Advertisement

ಮೈತ್ರಿ ಮುರಿದ ಮೇಲೆ ಕೆಸರೆರಚಾಟ

08:40 AM Jun 20, 2018 | Team Udayavani |

ಶ್ರೀನಗರ/ಹೊಸದಿಲ್ಲಿ: ಅತ್ತ ಜಮ್ಮು- ಕಾಶ್ಮೀರದಲ್ಲಿ ಪಿಡಿಪಿ -ಬಿಜೆಪಿ ಮೈತ್ರಿ ಮುರಿದುಬೀಳುತ್ತಲೇ ರಾಜಕೀಯ ವಲಯದಲ್ಲಿ ಕೆಸರೆರಚಾಟ ಆರಂಭವಾಗಿದೆ. ಮೈತ್ರಿಯ ವೇಳೆ ‘ಇದು ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವದ ಸಮ್ಮಿಲನ’ ಎಂದಿದ್ದ ನಿರ್ಗಮಿತ ಸಿಎಂ ಮೆಹಬೂಬಾ ಮುಫ್ತಿ ಅವರು, ಮೈತ್ರಿ ಮುರಿಯುತ್ತಲೇ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ತೋಳ್ಬಲ ಪ್ರದರ್ಶನವೆಲ್ಲ ಜಮ್ಮು-ಕಾಶ್ಮೀರದಲ್ಲಿ ನಡೆಯುವುದಿಲ್ಲ. ಇಲ್ಲಿನ ಸಮಸ್ಯೆ ನಿವಾರಣೆಗೆ ಮಾತುಕತೆಯೇ ದಾರಿ ಎಂಬುದು ಕೆಲವರಿಗೆ ತಿಳಿಯಲಿಲ್ಲ ಎಂದಿದ್ದಾರೆ. ಇನ್ನು ಎನ್‌.ಸಿ., ಕಾಂಗ್ರೆಸ್‌, ಸಿಪಿಎಂ, ಸಿಪಿಐ ಮತ್ತಿತರ ಪ್ರತಿಪಕ್ಷಗಳು ಇದನ್ನು ಅವಕಾಶವಾದಿ ರಾಜಕೀಯ ಎಂದು ಬಣ್ಣಿಸಿವೆ.

Advertisement

ಇನ್ನೊಂದೆಡೆ, ಬಿಜೆಪಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನಾವು ಮಾಡಿಕೊಂಡಿದ್ದ ಮೈತ್ರಿಯು ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾಗಿತ್ತು. ಈ ಕಾರಣದಿಂದಲೇ ನಾವು ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್‌ ತೆಗೆದುಕೊಂಡೆವು ಎಂದು ಹೇಳಿದೆ. ಕಣಿವೆ ರಾಜ್ಯದ ಬಿಜೆಪಿ ವಕ್ತಾರ ಸುನಿಲ್‌ ಸೇಥಿ ಮಾತನಾಡಿ, ಪಿಡಿಪಿ ಪಕ್ಷವು ಪ್ರತ್ಯೇಕವಾದಿಗಳು, ಉಗ್ರರು ಮತ್ತು ಪಾಕಿಸ್ತಾನದ ಬಗ್ಗೆ ಮೃಧು ಧೋರಣೆ ತಳೆದಿತ್ತು. ಇದು ರಾಷ್ಟ್ರೀಯ ಹಿತಾಸಕ್ತಿಗೆ ಭಂಗ ತರುವಂಥದ್ದಾಗಿದ್ದರಿಂದ ಅನಿವಾರ್ಯವಾಗಿ ಬೆಂಬಲ ವಾಪಸ್‌ ಪಡೆಯಬೇಕಾಯಿತು ಎಂದಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಗಿಂತ ಅಧಿಕಾರ ಹೆಚ್ಚಿನದಲ್ಲ ಎಂಬ ಕಾರಣವೂ ಈ ನಿರ್ಧಾರದ ಹಿಂದೆ ಅಡಗಿದೆ ಎಂದು ಹೇಳಿದ್ದಾರೆ.

