Advertisement

ರಣಜಿ: ಜಾಕ್ಸನ್‌, ವಸವಾಡ ಶತಕ; ಇನ್ನಿಂಗ್ಸ್‌  ಮುನ್ನಡೆಯತ್ತ ಸೌರಾಷ್ಟ್ರ

11:49 PM Feb 10, 2023 | Team Udayavani |

ಬೆಂಗಳೂರು: ಆತಿಥೇಯ ಕರ್ನಾಟಕಕ್ಕೆ ಸೌರಾಷ್ಟ್ರ ಮತ್ತೊಮ್ಮೆ ಕಂಟಕವಾಗಿ ಕಾಡಿದೆ. ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಅದು ರಾಜ್ಯದ ಮೊತ್ತವನ್ನು ಮೀರಿ ನಿಲ್ಲುವತ್ತ ದಾಪುಗಾಲು ಹಾಕಿದೆ. ಫೈನಲ್‌ ಪ್ರವೇಶಕ್ಕೆ ಈ ಮುನ್ನಡೆಯೇ ನಿರ್ಣಾಯಕವಾಗಿ ಪರಿಣಮಿಸುವ ಸಾಧ್ಯತೆ ದಟ್ಟವಾಗಿದೆ.

Advertisement

ನಾಯಕ ಮಾಯಾಂಕ್‌ ಅಗ ರ್ವಾಲ್‌ ಅವರ ಅಮೋಘ 249 ರನ್‌ ಸಾಹಸದಿಂದ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 407 ರನ್‌ ಪೇರಿಸಿತ್ತು. 3ನೇ ದಿನದಾಟದ ಅಂತ್ಯಕ್ಕೆ ಸೌರಾಷ್ಟ್ರ 4 ವಿಕೆಟಿಗೆ 364 ರನ್‌ ಗಳಿಸಿದೆ. ಕೇವಲ 43 ರನ್ನುಗಳ ಹಿನ್ನಡೆಯಲ್ಲಿದೆ. ಇನ್ನೂ 6 ವಿಕೆಟ್‌ ಕೈಲಿದೆ. ಶೆಲ್ಡನ್‌ ಜಾಕ್ಸನ್‌ ಮತ್ತು ನಾಯಕ ಅರ್ಪಿತ್‌ ವಸವಾಡ ಶತಕ ಬಾರಿಸಿ ಸೌರಾಷ್ಟ್ರವನ್ನು ಸುಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಏಕಾಂಗಿ ಯಾಗಿ ಹೋರಾಡಿದ ಮಾಯಾಂಕ್‌ ಅಗರ್ವಾಲ್‌ ಸಾಹಸ ವ್ಯರ್ಥವಾ ಗುತ್ತದಲ್ಲ ಎಂಬ ಹತಾಶೆಯಲ್ಲಿದ್ದಾರೆ ಕರ್ನಾಟಕದ ಕ್ರಿಕೆಟ್‌ ಅಭಿಮಾನಿಗಳು.

ಈಗಿನ ಸ್ಥಿತಿಯಲ್ಲಿ ಸೌರಾಷ್ಟ್ರಕ್ಕೆ ಇನ್ನಿಂಗ್ಸ್‌ ಲೀಡ್‌ ಸುಲಭದಲ್ಲೇ ಒಲಿಯಲಿದೆ. ಆಗ ಫೈನಲ್‌ ಪ್ರವೇಶಿಸಲು ಕರ್ನಾಟಕದ ಮುಂದಿರುವ ಏಕೈಕ ಮಾರ್ಗವೆಂದರೆ ಸ್ಪಷ್ಟ ಗೆಲುವು ಸಾಧಿಸುವುದು. ಆದರೆ ಇದು ಸುಲಭವಲ್ಲ. ಅಸಾಧ್ಯ ಎಂದೇ ಹೇಳಲಡ್ಡಿಯಿಲ್ಲ.

232 ರನ್‌ ಜತೆಯಾಟ
ಸೌರಾಷ್ಟ್ರ 2 ವಿಕೆಟ್‌ ನಷ್ಟಕ್ಕೆ 76 ರನ್‌ ಮಾಡಿತ್ತು. 3ನೇ ವಿಕೆಟ್‌ 92ಕ್ಕೆ ಉರುಳಿತು. 33 ರನ್‌ ಮಾಡಿದ ಹಾರ್ವಿಕ್‌ ದೇಸಾಯಿ ಅವರನ್ನು ವಿ. ಕೌಶಿಕ್‌ ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. ಕರ್ನಾಟಕ ಇನ್ನಷ್ಟು ವಿಕೆಟ್‌ಗಳನ್ನು ಉರುಳಿಸಿ ತೀವ್ರ ಪೈಪೋಟಿ ನೀಡೀತೆಂಬ ನಿರೀಕ್ಷೆ ಗರಿಗೆದರಿತು. ಆದರೆ 4ನೇ ವಿಕೆಟಿಗೆ ಜತೆಗೂಡಿದ ಶೆಲ್ಡನ್‌ ಜಾಕ್ಸನ್‌ ಮತ್ತು ಅರ್ಪಿತ್‌ ವಸವಾಡ ಸೇರಿಕೊಂಡು ಪಂದ್ಯದ ಗತಿಯನ್ನೇ ಬದಲಿಸಿದರು.

