Advertisement
ಜಾಬಾಲಿ-ನಂದಿನಿಮೊದಲು ಕಟೀಲು ಕ್ಷೇತ್ರ ಮಹಾತ್ಮೆಯಿಂದ ಜಾಬಾಲಿ-ನಂದಿನಿಯ ಸಂವಾದದಲ್ಲಿ ಜಾಬಾಲಿ ಮಹರ್ಷಿಯಾಗಿ ವಿ|ಹಿರಣ್ಯ ವೆಂಕಟೇಶ್ ಭಟ್ಟರ ಪೀಠಿಕೆ ಉತ್ತಮವಾಗಿ ಮೂಡಿಬಂದಿತು.ಅಹಂಕಾರ ಭರಿತ ನಂದಿನಿಯಾಗಿ ವಾಸುದೇವ ರಂಗ ಭಟ್ಟರು ಭೂಲೋಕದ ಮಾನವರ ನಿಜವಾದ ಅಂತರ್ಭಾವವನ್ನು ಕಾರ್ತವೀರ್ಯ,ರಾವಣಾದಿಗಳ ಉದಾಹರಣೆಯೊಂದಿಗೆ ಪಾಪದ ಕೂಪವೆನಿಸಿದ ಭೂಲೋಕಕ್ಕೆ ತಾನು ಬರಲೊಲ್ಲದ ಕಾರಣವನ್ನು ಕೊಡುತ್ತಾ ಚಿತ್ರಿಸಿದ ಪರಿ ಸೊಗಸಾಗಿತ್ತು.ಅದಕ್ಕುತ್ತರವಾಗಿ ಹಿರಣ್ಯರು ದೇವತೆಗಳು ಶಾಪದ ಪಾಪಕರ್ಮಗಳನ್ನು ತೊಳೆಯಲು ಕರ್ಮ ಪ್ರಪಂಚವೆನಿಸಿದ ಭೂಮಿಯೇ ಆಗಬೇಕು.ಅಲ್ಲದೆ ಎಷ್ಟೋ ಮಹಾತ್ಮರ, ಆದರ್ಶ ಪುರುಷರ ಅವತಾರವೂ ಇಲ್ಲಿಯೇ ಆಗಿರುವುದು.ಬೇರೆಲ್ಲಾ ಲೋಕದ ಪಾಪವನ್ನು ತೊಳೆದುಕೊಳ್ಳಲು ಬರಬೇಕಾದದ್ದು ಇದೇ ಭುವಿಗೆ ಎಂದು ಮಾತುಗಾರಿಕೆ ನಡೆದು ನಂದಿನಿ ಶಾಪಗ್ರಸ್ತಳಾಗಿ ನದಿಯಾಗಿ ಹರಿಯುವಂತಾಗುವವರೆಗೆ ನಡೆದ ಸಂವಾದ ಮನಮುಟ್ಟಿತು.