ಸರಕಾರ ರಚನೆ ಇಲ್ಲ: ಸದ್ಯ ರಾಜ್ಯದಲ್ಲಿ ಯಾರೂ ಸರಕಾರ ರಚನೆಗೆ ಆಸಕ್ತಿ ತೋರುತ್ತಿಲ್ಲ. ಮೆಹಬೂಬಾ ಮುಫ್ತಿ ಅವರೇ ರಾಜ್ಯಪಾಲರಿಗೆ ಸರಕಾರ ರಚನೆಯಲ್ಲಿ ಆಸಕ್ತಿ ಇಲ್ಲ ಎಂದಿದ್ದಾರೆ. ಇನ್ನು ಇನ್ನೊಂದು ಪ್ರಾದೇಶಿಕ ಪಕ್ಷ ನ್ಯಾಷನಲ್‌ ಕಾನ್ಫರೆನ್ಸ್‌ನ ಕಾರ್ಯಾಧ್ಯಕ್ಷ ಒಮರ್‌ ಅಬ್ದುಲ್ಲಾ ಕೂಡ ಹೊಸದಾಗಿ ಚುನಾವಣೆ ನಡೆಯಲಿ ಎಂದು ಆಗ್ರಹಿಸಿದ್ದಾರೆ. ಕಾಶ್ಮೀರದ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಕೂಡ ಪಿಡಿಪಿ ಜತೆ ಹೊಂದಾಣಿಕೆ ಇಲ್ಲವೆಂದು ಹೇಳಿದ್ದಾರೆ. ಅಲ್ಲದೆ ಬಿಜೆಪಿಯೂ ರಾಜ್ಯಪಾಲರ ಆಳ್ವಿಕೆಗೆ ಒತ್ತಾಯಿಸಿದೆ. ಈ ಮಧ್ಯೆ, ರಾಜ್ಯಪಾಲ ಎನ್‌.ಎನ್‌.ವೋಹ್ರಾ ಅವರು ರಾಷ್ಟ್ರಪತಿ ಕೋವಿಂದ್‌ ರಿಗೆ ವರದಿ ಸಲ್ಲಿಸಿದ್ದು, ರಾಜ್ಯಪಾಲರ ಆಳ್ವಿಕೆಗೆ ಶಿಫಾರಸು ಮಾಡಿದ್ದಾರೆ. ಇದರ ಪ್ರತಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೂ ಕಳುಹಿಸಲಾಗಿದೆ. 

ಚುನಾವಣೆ ನಡೆಯಲಿ
ಸರಕಾರ ಬಿದ್ದುಹೋಗುತ್ತಿದ್ದಂತೆ ರಾಜ್ಯಪಾಲರ ನಿವಾಸಕ್ಕೆ ತೆರಳಿದ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ, ಹೊಸದಾಗಿ ಚುನಾವಣೆ ನಡೆಯಲಿ ಎಂದು ಆಗ್ರಹಿಸಿದ್ದಾರೆ. ಸದ್ಯಕ್ಕೆ ರಾಜ್ಯಪಾಲರ ಆಳ್ವಿಕೆಯೇ ಇರಲಿ, ನಂತರದಲ್ಲಿ ಹೊಸದಾಗಿ ಚುನಾವಣೆ ನಡೆದು ಹೊಸ ಸರಕಾರ ಅಸ್ತಿತ್ವಕ್ಕೆ ಬರಲಿ ಎಂದು ಮನವಿ ಮಾಡಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಪಿಡಿಪಿ ಜೊತೆಯಾಗಲಿ ಅಥವಾ ಇನ್ನಾರ ಜತೆಗಾಗಲಿ ಸರಕಾರ ರಚನೆ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲವೆಂದೂ ಅವರು ಸ್ಪಷ್ಟವಾಗಿ ಹೇಳಿದ್ದಾರೆ.


