ಬೆಂಗಳೂರು: “ಈ ಮೊದಲು ಟಚ್ ಪಾಯಿಂಟ್ ಗಳು ದಿನಕ್ಕೆ ಅಬ್ಬಬ್ಟಾ ಎಂದರೆ 35ರಿಂದ 38 ಬರುತ್ತಿದ್ದವು. ಈಗ ಮಧ್ಯಾಹ್ನದ ಹೊತ್ತಿಗಾಗಲೇ 45 ಪಾಯಿಂಟ್‌ಗಳನ್ನು ಪೂರ್ಣಗೊಳಿಸುತ್ತಿದ್ದೇನೆ. ಸಂಜೆಯೊಳಗೆ ಕಂಪನಿ ನೀಡಿದ ಟಾರ್ಗೆಟ್ ಕೂಡ ರೀಚ್ ಆಗುತ್ತಿದೆ. ಹಾಗಾಗಿ, ಫುಲ್‌ಟೈಮ್ ಮಾಡುತ್ತಿದ್ದೇನೆ.’ – ಇದು “ಈಟ್ ಫಿಟ್’ ಫುಡ್ ಆನ್‌ಲೈನ್ ಸಿದ್ಧ ಆಹಾರ ಪೂರೈಕೆ ಕಂಪನಿಯ ಯಶವಂತಪುರದ ಡೆಲಿವರಿ ಬಾಯ್ ಫೈಜಲ್ ಮಾತು.
ತೀವ್ರವಾಗಿ ಹರಡುತ್ತಿರುವ ಕೋವಿಡ್ 19 ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‌ಡೌನ್ ಮಾಡಿದ್ದರಿಂದ ಕಾರ್ಮಿಕರಿಂದ ಹಿಡಿದು ಬಹುತೇಕ ಎಲ್ಲ ಕ್ಷೇತ್ರವೂ ಆರ್ಥಿಕ ಹಿನ್ನಡೆ ಅನುಭವಿಸುತ್ತಿದೆ. ಆದರೆ, ಆನ್‌ಲೈನ್ ಆಹಾರ ಪೂರೈಕೆಯ ಕೆಲ ಕಂಪನಿಗಳ ಡೆಲಿವರಿ ಬಾಯ್‌ಗಳಿಗೆ ತಾತ್ಕಾಲಿಕವಾಗಿ “ಜಾಕ್‌ಪಾಟ್’ ಹೊಡೆದಂತಾಗಿದೆ. ಜನ ಅದರಲ್ಲೂ ಬ್ಯಾಚ್ಯುಲರ್‌ಗಳು ಮನೆಯಿಂದ ಹೊರಗೆ ಬಾರದಿರುವುದರಿಂದ ಊಟದ ಆರ್ಡರ್‌ಗಳು ಅಧಿಕವಾಗಿವೆ. ಮತ್ತೂಂದೆಡೆ ಶೇ. 30-40 ಮಂದಿ ವಲಸೆ ಹೋಗಿದ್ದರಿಂದ ಡೆಲಿವರಿ ಬಾಯ್‌ಗಳು ಕಡಿಮೆಯಾಗಿದ್ದಾರೆ. ಪರಿಣಾಮ ಲಭ್ಯ ಇರುವವರಿಗೆ ಬೇಡಿಕೆ ಅಧಿಕವಾಗಿದೆ.
“ಲಾಕ್‌ಡೌನ್‌ಗಿಂತ ಮೊದಲು 5 ಕಿ.ಮೀ. ಸುತ್ತಲಿನಿಂದ ಆರ್ಡರ್‌ಗಳು ಬರುತ್ತಿದ್ದವು. ಈಗ 10-15 ಕಿ.ಮೀ.ನಿಂದಲೂ ಬೇಡಿಕೆ ಬರುತ್ತದೆ. ಆದರೆ, ಸಂಚಾರದಟ್ಟಣೆ ಇಲ್ಲದ್ದರಿಂದ ಅಲ್ಪಾವಧಿಯಲ್ಲೇ ತಲುಪಿಸಲು ಸಾಧ್ಯವಾಗುತ್ತಿದೆ. ದಿನಕ್ಕೆ 50 ಟಚ್ ಪಾಯಿಂಟ್ ಅನಾಯಾಸವಾಗಿ ಪೂರೈಸಲು ಸಾಧ್ಯವಾಗುತ್ತಿದೆ. ಇದು ನಮ್ಮಂತಹ ವರ್ಗಕ್ಕೂ ದುಡಿಮೆಗೆ ಸಕಾಲ. ಆದ್ದರಿಂದ ಪಾರ್ಟ್ ಟೈಂ ಮಾಡುತ್ತಿದ್ದವನು, ತಾತ್ಕಾಲಿಕವಾಗಿ ಫುಲ್‌ಟೈಂ ಇದನ್ನೇ ಮಾಡುತ್ತಿದ್ದೇನೆ. ಸಂಜೆ 4 ಗಂಟೆಗಾಗಲೇ ಸಾವಿರ ರೂ. ದುಡಿದಿದ್ದೇನೆ’ ಎಂದು ಮತ್ತೂಬ್ಬ ಡೆಲಿವರಿ ಬಾಯ್ ರಾಜಾಜಿನಗರದ ಪವನ್ ತಿಳಿಸಿದರು.
