Advertisement
ವರ್ಷದಲ್ಲಿ ಎರಡು ಮೂರು ಹುಣ್ಣಿಮೆಗಳು ಸೂಪರ್‌ಮೂನ್ ಆಗುತ್ತವೆ. ಅಂದು ಚಂದ್ರ ಸಹಜಕ್ಕಿಂತ ಸುಮಾರು 14 ಪಟ್ಟು ದೊಡ್ಡದಾಗಿ ಕಂಡು 28 ಪಟ್ಟು ಹೆಚ್ಚು ಪ್ರಭೆಯಿಂದ ಕೂಡಿರುತ್ತಾನೆ. ಚಂದ್ರ ದೀರ್ಘವೃತ್ತದಲ್ಲಿ ಭೂಮಿಯನ್ನು ಪರಿ ಭ್ರಮಿಸುತ್ತಿರುವುದರಿಂದ 28 ದಿನಗಳಿಗೊಮ್ಮೆ ಸಮೀಪವಿರುತ್ತಾನೆ (ಪೆರಿಜಿ) ಹಾಗೂ ಇನ್ನೊಮ್ಮೆ ದೂರದಲ್ಲಿರುತ್ತಾನೆ (ಎಪೊಜಿ). ಭೂಮಿ ಹಾಗೂ ಚಂದ್ರನ ದೂರ ಸರಾಸರಿ ಸುಮಾರು 3.84 ಲಕ್ಷ ಕಿ.ಮೀ. ದೀರ್ಘವೃತ್ತದಲ್ಲಿ ಪರಿಭ್ರಮಿಸುತ್ತ ಹತ್ತಿರ ಬಂದಾಗ 3.56 ಲ.ಕಿ.ಮೀ ದೂರದಲ್ಲಿರುತ್ತಾನೆ ಹಾಗೂ ಇನ್ನೊಮ್ಮೆ 4.6 ಲ.ಕಿ.ಮೀ. ದೂರಕ್ಕೆ ಹೋಗುತ್ತಾನೆ. ಸೂಪರ್‌ಮೂನ್ ಚಂದ್ರ ಹತ್ತಿರಕ್ಕೆ ಬರುವ ವಿದ್ಯಮಾನವಾಗಿದ್ದು, ಆಗ ಸರಾಸರಿಗಿಂತ ಸುಮಾರು 30,000 ಕಿ.ಮೀ. ಸಮೀಪ ಚಂದ್ರನಿರುವುದರಿಂದ ದೊಡ್ಡದಾಗಿ ನಮಗೆ ಕಾಣಿಸುತ್ತಾನೆ. ಬುಧವಾರ ಸೂಪರ್‌ಮೂನ್ ಚಂದ್ರ 3,58,995 ಕಿ.ಮೀ. ದೂರದಲ್ಲಿರುತ್ತಾನೆ.
ಚಂದ್ರಗ್ರಹಣವಾಗಬೇಕಾದರೆ ಸೂರ್ಯ, ಭೂಮಿ, ಚಂದ್ರ ಸರಳರೇಖೆಯಲ್ಲಿರಬೇಕು. ಹಾಗಾದಾಗ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳದೆ ಗ್ರಹಣ ಸಂಭವಿಸುತ್ತದೆ. ಜ. 31ರಂದು ಖಗ್ರಾಸ ಗ್ರಹಣದೊಂದಿಗೆ ಚಂದ್ರೋದಯವಾಗುತ್ತದೆ. ಅಂದರೆ ಸೂರ್ಯನ ಬೆಳಕು ಬೀಳದ ಚಂದ್ರನ ಉದಯ. ಖಗ್ರಾಸ ಚಂದ್ರಗ್ರಹಣದಲ್ಲಿ ಸೂರ್ಯನ ಬೆಳಕು ನೇರವಾಗಿ ಚಂದ್ರನ ಮೇಲೆ ಬೀಳದಿದ್ದರೂ ಭೂಮಿಯ ವಾತಾವರಣದಿಂದ ಚದುರಿದ ಬೆಳಕು ಚಂದ್ರನ ಮೇಲೆ ಬೀಳುತ್ತದೆ. ಹಾಗಾಗಿ ಖಗ್ರಾಸ ಗ್ರಹಣಗ್ರಸ್ತ ಚಂದ್ರ ತಾಮ್ರವರ್ಣದಲ್ಲಿ ಕಾಣಿಸುತ್ತಾನೆ. ಇದೊಂದು ಪ್ರಕೃತಿಯ ಸುಂದರ ವಿದ್ಯಮಾನ, ನೆರಳು ಬೆಳಕಿನ ಆಟ. ಗ್ರಹಣ ವೀಕ್ಷಣೆ
ಈ ಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದು, ಎತ್ತರದಲ್ಲಿ ನಿಂತು ಚಂದ್ರೋದಯ ವೀಕ್ಷಿಸಬಹುದು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸಂಯೋಜಕ ಡಾ| ಎ.ಪಿ. ಭಟ್ ತಿಳಿಸಿದ್ದಾರೆ.
Related Articles
. ಖಗ್ರಾಸ ಗ್ರಹಣ ಆರಂಭ: 6.21 ಗಂಟೆ
. ಚಂದ್ರೋದಯ ಸಮಯ: 6.29 ಗಂಟೆ
. ಗರಿಷ್ಠ ಗ್ರಹಣ ಸಮಯ: 6.59 ಗಂಟೆ
. ಖಗ್ರಾಸ ಗ್ರಹಣ ಅಂತ್ಯ: 7.37 ಗಂಟೆ
. ಗ್ರಹಣ ಮುಕ್ತಾಯ: 8.41 ಗಂಟೆ
Advertisement