ರಾಜ್ಯಪಾಲರ ಕರೆಯಿಂದ ಹುದ್ದೆ ಅಂತ್ಯ

ಮೆಹಬೂಬಾ ಮುಫ್ತಿ ಅವರ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಹುದ್ದೆಯು ಮಂಗಳವಾರ ಮಧ್ಯಾಹ್ನ ಒಂದು ಫೋನ್‌ ಕರೆಯಿಂದ ಹಠಾತ್‌ ಅಂತ್ಯ ಕಾಣುವಂತಾಯಿತು. ಈ ಫೋನ್‌ ಕರೆ ಮಾಡಿದ್ದು ಬೇರಾರೂ ಅಲ್ಲ, ರಾಜ್ಯಪಾಲ ಎನ್‌.ಎನ್‌. ವೋಹ್ರಾ. ಹೌದು, ಪಿಡಿಪಿ ಜತೆಗಿನ ಮೈತ್ರಿಯನ್ನು ಬಿಜೆಪಿ ಕಡಿದುಕೊಂಡಿತು ಎಂದು ಮೆಹಬೂಬಾರಿಗೆ ಮೊದಲು ಮಾಹಿತಿ ನೀಡಿದ್ದೇ ರಾಜ್ಯಪಾಲರು. ಎಂದಿನಂತೆ ಮೆಹಬೂಬಾ ಅವರು ತಮ್ಮ ಕಚೇರಿಯಲ್ಲಿ ಕಾರ್ಯನಿರತರಾಗಿದ್ದರು. ಅಷ್ಟರಲ್ಲಿ, ಫೋನ್‌ ರಿಂಗಣಿಸಿತು. ಮುಖ್ಯ ಕಾರ್ಯದರ್ಶಿ ಬಿ.ಬಿ. ವ್ಯಾಸ್‌ ಕರೆ ಸ್ವೀಕರಿಸಿದರು. ಅಷ್ಟರಲ್ಲಿ ರಾಜ್ಯಪಾಲರು ಕರೆಯನ್ನು ಸಿಎಂಗೆ ಸಂಪರ್ಕಿಸುವಂತೆ ಸೂಚಿಸಿದರು. ಅತ್ತ ಕಡೆ ಮೆಹಬೂಬಾ ಕರೆ ಸ್ವೀಕರಿಸುತ್ತಿದ್ದಂತೆಯೇ, ಮೈತ್ರಿ ಕಡಿತದ ಅಚ್ಚರಿಯ ವಿಚಾರವನ್ನು ರಾಜ್ಯಪಾಲರು ತಿಳಿಸಿದರು. ಇದು ಸ್ವತಃ ಮೆಹಬೂಬಾರನ್ನೂ ಅಚ್ಚರಿಯಲ್ಲಿ ಕೆಡವಿತು.

Advertisement

ದಿನೇಶ್ವರ್‌ ನೂತನ ರಾಜ್ಯಪಾಲ?
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಜಮ್ಮು- ಕಾಶ್ಮೀರದ ಹಾಲಿ ರಾಜ್ಯಪಾಲ ಎನ್‌.ಎನ್‌. ವೋಹ್ರಾರ ಅಧಿಕಾರದ ಅವಧಿ ಜೂ.25ಕ್ಕೆ ಮುಕ್ತಾಯವಾಗಲಿದೆ. ಕಾಶ್ಮೀರ ವಿಚಾರಕ್ಕಾಗಿನ ಕೇಂದ್ರ ಸರಕಾರದ ಮುಖ್ಯ ಸಂಧಾನಕಾರ ದಿನೇಶ್ವರ್‌ ಶರ್ಮಾ ವೋಹ್ರಾ ಸ್ಥಾನದಲ್ಲಿ ನೇಮಕವಾಗಲಿದ್ದಾರೆ ಎಂದು ಹೇಳಲಾಗಿದೆ. ಜೂ.28ರಿಂದ 21 ದಿನಗಳ ಕಾಲ ಪವಿತ್ರ ಅಮರನಾಥ ಯಾತ್ರೆ ಆರಂಭವಾಗಲಿದೆ. ಚುನಾಯಿತ ಸರಕಾರವೂ ಸದ್ಯ ಪತನವಾಗಿರುವುದರಿಂದ ಈ ಅವಧಿಯ ಒಳಗಾಗಿ ಕೇಂದ್ರ ಸರಕಾರ ಹೊಸ ರಾಜ್ಯಪಾಲರ ನೇಮಕ ನಡೆಸಲಿದೆ ಎಂದು ಹೇಳಲಾಗಿದೆ. 2008ರಲ್ಲಿ ಅಂದಿನ ಯುಪಿಎ ಸರಕಾರ ಹಾಲಿ  ರಾಜ್ಯಪಾಲ ಎನ್‌.ಎನ್‌. ವೋಹ್ರಾರನ್ನು ನೇಮಕ ಮಾಡಿತ್ತು. 2013ರಲ್ಲಿ ಅವರನ್ನು 2ನೇ ಅವಧಿಗೆ ವಿಸ್ತರಿಸಲು ಮನಮೋಹನ್‌ ಸಿಂಗ್‌ ನೇತೃತ್ವದ ಸರಕಾರ ನಿರ್ಧರಿಸಿತ್ತು.