ಎರಡನೆಯ ಶೀರ್ಷಿಕೆ ರಾವಣ-ಮಂಡೋದರಿ ಸಂವಾದ.ಇಂದ್ರಜಿತುವಿನ ಮರಣದಿಂದ ಮಾನಸಿಕವಾಗಿ ಘಾಸಿಗೊಂಡ ರಾವಣನು ಆದಿನ ಮಧ್ಯರಾತ್ರಿ ನಿದ್ರೆ ಬರದಿರಲು ಮಡದಿ ಮಂಡೋದರಿಯ ಅಂತಃಪುರಕ್ಕೆ ಬರುತ್ತಾನೆ. ಸಮಸ್ತ ಲೋಕದಲ್ಲಿ ತನ್ನ ಸಾಮರ್ಥ್ಯವೇನೆಂದು ತೋರಿಸುತ್ತಾ ಮೆರೆಯುತ್ತಿದ್ದ ದಶಕಂಠನ ಅಂದಿನ ಪರಿಸ್ಥಿತಿ ಶೋಚನೀಯವಾಗಿರುತ್ತದೆ.ಲಂಕೆಯ ವೈಭವವೆನ್ನುವುದು ಅನುಪಮವಾದುದು. ಆದರೆ ಅದೆಲ್ಲವೂ ಕಳಾಹೀನವಾಗಿದೆಯೋ ಎನ್ನುವ ಭಾವ ಆ ಹೊತ್ತಿಗೆ ಅವನದ್ದಾಗಿರುತ್ತದೆ. ಇದೆಲ್ಲವುಗಳನ್ನು ಅಚ್ಚುಕಟ್ಟಾಗಿ ಶ್ರುತಪಡಿಸಿದವರು ವಿ| ಸಂಕದಗುಂಡಿ ಗಣಪತಿ ಭಟ್ಟರು.ಇದಕ್ಕೆ ಜೋಡಿಯಾಗಿ ಧಾರವಾಡ ದಿವಾಕರ ಹೆಗಡೆಯವರ ಮಂಡೋದರಿ.ಪತಿವ್ರತಾ ಶಿರೋಮಣಿ ಎನಿಸಿದ ಅವಳು ತನ್ನ ಪತಿಯ ಪಾಪಕರ್ಮಗಳನ್ನು,ಅವೆಲ್ಲದರ ಪರಿಣಾಮವನ್ನು ಅನುಭವಿಸುತ್ತಿರುವುದನ್ನು ಪತಿಗೆ ತಿಳಿಹೇಳುವಲ್ಲಿ ಶ್ರಮಿಸಿ, ಲೋಕರಕ್ಷಕನೆನಿಸಿದ ಕರುಣಾಳು ಶ್ರೀರಾಮಚಂದ್ರನಲ್ಲಿ ಶರಣಾಗತಿಯೇ ಇದಕ್ಕೆಲ್ಲಾ ಪರಿಹಾರ ಎಂದು ಹೇಳುವಲ್ಲಿ ಹೆಗಡೆಯವರ ಅರ್ಥಗಾರಿಕೆ ಜನಮಾನಸದಲ್ಲಿ ಸ್ಥಿರಗೊಂಡಿತು.ಆದರೂ ನಾರಾಯಣ ವಿರೋಧವೇ ತನ್ನ ಮಂತ್ರ, ಶರಣಾಗತಿ ಅಸಾಧ್ಯವೆಂದು ತಿಳಿಸಿ, ಜಯ-ವಿಜಯರ ಅವತಾರದಲ್ಲಿ ಎರಡನೆದಯದಾದ ರಾವಣ- ಕುಂಭಕರ್ಣರಾಗಿ ಹರಿ ದ್ವೇಷದೊಂದಿಗೆ ಮಡಿದು ಶೀಘ್ರವಾಗಿ ವೈಕುಂಠ ಸೇರುವಲ್ಲಿ ಅನುವಾಗುತ್ತೇನೆ,ಸಹಕರಿಸು ಮಂಡೋದರಿ ಎನ್ನುವಲ್ಲಿ ಯವರೆಗಿನ ಸಂವಾದದಲ್ಲಿ ತ್ರೇತೆಯ ಚಿತ್ರಣ ಅನಾವರಣವಾಯಿತು.
