮನ ಸೆಳೆಯುತ್ತದೆ. ಮನರಂಜನೆಯನೆ ಜೊತೆಗೆ ಒಂದು ಗಂಭೀರ ವಿಷಯವನ್ನು ಇಟ್ಟುಕೊಂಡು ತೆರೆಗೆ ಬಂದಿರುವ ಗುರುಶಿಷ್ಯರ ಕಮಾಲ್‌ ವಾರಾಂತ್ಯದಲ್ಲಿ ಒಮ್ಮೆ ನೋಡಿ ಬರಬಹುದು.

 ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next