8ನೇ ಬಾರಿ ರಾಜ್ಯಪಾಲರ ಆಳ್ವಿಕೆ
ಕಳೆದ 4 ದಶಕಗಳಲ್ಲಿ ಜಮ್ಮು ಮತ್ತು ಕಾಶ್ಮೀರ ದಲ್ಲಿ ಒಟ್ಟು 7 ಬಾರಿ ರಾಜ್ಯಪಾಲರ ಆಳ್ವಿಕೆ ಹೇರಲಾಗಿದೆ. ಒಂದೊಮ್ಮೆ ಈಗಲೂ ರಾಜ್ಯಪಾಲರ ಆಳ್ವಿಕೆ ಬಂದರೆ ಇದು 8ನೇ ಬಾರಿಗೆ ಕೇಂದ್ರದ ಅಧಿಕಾರಕ್ಕೆ ಹೋದಂತೆ ಆಗುತ್ತದೆ. ಇನ್ನೂ ವಿಚಿತ್ರ ವೆಂದರೆ ಈ ಏಳರಲ್ಲಿ 4 ಬಾರಿ ರಾಜ್ಯ ಪಾಲರ ಆಳ್ವಿಕೆ ಬಂದದ್ದು ಹಾಲಿ ರಾಜ್ಯಪಾಲ  ವೋಹ್ರಾ ಅವರ ಕಾಲದಲ್ಲೇ.

ನಾನು ಬಿಜೆಪಿ ಪರವಾಗಿ ಮಾತನಾಡಲು ಸಾಧ್ಯವಿಲ್ಲ. ಬಿಜೆಪಿಯೇ ಮಾತನಾಡಬೇಕು. ಈ ಹೊಂದಾಣಿಕೆ ಮುರಿದುಬೀಳುತ್ತದೆ ಎಂಬುದು ನನಗೆ ಮೊದಲೇ ಗೊತ್ತಿತ್ತು. ಆದರೆ, ಇನ್ನೊಂದು ವರ್ಷವಾದ ಮೇಲೆ ಮುರಿದುಬೀಳುತ್ತದೆ ಎಂದೇ ಭಾವಿಸಿದ್ದೆ. 
– ಉಮರ್‌ ಅಬ್ದುಲ್ಲಾ, ಎನ್‌.ಸಿ. ಕಾರ್ಯಾಧ್ಯಕ್ಷ

ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿ ಉಳಿಸುವ ಮತ್ತು ರಾಜ್ಯದಲ್ಲಿ ಹದಗೆಟ್ಟಿ ರುವ ಪರಿಸ್ಥಿತಿಯನ್ನು ಹತೋಟಿಗೆ ತರುವ ಸಲುವಾಗಿ ಅಧಿಕಾರವನ್ನು ಬಲಿಕೊಡಲು ನಿರ್ಧರಿಸಿದ್ದೇವೆ. ರಾಜ್ಯದ ಆಡಳಿತವನ್ನು ರಾಜ್ಯಪಾಲರ ಕೈಗೆ ನೀಡಲು ಬಯಸುತ್ತೇವೆ. 
– ರಾಮ್‌ ಮಾಧವ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ

ಬಿಜೆಪಿ-ಪಿಡಿಪಿಯ ಅವಕಾಶವಾದಿ ಮೈತ್ರಿಯಿಂದಾಗಿ ಜಮ್ಮು ಮತ್ತು ಕಾಶ್ಮೀರ ಹೊತ್ತಿ ಉರಿದಿದ್ದು, ಇದರಿಂದಾಗಿ ಹಲವಾರು ಅಮಾಯಕರು ಮತ್ತು ಯೋಧರು ಸಾವಿಗೀಡಾಗಿದ್ದಾರೆ. ರಾಜ್ಯಪಾಲರ ಆಡಳಿತ ಬಂದರೂ ಅಲ್ಲಿನ ಪರಿಸ್ಥಿತಿ ಸುಧಾರಿಸಲು ಸಾಧ್ಯವೇ ಇಲ್ಲ ಎಂಬುವಷ್ಟರ ಮಟ್ಟಿಗೆ ಹಾಳಾಗಿ ಹೋಗಿದೆ.
– ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next