ಹಿಂದಿಯಲ್ಲಿ ನೀವು “ಜಾಗೊ’ ಎನ್ನುವ ಪದವನ್ನು ಕೇಳಿರಬಹುದು. ಈಗ ಅದೇ ಪದ ಕನ್ನಡದಲ್ಲಿ ಚಿತ್ರವೊಂದರ ಟೈಟಲ್ ಆಗಿ ತೆರೆಮೇಲೆ ಬರುತ್ತಿದೆ. ಅಂದಹಾಗೆ, ಟೈಟಲ್ ಕ್ಯಾಚಿ ಆಗಿದ್ದರೆ, ಜನ ಸಿನಿಮಾ ನೋಡೋಕೆ ಬರುತ್ತಾರೆ ಅನ್ನೋ ಉದ್ದೇಶದಿಂದ ಚಿತ್ರತಂಡ ತಮ್ಮ ಚಿತ್ರಕ್ಕೆ “ಜಾಗೊ’ ಅಂಥ ಹೆಸರಿಟ್ಟಿದೆಯಂತೆ! ಬಹುತೇಕ ಹೊಸ ಪ್ರತಿಭೆಗಳು ಸೇರಿ ನಿರ್ಮಿಸುತ್ತಿರುವ “ಜಾಗೊ’ ಚಿತ್ರದಲ್ಲಿ 1990ರ ಕಾಲಘಟ್ಟದ ಕಥೆಯನ್ನು ಹೇಳಲಾಗುತ್ತಿದೆಯಂತೆ.
“ರಾಜಕೀಯದಲ್ಲಿ ಅಧಿಕಾರಕ್ಕೆ ಬರಲು ನಾಲ್ಕು ಕಾಲುಗಳು ಇರುವ ಕುರ್ಚಿ ಮುಖ್ಯವಾಗಿರುತ್ತದೆ. ಅದರಲ್ಲಿ ಕೂತರೇನೆ ಅಧಿಕಾರ ಸಿಗೋದು. ಹಾಗಾಗಿ ಕೂರುವ ಕುರ್ಚಿಯ ಒಂದೊಂದು ಕಾಲಿಗೂ ತುಂಬಾ ಮಹತ್ವ ಇದೆ. ಆ ನಾಲ್ಕು ಕಾಲುಗಳ ಪೈಕಿ ಒಂದು ಕಾಲು ವಿದ್ಯಾರ್ಥಿಗಳು. ಇದನ್ನೇ ಕಥೆಯ ಎಳೆಯನ್ನಾಗಿ ಇಟ್ಟುಕೊಂಡು “ಜಾಗೊ’ ಚಿತ್ರವನ್ನು ತೆರೆಮೇಲೆ ತರುತ್ತಿದ್ದೇವೆ’ ಎಂದು ಚಿತ್ರದ ಕಥಾನಕದ ಬಗ್ಗೆ ವಿವರಣೆ ನೀಡುತ್ತದೆ ಚಿತ್ರತಂಡ.
“90ರ ದಶಕದ ಕಾಲೇಜು ವಾತಾವರಣದ ಚಿತ್ರಣ ಚಿತ್ರದಲ್ಲಿದೆ. ಆಗೆಲ್ಲ ವಿದ್ಯಾರ್ಥಿಯೊಬ್ಬ ಕಾಲೇಜು ಚುನಾವಣೆಗೆ ನಿಂತುಕೊಂಡರೆ, ಅವನನ್ನು ಮುಂದಿನ ಶಾಸಕ ಅಂತ ಬಿಂಬಿಸುತ್ತಿದ್ದರು. ಇದರೊಂದಿಗೆ ಭಾಷಾ ಪ್ರೇಮ, ನಾಯಕತ್ವ ಗುಣ, ಯುವಶಕ್ತಿಯ ಸಾಮರ್ಥ್ಯ, ಭಾವನಾತ್ಮಕ ಅಂಶಗಳು ಎಲ್ಲವೂ ಮೇಳೈಸಿಕೊಂಡಿದ್ದು, ಅದೆಲ್ಲವೂ ರಾಜಕೀಯದ ಜೊತೆ ಹೇಗೆ ನಂಟು ಬೆಳೆಸಿಕೊಳ್ಳುತ್ತದೆ.
ಅಂತಿಮವಾಗಿ ದೇಶದ ಅಭಿವೃದ್ದಿಗೆ ಇವೆಲ್ಲದರ ಕೊಡುಗೆಯೇನು ಎಂಬ ಸಂದೇಶ ಕೂಡ ಚಿತ್ರದಲ್ಲಿದೆ. ಒಟ್ಟಾರೆ ಹಿಂದಿನ ತಲೆಮಾರಿನ ಹುಡುಗರ ವಿದ್ಯಾರ್ಥಿ ಜೀವನ, ರಾಜಕೀಯ ನಂಟು ಇವೆಲ್ಲವು ಇಂದಿನ ಯುವ ಜನಾಂಗಕ್ಕೆ ತಿಳಿದಿಲ್ಲ. ಅದನ್ನು ತೋರಿಸಲು ಚಿತ್ರ ಬರುತ್ತಿದೆ’ ಎನ್ನುವುದು ಚಿತ್ರತಂಡದ ಮಾತು. ಇಲ್ಲಿಯವರೆಗೆ ಕೆಲ ಕಿರುಚಿತ್ರಗಳಲ್ಲಿ ಬಾಲನಟನಾಗಿದ್ದ ವಿರೇನ್ ಕೇಶವ್ ಮೊದಲ ಬಾರಿಗೆ ನಾಯಕನಾಗಿ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.
ಇನ್ನು ನಾಯಕಿ ಸೇರಿದಂತೆ ಇತರೆ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಅದರ ಬಗ್ಗೆ ಮಾಹಿತಿ ನೀಡುತ್ತೇವೆ ಎಂದಿದೆ ಚಿತ್ರತಂಡ. ಈ ಹಿಂದೆ ಸಂಚಾರಿ ವಿಜಯ್ ಅಭಿನಯದ “ಕೃಷ್ಣತುಳಸಿ’ ಚಿತ್ರವನ್ನು ನಿರ್ದೇಶಿಸಿದ್ದ ಸುಕೇಶ್ ನಾಯಕ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಲಿವಿತ್ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನವಿದೆ.
ರಂಗಭೂಮಿ ಕಲಾವಿದ ಸ್ವಯಂ ನಿವೃತ್ತ ಐಇಎಸ್ ಅಧಿಕಾರಿ ಸೊರಬದ ಡಾ.ಶಿವಪ್ಪ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಮುಹೂರ್ತವನ್ನು ಆಚರಿಸಿಕೊಂಡಿದ್ದು, ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರದ ಕಥೆಗೆ ತಕ್ಕಂತೆ ಬೆಳಗಾಂ, ಧಾರವಾಡ ಭಾಗಗಳಲ್ಲಿ “ಜಾಗೊ’ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.