ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನಗರದ ಎರಡು ಮಸೀದಿಗಳ ಮೇಲೆ ದುಷ್ಕರ್ಮಿಗಳು ಶುಕ್ರವಾರ (ಸ್ಥಳೀಯ ಕಾಲಮಾನ ಪ್ರಕಾರ ಮಧ್ಯಾಹ್ನ) ಗುಂಡಿನ ದಾಳಿ ನಡೆಸಿದ್ದು 40 ಮಂದಿ ನಾಗರಿಕರು ಸಾವನ್ನಪ್ಪಿದ್ದು, ಈ ಸಂದರ್ಭ ಮಸೀದಿಯಲ್ಲಿದ್ದ ಬಾಂಗ್ಲಾ ಕ್ರಿಕೆಟಿಗರು ಪಾರಾಗಿದ್ದಾರೆ.
ಕ್ರೈಸ್ಟ್ ಚರ್ಚ್ ನ ಎರಡೂ ಮಸೀದಿಗಳ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ನಡೆದಾಗ ಬಾಂಗ್ಲಾದೇಶ ಕ್ರಿಕೆಟಿಗರು ಹೇಗ್ಲೇಯ್ ಪಾರ್ಕ್ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಬಾಂಗ್ಲಾ ಆಟಗಾರರು ಕ್ರೈಸ್ಟ್ ಚರ್ಚ್ ಗೆ ಆಗಮಿಸಿದ್ದರು. ಬಾಂಗ್ಲಾ ಆಟಗಾರ ತಮೀಮ್ ಇಕ್ಬಾಲ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಈ ದಾಳಿಯಿಂದ ಬಾಂಗ್ಲಾ ತಂಡಕ್ಕೆ ಯಾವುದೇ ಹಾನಿಯಾಗಿಲ್ಲ. ತಂಡ ಸುರಕ್ಷಿತವಾಗಿದೆ. ಇದೊಂದು ಭಯಾನಕ ಅನುಭವ ಎಂದು ಬರೆದಿದ್ದಾರೆ.
ನ್ಯೂಜಿಲ್ಯಾಂಡ್ ಪ್ರಧಾನ ಮಂತ್ರಿ ಜೆಸಿಂಡಾ ಆರ್ಡರ್ನ್ ದಾಳಿಯನ್ನು ಖಂಡಿಸಿದ್ದು, ನ್ಯೂಜಿಲ್ಯಾಂಡ್ ಗೆ ಇದು ಒಂದು ಕರಾಳ ದಿನ ಎಂದಿದ್ದಾರೆ.