Advertisement

ಮೇಜರ್‌ ಸೇರಿ ನಾಲ್ವರು ಯೋಧರು ಹುತಾತ್ಮ

06:00 AM Dec 24, 2017 | |

ಜಮ್ಮು: ಗಡಿಯಲ್ಲಿ ಪದೇ ಪದೆ ಕಾಲು ಕೆರೆದುಕೊಂಡು ಬರುವ ಪಾಕಿಸ್ತಾನವು ಶನಿವಾರ ನಡೆಸಿದ ಕದನ ವಿರಾಮ ಉಲ್ಲಂಘನೆಗೆ ಸೇನೆಯ ಮೇಜರ್‌ ಹಾಗೂ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಪಾಕ್‌ ಸೇನೆ ನಡೆಸಿದ ಹೇಡಿ ಕೃತ್ಯದಿಂದಾಗಿ ಮೇಜರ್‌ ಮೋಹರR‌ರ್‌ ಪ್ರಫ‌ುಲ್ಲಾ ಅಂಬದಾಸ್‌ ಹಾಗೂ ಸಿಖ್‌ ಬೆಟಾಲಿಯನ್‌ನ ಯೋಧರಾದ ಪರ್ಗತ್‌ ಸಿಂಗ್‌ ಹಾಗೂ ಲ್ಯಾನ್ಸ್‌ ನಾಯ್ಕ ಗುರ್ಮೈಲ್‌ ಸಿಂಗ್‌ ಪ್ರಾಣತೆತ್ತಿದ್ದಾರೆ ಎಂದು ರಕ್ಷಣಾ ಮೂಲಗಳು ಮಾಹಿತಿ ನೀಡಿವೆ.

Advertisement

ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಅವರು ಜನರ ಅಹವಾಲುಗಳನ್ನು ಸ್ವೀಕರಿಸಲು ರಜೌರಿ ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲೇ ಈ ದಾಳಿ ನಡೆದಿದೆ. ಶನಿವಾರ ಮಧ್ಯಾಹ್ನ 12.15ರ ವೇಳೆಗೆ ಕೇರಿ ವಲಯದ ಎಲ್‌ಒಸಿಯಲ್ಲಿ ಭಾರತೀಯ ಸೇನೆಯ ಯೋಧರು ಗಸ್ತು ತಿರುಗುತ್ತಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನಿ ಪಡೆಗಳು ಏಕಾಏಕಿ ಗುಂಡಿನ ಸುರಿಮಳೆಗೈದವು. ಕೂಡಲೇ ಭಾರತೀಯ ಸೈನಿಕರೂ ಪ್ರತಿದಾಳಿ ನಡೆಸಿದರಾದರೂ, ಗುಂಡಿನ ಚಕಮಕಿ ವೇಳೆ ಮೇಜರ್‌ ಹಾಗೂ ಮೂವರು ಯೋಧರು ಅಸುನೀಗಿದರು. ಅಪ್ರಚೋದಿತ ದಾಳಿಯಿಂದ ಇಬ್ಬರು ಯೋಧರ ಸ್ಥಿತಿ ಗಂಭೀರವಾಗಿದೆ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.

