Advertisement

ಹಲಸಿನ ಹಬ್ಬ ಉದ್ಘಾಟನೆ

12:13 PM Jul 09, 2018 | |

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ರವಿವಾರ ನವಚೇತನ ಸ್ನೇಹ ಸಂಗಮ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಅಡಿಕೆ ಪತ್ರಿಕೆ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನಡೆದ ಹಲಸಿನ ಹಬ್ಬವನ್ನು ಹಲಸು ತುಂಡರಿಸುವ ಮೂಲಕ ಉದ್ಘಾಟಿಸಲಾಯಿತು.

Advertisement

ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ವಿವಿಧ ರಾಜ್ಯಗಳಲ್ಲಿ ಹಲಸಿನ ಮೌಲ್ಯವರ್ಧನೆಗೆ ಆದ್ಯತೆ ನೀಡಲಾಗುತ್ತಿದೆ. ಹಲಸಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಭವಿಷ್ಯದಲ್ಲಿ ಹಲಸು ಸೂಪರ್‌ ಫುಡ್‌ ಆಗಲಿದೆ. ಹಲಸಿನ ಬಗೆಗಿನ ಕೀಳರಿಮೆ ದೂರವಾಗಬೇಕು. ಪೇಟೆಯಿಂದ ಹಣ್ಣುಗಳನ್ನು ಖರೀದಿಸುವುದನ್ನು ಕಂಡಿದ್ದೇವೆ. ಅದೇ ಮಾದರಿಯಲ್ಲಿ ಹಲಸನ್ನೂ ಖರೀದಿಸುವ ಮನಸ್ಸು ಬೆಳೆಯಬೇಕು ಎಂದರು.

ಕೇರಳದಲ್ಲಿ ಹಲಸಿನ ಬಗ್ಗೆ ಸಾಕಷ್ಟು ಅಧ್ಯಯನ, ಪ್ರೋತ್ಸಾಹ ಲಭ್ಯವಾಗುತ್ತಿದೆ. ದೇಶದ ವಿವಿಧ ರಾಜ್ಯಗಳು ಸಹಕಾರ ನೀಡುತ್ತಿವೆ. ವಿದೇಶದಲ್ಲಿ ಹಲಸನ್ನು ಸಸ್ಯಜನ್ಯ ಮಾಂಸ ಎಂದೇ ಪರಿಗಣಿಸಿ ಆಹಾರವಾಗಿ ಬಳಕೆ ಮಾಡುತ್ತಾರೆ. ದೇಶದಲ್ಲೂ ಇದೇ ವಾತಾವರಣ ಸೃಷ್ಟಿಯಾಗುತ್ತಿರುವುದರಿಂದ ಹಲಸಿಗೆ ಭವಿಷ್ಯ ಇದೆ ಎಂದರು. ಅತಿಥಿಯಾಗಿದ್ದ ಮುಳಿಯ ಜುವೆಲ್ಸ್‌ನ ಕೃಷ್ಣನಾರಾಯಣ ಮುಳಿಯ ಮಾತನಾಡಿ, ಹಲಸನ್ನು ಎಲ್ಲರೂ ಮನೆ ಬಳಕೆಯತ್ತ ಕೊಂಡೊಯ್ಯಬೇಕು. ಅದರ ಉತ್ಪನ್ನಗಳನ್ನು ಬಳಕೆ ಮಾಡುವಂತಾಗಬೇಕು ಎಂದರು. 

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ ಮಾತನಾಡಿ, ಹಲಸು ನಿರ್ಲಕ್ಷ್ಯ ಮಾಡುವ ವಸ್ತುವಲ್ಲ. ಅದು ಎಲ್ಲ ವಿಧದಿಂದಲೂ ಬಳಕೆಗೆ ಯೋಗ್ಯವಾಗಿದೆ. ಹೀಗಾಗಿ ಇಂತಹ ಕಾರ್ಯಕ್ರಮ ನಡೆಯುವ ಮೂಲಕ ಕೃಷಿಕರಿಗೂ ಗ್ರಾಹಕರಿಗೂ ಸಂಬಂಧ ಬೆಸೆಯುವಂತೆ ಮಾಡಬೇಕಿದೆ ಎಂದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಿ.ಎಸ್‌. ಭಟ್‌ ಅವರು ದೀಪಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನವಚೇತನ ಸ್ನೇಹ ಸಂಗಮದ ಕಾರ್ಯದರ್ಶಿ ಪಾಂಡುರಂಗ ಭಟ್‌, ಸದಸ್ಯ ಪ್ರಕಾಶ್‌ ಕುಮಾರ್‌ ಕೊಡೆಂಕಿರಿ ಉಪಸ್ಥಿತರಿದ್ದರು.

ಸರ್ಧೆಯಲ್ಲಿ ವಿಜೇತರಿಗೆ ಸಹಾಯಕ ಆಯುಕ್ತ ಡಾ| ಎಚ್‌.ಕೆ. ಕೃಷ್ಣಮೂರ್ತಿ ಅವರು ಹಲಸು ಗಿಡವನ್ನು ಬಹುಮಾನವಾಗಿ ವಿತರಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು. ನವಚೇತನ ಸ್ನೇಹ ಸಂಗಮದ ಅಧ್ಯಕ್ಷ ಅನಂತ ಪ್ರಸಾದ್‌ ನೈತ್ತಡ್ಕ ಸ್ವಾಗತಿಸಿ, ಸದಸ್ಯ ಸುಹಾಸ ಮರಿಕೆ ವಂದಿಸಿದರು. ಪತ್ರಕರ್ತ ಮಹೇಶ್‌ ಪುಚ್ಚಪ್ಪಾಡಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next