Related Articles
ಮೂರನೆಯದಾಗಿ ನಡೆದದ್ದು ಶಲ್ಯ-ಕೌರವ ಸಂವಾದ.ಹಿರಿಯ ವಿದ್ವಾಂಸ ಡಾ| ಮಾಳ ಪ್ರಭಾಕರ ಜೋಷಿಯವರ ಕಾರ್ಯವಾಸಿ ಕೌರವನಾದರೆ ಪ್ರತಿಯಾಗಿ ಪ್ರೊ| ರಾಧಾಕೃಷ್ಣ ಕಲ್ಚಾರರ ಶಲ್ಯ. ಹಾಸ್ಯರಸವನ್ನೇ ಪ್ರಧಾನವಾಗಿ ಬಳಸುವ ಜೋಷಿಯವರ ಅನುಭವಕ್ಕೆ ಪ್ರತಿಯಾಗಿ ಅನುಭವಿ ಕಲ್ಚಾರರ ಅರ್ಥಗಾರಿಕೆ ಶ್ರಾವಕರನ್ನು ಹಿಡಿದಿಟ್ಟುಕೊಂಡಿತು. ಮಹಾನ್ ನಾಯಕರನ್ನು ಹೊಂದಿಯೂ ತನ್ನ ಸೈನ್ಯದಲ್ಲಿ ಹಲವಾರು ಕೊರತೆಗಳನ್ನು ಕಂಡ ದುರ್ಯೋಧನನಿಗೆ ಪರಮ ಮಿತ್ರನಾದ ಕರ್ಣನಿಗೆ ಶಲ್ಯಸಾರಥ್ಯ ದೊರೆತರೆ ಮಾತ್ರ ವಿಜಯ ದೊರಕುತ್ತದೆ ಎಂದು ತಿಳಿದು ಮಾದ್ರೇಶನನ್ನು ಓಲೈಸಲು ಮಧ್ಯರಾತ್ರಿಯಲ್ಲಿ ಆತನ ಬಿಡಾರಕ್ಕೆ ಬಂದು ಆತನನ್ನು ಬಹಳಷ್ಟು ಹೊಗಳಿ ರಥದ ಸಾರಥಿಯಾಗಬೇಕು ಎಂದು ಹೇಳುತ್ತಾನೆ.ಅದು ಕರ್ಣನಿಗೆ ಎಂದು ಹೇಳಿದಾಗ ಶಲ್ಯನಿಗೆ ಬಹಳ ಅವಮಾನವೆಂದೆನಿಸುತ್ತದೆ.
Advertisement
ಸೂತಪುತ್ರನಿಗೆ ಸಾರಥಿಯಾಗಿ ಕಾರ್ಯನಿರ್ವಹಿಸುವುದು ಶಲ್ಯನಿಗೆ ಸುತರಾಂ ಇಷ್ಟವಿಲ್ಲ.ಈ ಸನ್ನಿವೇಶವನ್ನು ಕಲ್ಚಾರರು ಆಕ್ರೋಶದಿಂದ ವ್ಯಕ್ತಪಡಿಸಿದ್ದು ಸೊಗಸಾಗಿತ್ತು.ಆದರೂ ಪಟ್ಟುಬಿಡದ ದುರ್ಯೋಧನ ಕರ್ಣನಿಗೆ ಪರಶುರಾಮರ ಶಾಪದ ಕುರಿತಾಗಿ ಹೇಳಿ ಅಂದು ಕರ್ಣನಿಗೆ ಶಲ್ಯಸಾರಥ್ಯ ದೊರಕಿದರೆ ಮಂತ್ರಸಿದ್ಧಿಯು ಫಲಿಸುವುದು ಎಂದು ಅವರಂದ ಮಾತನ್ನು ಉಲ್ಲೇಖೀಸಿದಾಗ ಷರತ್ತನ್ನಿತ್ತು ಶಲ್ಯನು ಒಪ್ಪಿಕೊಳ್ಳುವವರೆಗೆ ಈರ್ವರು ಅನುಭವಿಗಳ ಅರ್ಥ ಸುಂದರವಾಗಿ ಮೂಡಿಬಂತು.
ಸತ್ಯನಾರಾಯಣ ಪುಣಿಂಚಿತ್ತಾಯ, ಪುತ್ತೂರು ರಮೇಶ್ ಭಟ್,ಲಕ್ಷ್ಮೀಶ ಅಮ್ಮಣ್ಣಾಯ, ಕೃಷ್ಣಪ್ರಕಾಶ್ ಉಳಿತ್ತಾಯ, ಸುಬ್ರಹ್ಮಣ್ಯ ಚಿತ್ರಾಪುರ ಅವರ ಸಮರ್ಥ ಹಿಮ್ಮೇಳ ಆಹ್ಲಾದಕರವಾಗಿತ್ತು.
ಸಂಕರ್ಷಣ ಉಪಾಧ್ಯಾಯ