ಕರ್ನಾಟಕದ ಬೌಲಿಂಗ್‌ ದಾಳಿ ಯನ್ನು ಲೆಕ್ಕಕ್ಕಿಲ್ಲದಂತೆ ಮಾಡಿದ ಈ ಜೋಡಿ 4ನೇ ವಿಕೆಟಿಗೆ ಬರೋಬ್ಬರಿ 232 ರನ್‌ ಪೇರಿಸಿ “ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಮೆರೆದಾಡಿತು. ಈ ಸಂದರ್ಭದಲ್ಲಿ ಇಬ್ಬರೂ ಸೆಂಚುರಿ ಸಂಭ್ರಮದಲ್ಲಿ ವಿಹರಿಸಿದರು. ಶೆಲ್ಡನ್‌ ಜಾಕ್ಸನ್‌ ಅವರದು 160 ರನ್ನುಗಳ ಭರ್ಜರಿ ಕೊಡುಗೆ. 245 ಎಸೆತಗಳ ಈ ಆಕರ್ಷಕ ಇನ್ನಿಂಗ್ಸ್‌ 23 ಬೌಂಡರಿ, 2 ಸಿಕ್ಸರ್‌ಗಳಿಂದ ರಂಗೇರಿಸಿಕೊಂಡಿತು. ಕಪ್ತಾನನ ಆಟವಾಡಿದ ಅರ್ಪಿತ್‌ ವಸವಾಡ 112 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ (219 ಎಸೆತ, 15 ಬೌಂಡರಿ). ಇವರೊಂದಿಗೆ ಕ್ರೀಸ್‌ನಲ್ಲಿರುವವರು 19 ರನ್‌ ಮಾಡಿರುವ ಚಿರಾಗ್‌ ಜಾನಿ.

Advertisement

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-407. ಸೌರಾಷ್ಟ್ರ-4 ವಿಕೆಟಿಗೆ 364 (ಶೆಲ್ಡನ್‌ ಜಾಕ್ಸನ್‌ 160, ಅರ್ಪಿತ್‌ ವಸವಾಡ ಬ್ಯಾಟಿಂಗ್‌ 112, ಹಾರ್ವಿಕ್‌ ದೇಸಾಯಿ 33, ವಿದ್ವತ್‌ ಕಾವೇರಪ್ಪ 63ಕ್ಕೆ 2, ಕೆ. ಗೌತಮ್‌ 69ಕ್ಕೆ 1, ಕೌಶಿಕ್‌ 65ಕ್ಕೆ 1).

ಬಂಗಾಲದ ಫೈನಲ್‌ ಪ್ರವೇಶ ಖಾತ್ರಿ
ಇಂದೋರ್‌: ಮನೋಜ್‌ ತಿವಾರಿ ನೇತೃತ್ವದ ಬಂಗಾಲ 2022-23ನೇ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ ಫೈನಲ್‌ ಪ್ರವೇಶಿಸುವುದು ಬಹುತೇಕ ಖಾತ್ರಿಯಾಗಿದೆ.

ಹಾಲಿ ಚಾಂಪಿಯನ್‌, ಆತಿಥೇಯ ಮಧ್ಯಪ್ರದೇಶ ವಿರುದ್ಧ 268 ರನ್ನುಗಳ ಬೃಹತ್‌ ಮುನ್ನಡೆ ಸಾಧಿಸಿದ್ದು, ದ್ವಿತೀಯ ಸರದಿಯಲ್ಲಿ 2 ವಿಕೆಟಿಗೆ 59 ರನ್‌ ಗಳಿಸಿದೆ. ಒಟ್ಟು ಮುನ್ನಡೆ 327ಕ್ಕೆ ಏರಿದೆ. ಉಳಿದೆರಡು ದಿನಗಳ ಆಟದಲ್ಲಿ ಯಾವುದೇ ಪವಾಡ ನಡೆಯುವ ಸಂಭವ ಇಲ್ಲ.

ಬಂಗಾಲದ 438 ರನ್ನುಗಳ ಮೊದಲ ಇನ್ನಿಂಗ್ಸ್‌ ಮೊತ್ತಕ್ಕೆ ಜವಾಬು ನೀಡತೊಡಗಿದ ಆತಿಥೇಯ ಮಧ್ಯಪ್ರದೇಶ 2 ವಿಕೆಟಿಗೆ 56 ರನ್‌ ಮಾಡಿ ದ್ವಿತೀಯ ದಿನದಾಟ ಮುಗಿಸಿತ್ತು. ಶುಕ್ರವಾರ ಮಧ್ಯಮ ವೇಗಿ ಆಕಾಶ್‌ದೀಪ್‌ ಅವರ ಆಕ್ರಮಣಕ್ಕೆ ತತ್ತರಿಸಿ 170ಕ್ಕೆ ಸರ್ವಪತನ ಕಂಡಿತು. ಆಕಾಶ್‌ದೀಪ್‌ ಸಾಧನೆ 42ಕ್ಕೆ 5 ವಿಕೆಟ್‌. ಮಧ್ಯಪ್ರದೇಶಕ್ಕೆ ಫಾಲೋಆನ್‌ ರಿಯಾಯಿತಿ ತೋರಿದ ಬಂಗಾಲ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಲು ಮುಂದಾಯಿತು.

Advertisement

Udayavani is now on Telegram. Click here to join our channel and stay updated with the latest news.

Next