ಜಮ್ಮು: ಜಮ್ಮು-ಕಾಶ್ಮೀರದ ಉನ್ನತ ಕಾರಾಗೃಹದ ಅಧಿಕಾರಿ ಹೇಮಂತ್ ಲೋಹಿಯಾ ಸೋಮವಾರ (ಅ.03) ರಾತ್ರಿ ತನ್ನ ಸ್ನೇಹಿತನ ಮನೆಯಲ್ಲಿ ಭೀಕರವಾಗಿ ಹತ್ಯೆಗೀಡಾಗಿರುವ ಘಟನೆ ನಡೆದಿದೆ. ಲಷ್ಕರ್ ಎ ತೊಯ್ಬಾದ ಭಾರತೀಯ ಶಾಖೆ, ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫೋರ್ಸ್ (ಪಿಎಎಫ್ ಎಫ್) ಕಾರಾಗೃಹ ಇಲಾಖೆಯ ಡಿಜಿಪಿ ಲೋಹಿಯಾ ಹತ್ಯೆಯ ಹೊಣೆ ಹೊತ್ತುಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅನ್ಯಜಾತಿ ಯುವಕನೊಂದಿಗೆ ಮಗಳು ನಾಪತ್ತೆ; ಒಂದೇ ಕುಟುಂಬದ ಮೂವರು ಸಾಮೂಹಿಕ ಆತ್ಮಹತ್ಯೆ
57 ವರ್ಷದ ಲೋಹಿಯಾ 1992ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದು, ಸುಟ್ಟು ಹೋದ ಗಾಯ, ಗಂಟಲು ಸೀಳಿದ ಸ್ಥಿತಿಯಲ್ಲಿ ಜಮ್ಮುವಿನ ಹೊರಭಾಗದ ಸ್ನೇಹಿತನ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.
ಲೋಹಿಯಾ ಅವರ ಮನೆ ನವೀಕರಣದ ಹಿನ್ನೆಲೆಯಲ್ಲಿ ಹೇಮಂತ್ ಕುಮಾರ್ ಲೋಹಿಯಾ ಅವರು ತನ್ನ ಸ್ನೇಹಿತನ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಲೋಹಿಯಾ ಅವರ ಮನೆಯ ಕೆಲಸಗಾರ ಯಾಸಿರ್ ಮುಖ್ಯ ಆರೋಪಿ ಎಂದು ಶಂಕಿಸಲಾಗಿದೆ.
ಶಂಕಿತ ಯಾಸಿರ್ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿದೆ. ಕೊಲೆ ನಡೆದ ಪ್ರದೇಶದಲ್ಲಿನ ಸಿಸಿಟಿವಿ ಫೂಟೇಜ್ ಅನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.