“ಬರೀ ಊಟದ ಆರ್ಡರ್ ಮಾತ್ರ ನಮ್ಮಲ್ಲಿ ಲಭ್ಯವಿದೆ. ಮಾಸ್ಕ್ಗಳನ್ನು ಕಂಪನಿಯವರೇ ನೀಡಿದ್ದಾರೆ. ಜತೆಗೆ ಪೊಲೀಸರಿಂದ ತೊಂದರೆಯಾಗದಂತೆ ಪಾಸ್‌ಗಳನ್ನು ನೀಡಿದ್ದಾರೆ. ನಿಗದಿತ ಸ್ಥಳಕ್ಕೆ ಹೋಗಿ ಕರೆ ಮಾಡಿದರೆ ಸಾಕು, ಸ್ವತಃ ಗ್ರಾಹಕರುನಾವಿದ್ದಲ್ಲಿಗೆ ಬಂದು ತೆಗೆದುಕೊಳ್ಳುತ್ತಾರೆ. ಕೆಲ ಗ್ರಾಹಕರು ಟಿಪ್ಸನ್ನೂ ನೀಡುತ್ತಾರೆ ಎಂದು ಝೊಮ್ಯಾಟೊ ಡೆಲಿವರಿ ಬಾಯ್ ಮಹೇಶ್ ಮಾಹಿತಿ ನೀಡಿದರು.
ಪಿಜ್ಜಾಗೆ ಹೆಚ್ಚಿದ ಬೇಡಿಕೆ!: ಕೋವಿಡ್ 19 ಹಿನ್ನಲೆಯಲ್ಲಿ ಮಾಂಸಾಹಾರ ಸೇವನೆ ಕಡಿಮೆ ಆಗಿರುವ ಸಾಧ್ಯತೆ ಇದೆ. ಹಾಗಾಗಿ, ಪಿಜ್ಜಾಗೆ ಬೇಡಿಕೆ ದುಪ್ಪಟ್ಟಾಗಿದೆ. ನಿತ್ಯ 30-35 ಪಿಜ್ಜಾಗೆ ಆರ್ಡರ್ ಬರುತ್ತಿತ್ತು. ವಾರದಿಂದ ಆ ಸಂಖ್ಯೆ 45- 50 ತಲುಪಿದೆ. ಕಾರ್ಮಿಕರ ಕೊರತೆಯಿಂದ ಪಿಜ್ಜಾಗೆ ಬೇಕಾದ ಬ್ರೆಡ್ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದ ಬೇಡಿಕೆ ಪೂರೈಸಲಿಕ್ಕೂ ಆಗುತ್ತಿಲ್ಲ ಎಂದು ಶಿವನಗರದ ಚೇತನ್ ತಿಳಿಸಿದರು.
ನಗರದಲ್ಲಿ ಆನ್‌ಲೈನ್ ಮಾರಾಟ ಕಂಪನಿ ಅಡಿ ಹತ್ತಾರು ಕಂಪನಿಗಳಿವೆ. ಅದರಡಿ ಫುಲ್‌ಟೈಂ ಮತ್ತು ಪಾರ್ಟ್‌ಟೈಂ ಆಗಿ ಸುಮಾರು 20-25 ಸಾವಿರ ಉದ್ಯೋಗಿಗಳಿದ್ದು, ಸೋಂಕು ಭೀತಿ ಹಿನ್ನೆಲೆಯಲ್ಲಿ ಅರ್ಧಕ್ಕರ್ಧ ಉದ್ಯೋಗಿಗಳು ಊರು ತೊರೆದಿದ್ದಾರೆ. ಕೆಲವರು ಬರಲು ಹಿಂದೇಟು ಹಾಕುತ್ತಿದ್ದಾರೆ.
ಡೆಲಿವರಿ ಬಾಯ್‌ನಿಂದ ದಿನಸಿ ವಸ್ತು? : ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಡೆಲಿವರಿ ಬಾಯ್‌ಗಳ ಮೂಲಕ ಅಗತ್ಯ ದಿನಸಿ ವಸ್ತುಗಳ ಪೂರೈಕೆಗೆ ಅವಕಾಶ ಕಲ್ಪಿಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ. ಅಲ್ಲಲ್ಲಿ ಸೂಪರ್ ಮಾರ್ಕೆಟ್‌ಗಳು ತೆರೆದಿವೆ. ಆದರೆ, ತುಂಬಾ ದಟ್ಟಣೆ ಉಂಟಾಗುವುದರಿಂದ ಸಮಸ್ಯೆ ಆಗುತ್ತಿದೆ. ಆದ್ದರಿಂದ ಫುಡ್ ಮತ್ತಿತರ ಆನ್‌ಲೈನ್ ಕಂಪನಿಗಳಿಂದಲೇ ಅಗತ್ಯ ದಿನಸಿ ವಸ್ತುಗಳ ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಈ ಸಂಬಂಧ ಸ್ಥಳೀಯ ಶಾಸಕರಿಂದ ಸರ್ಕಾರಕ್ಕೂ ಮನವಿ ಮಾಡಲಾಗುತ್ತಿದೆ ಎಂದು ಫೋರ್ಸ್ ಗ್ರೇಟರ್ ವೈಟ್ ಫೀಲ್ಡ್ (ಫೋರ್ಸ್ ಜಿಡಬ್ಲ್ಯೂ) ಬೆಳತೂರು, ಕಾಡುಗೋಡಿ, ಸೀಗೇಹಳ್ಳಿ ಘಟಕದ ಉಪಾಧ್ಯಕ್ಷ ಆನಂದ್ ತಿಳಿಸುತ್ತಾರೆ.
-ವಿಜಯಕುಮಾರ್ ಚಂದರಗಿ