ಹುತಾತ್ಮರಾದ ಮೇಜರ್‌ ಅಂಬದಾಸ್‌(32) ಅವರು ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯವರಾಗಿದ್ದು, ಪತ್ನಿ ಅವೋಲಿ ಮೋಹರ್ಕರ್‌ ಅವರನ್ನು ಅಗಲಿದ್ದಾರೆ. ಇನ್ನು ಗುರ್ಮೈಲ್‌ ಸಿಂಗ್‌(34) ಪಂಜಾಬ್‌ನ ಅಮೃತಸರದವರು. ಇವರಿಗೆ ಪತ್ನಿ ಕುಲ್ಜಿತ್‌ ಕೌರ್‌ ಹಾಗೂ ಮಗಳಿದ್ದಾರೆ. ಸೆಪಾಯ್‌ ಪರ್ಗತ್‌ ಸಿಂಗ್‌(30) ಹರ್ಯಾಣದ ಕರ್ನಾಲ್‌ ಜಿಲ್ಲೆಯವರಾಗಿದ್ದು, ಪತ್ನಿ ರಮಣ್‌ಪ್ರೀತ್‌ ಹಾಗೂ ಪುತ್ರನನ್ನು ಅಗಲಿದ್ದಾರೆ. ಮೂವರೂ ವೀರ ಯೋಧರಾಗಿದ್ದು, ಇವರ ತ್ಯಾಗವನ್ನು ದೇಶ ಯಾವತ್ತೂ ಸ್ಮರಿಸಲಿದೆ ಎಂದು ಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ನಿರಂತರ ದಾಳಿ:
ಎಲ್‌ಒಸಿಯುದ್ದಕ್ಕೂ ಆಗಾಗ್ಗೆ ಪಾಕ್‌ ಸೇನೆ ಗುಂಡಿನ ದಾಳಿ ನಡೆಸುತ್ತಲೇ ಇರುತ್ತದೆ. ನವೆಂಬರ್‌ 16ರಂದು ಪೂಂಛ…ನ ಶಾಹಪುರ್‌ ಮತ್ತು ದೇಗ್ವಾರ್‌ ಪ್ರದೇಶದಲ್ಲಿ ಪಾಕಿಸ್ತಾನಿ ಸೇನೆಯು ಶೆಲ್‌ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಗುಲ್‌ಪುರ್‌ ಮತ್ತು ನಾಕರ್‌ಕೋಟೆ ಪ್ರದೇಶದಲ್ಲಿನ ಎಲ್ಲ ಶಾಲೆಗಳನ್ನು ಮುಚ್ಚಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.

ಈ ವರ್ಷ 300 ಘಟನೆಗಳು:
ಪ್ರಸಕ್ತ ವರ್ಷ ಪಾಕಿಸ್ತಾನ ಗಡಿಯಲ್ಲಿ ಸುಮಾರು 300 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಯೋಧರು ಹಾಗೂ ನಾಗರಿಕರು ಸೇರಿದಂತೆ 12ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. 2016ರಲ್ಲಿ 228 ಬಾರಿ ಕದನ ವಿರಾಮ ಉಲ್ಲಂ ಸಿತ್ತು.

Advertisement

ಪರಿಣಾಮ ಏನಾಗಿತ್ತು?:
ಗಡಿ ಪ್ರಕ್ಷುಬ್ಧತೆಯಿಂದಾಗಿ ಪೂಂಛ…- ರಾವಲಕೋಟೆ ರಸ್ತೆಯಲ್ಲಿ ನಡೆಯುತ್ತಿದ್ದ ವ್ಯಾಪಾರ-ವಹಿವಾಟು ಹಾಗೂ ಸಂಚಾರ 4 ತಿಂಗಳ ಕಾಲ ಸ್ಥಗಿತಗೊಂಡಿತ್ತು. ನೌಶೇರಾ ವಲಯದಲ್ಲಿನ ಅನೇಕ ನಾಗರಿಕರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದರು. ಕಳೆದವಾರ ವಹಿವಾಟು ಮತ್ತೆ ಆರಂಭವಾಗಿದ್ದರೂ, ಇಲ್ಲಿಂದ ವಲಸೆ ಹೋದ ಜನ ಮಾತ್ರ ಇನ್ನೂ ವಾಪಸ್‌ ಬಂದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಪಾಕಿಸ್ತಾನವು ಇಂಥ ಹೇಡಿತನದ ಕೃತ್ಯಗಳನ್ನು ನಡೆಸುತ್ತಲೇ ಬಂದಿದೆ. ಇದಕ್ಕೆ ಭಾರತವೂ ತಕ್ಕ ಪ್ರತ್ಯುತ್ತರ ನೀಡಿದೆ. ಆದರೂ ಪಾಕ್‌ ತನ್ನ ಕುಕೃತ್ಯಗಳನ್ನು ನಿಲ್ಲಿಸುತ್ತಿಲ್ಲ. ಅದೊಂದು ಭಯೋತ್ಪಾದಕ ದೇಶ.
– ನಿರ್ಮಲ್‌ ಸಿಂಗ್‌, ಜಮ್ಮು-ಕಾಶ್ಮೀರ ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next