Advertisement

ಜ. 7ರಂದು ಬೃಹತ್‌ ಉಚಿತ ಆರೋಗ್ಯ ತಪಾಸಣೆ ಶಿಬಿರ

02:25 PM Jan 05, 2018 | Team Udayavani |

ನಗರ: ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಪುತ್ತೂರಿನ ಪ್ರತಿಷ್ಠಿತ 19 ಸಂಘ ಸಂಸ್ಥೆಗಳ
ಆಶ್ರಯದಲ್ಲಿ ಜ. 7ರಂದು ಬೃಹತ್‌ ಉಚಿತ ಆರೋಗ್ಯ ತಪಾಸಣ ಶಿಬಿರ ಹಾಗೂ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಪುತ್ತೂರು ಎಪಿಎಂಸಿ ಅಧ್ಯಕ್ಷ ಬೂಡಿಯಾರ್‌ ರಾಧಾಕೃಷ್ಣ ರೈ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಪ್ರಾಂಗಣದಲ್ಲಿ ಬೆಳಗ್ಗೆ ಆರಂಭಗೊಳ್ಳುವ ಶಿಬಿರದಲ್ಲಿ ಗಾರ್ಬಲ್‌ ಮಳಿಗೆಗಳೂ ಸೇರಿದಂತೆ ಎಲ್ಲ ಯಾರ್ಡ್‌ಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು, ತಾ|ನ ಎಲ್ಲ ಕೃಷಿ ಕಾರ್ಮಿಕರು ಮತ್ತು ಸಾರ್ವಜನಿಕರು ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳಬಹುದು. ಸುಮಾರು ಐದು ಸಾವಿರ ಜನರಿಗೆ ಉಚಿತ ತಪಾಸಣೆ ನಡೆಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದರು.

ಶಿಬಿರದಲ್ಲಿ ತಪಾಸಣೆಯ ಬಳಿಕ ಅಗತ್ಯವುಳ್ಳವರಿಗೆ ಚಿಕಿತ್ಸೆಯೂ ಸಿಗಲಿದೆ. ಶಿಬಿರಕ್ಕೆ ಬರುವವರಿಗೆ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ, ಸಂಜೆಯ ಉಪಾಹಾರ ವ್ಯವಸ್ಥೆ ಮಾಡಲಾಗುವುದು. ಪ್ರಾಂಗಣದ ರೈತ ಸಭಾ ಭವನವೂ ಸೇರಿದಂತೆ ಯಾರ್ಡ್‌ನ ವಿಶಾಲ ಪ್ರದೇಶವನ್ನು ಶಿಬಿರಕ್ಕಾಗಿ ಬಳಸಿಕೊಳ್ಳಲಾಗುವುದು. ಎಪಿಎಂಸಿ ವತಿಯಿಂದ ಸ್ಥಳದಾನದ ವ್ಯವಸ್ಥೆ ಮತ್ತು ಮೂಲಭೂತ ವ್ಯವಸ್ಥೆ ಮಾಡಿಕೊಡಲಾಗಿದೆ. ಸಂಪೂರ್ಣ ವೆಚ್ಚವನ್ನು ಸಹಯೋಗಿ ಇತರ ಸಂಘಟನೆಗಳು ಭರಿಸಲಿವೆ ಎಂದು ಅವರು ಹೇಳಿದರು.

ಮಂಗಳೂರಿನ ಯುನಿಟಿ ಹೆಲ್ತ್‌ ಕಾಂಪ್ಲೆಕ್ಸ್‌ ಮತ್ತು ಎ.ಬಿ. ಶೆಟ್ಟಿ ಕಾಲೇಜ್‌ ಆಫ್‌ ಡೆಂಟಲ್‌ ಸಯನ್ಸ್‌ ದೇರಳಕಟ್ಟೆ ಸಹಯೋಗದೊಂದಿಗೆ ಶಿಬಿರ ಆಯೋಜಿಸಲಾಗಿದೆ. ಮಕ್ಕಳ ತಪಾಸಣೆ, ಸ್ತ್ರೀ ರೋಗ ತಪಾಸಣೆ, ಹೃದ್ರೋಗ ತಪಾಸಣೆ
ಮತ್ತು ಇಸಿಜಿ, ಶಸ್ತ್ರಚಿಕಿತ್ಸಾ ತಪಾಸಣೆ, ನರ ರೋಗ ತಪಾಸಣೆ, ಶ್ವಾಸಕೋಶ ರೋಗ ತಪಾಸಣೆ, ಮೂತ್ರ ರೋಗ ತಪಾಸಣೆ, ನೇತ್ರ ತಪಾಸಣೆ, ಕಿವಿ, ಗಂಟಲು, ಮೂಗು ತಪಾಸಣೆ, ಚರ್ಮರೋಗ ತಪಾಸಣೆ, ಕ್ಯಾನ್ಸರ್‌ ರೋಗ, ದಂತ ತಪಾಸಣೆ, ಬಾಯಿ ಮತ್ತು ಹಲ್ಲು ರೋಗಗಳ ಸಮಗ್ರ ತಪಾಸಣೆ ನಡೆಯಲಿದೆ ಎಂದು ವಿವರಿಸಿದರು.

ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಅಂದು ಬೆಳಗ್ಗೆ ಸ್ಥಳದಲ್ಲೇ ನೋಂದಣಿಯನ್ನೂ ಮಾಡಿಕೊಳ್ಳಬಹುದು. ಉಚಿತ ಔಷಧಿ ಮತ್ತು ಕನ್ನಡಕ ವಿತರಣೆ ಮಾಡಲಾಗುವುದು ಎಂದರು.
ರೋಟರಿ ಕ್ಲಬ್‌ ಪುತ್ತೂರು ಅಧ್ಯಕ್ಷ ಎ.ಜೆ. ರೈ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಪುತ್ತೂರು ಇದರ ಚೇರ್ಮನ್‌ ಆಸ್ಕರ್‌
ಆನಂದ್‌, ಪುತ್ತೂರು ವರ್ತಕರ ಸಂಘದ ಅಧ್ಯಕ್ಷ ಸುರೇಂದ್ರ ಕಿಣಿ, ಆಕ್ಟಾಪ್ಲಸ್‌ ಹೋಮ್‌ ಹೆಲ್ತ್‌ ಸರ್ವಿಸಸ್‌ ಸಂಸ್ಥೆಯ
ರಕ್ಷಣ್‌ ಮೇಲಾಂಟ, ವೈದ್ಯೆ ಡಾ| ಸುಧಾ ರಾವ್‌ ಉಪಸ್ಥಿತರಿದ್ದರು.

Advertisement

ಸಹಯೋಗ
ಬೃಹತ್‌ ಆರೋಗ್ಯ ತಪಾಸಣ ಶಿಬಿರವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಪುತ್ತೂರು ಅರೇಕಾ ಮರ್ಚಂಟ್ಸ್‌ ಅಸೋಸಿಯೇಶನ್‌, ಕ್ಯಾಂಪ್ಕೋ ಸಂಸ್ಥೆ, ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌, ರೋಟರಿ ಕ್ಲಬ್‌ ಪುತ್ತೂರು, ಪುತ್ತೂರು ಪೂರ್ವ, ಪುತ್ತೂರು ಸಿಟಿ, ಪುತ್ತೂರು ಯುವ, ಪುತ್ತೂರು ಸ್ವರ್ಣ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಪುತ್ತೂರು, ಲಯನ್ಸ್‌ ಮತ್ತು ಲಯನೆಸ್‌ ಕ್ಲಬ್‌ ಪುತ್ತೂರು, ಜೆಸಿಐ ಮತ್ತು ಜೇಸಿರೆಟ್‌ ಪುತ್ತೂರು, ಇನ್ನರ್‌ ವೀಲ್‌ ಕ್ಲಬ್‌ ಪುತ್ತೂರು, ಹಾಸ್ಪಿಟಲ್‌ ಅಸೋಸಿಯೇಶನ್‌ ಪುತ್ತೂರು, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಪುತ್ತೂರು ಕಲಾವಿದರು, ಅಕ್ಟಾಪ್ಲಸ್‌ ಹೋಮ್‌ ಹೆಲ್ತ್‌ ಸರ್ವಿಸಸ್‌ ಸಂಯುಕ್ತ ಆಶ್ರಯದಲ್ಲಿ ನಡೆಸಲಾಗುವುದು ಎಂದು ರಾಧಾಕೃಷ್ಣ ರೈ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next