Advertisement

ಕಟ್ಟಕಡೆ ವ್ಯಕ್ತಿಗಾಗಿ ಕೆಲಸ ಮಾಡಿದ್ದೇನೆ

06:13 PM Mar 16, 2018 | Team Udayavani |

ಹೊನ್ನಾವರ: ಘಂಟಾ ಘೋಷವಾಗಿ ಹೇಳುತ್ತೇನೆ. ನಾನು ಈ ಐದು ವರ್ಷ ಶಾಸಕನಾಗಿ ಜನಸಾಮಾನ್ಯರಿಗಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಆಶಯಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ಸ್ವಂತಕ್ಕಾಗಿ, ಕುಟುಂಬಕ್ಕಾಗಿ ಏನೂ ಮಾಡಿಲ್ಲ ಎಂದು ಶಾಸಕ ಮಂಕಾಳ ವೈದ್ಯ ಹೇಳಿದರು. ಅವರು ತಾಪಂ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ತಮ್ಮ 12ವರ್ಷದ
ರಾಜಕೀಯ ಜೀವನದಲ್ಲಿ ಐದು ವರ್ಷ ಈ ಶಾಸಕತ್ವದ ಅವಧಿ ಅಂತಿಮವಾಗಲು 2ತಿಂಗಳು ಬಾಕಿ ಇದೆ. ಈ ಐದು ವರ್ಷದಲ್ಲಿ ಕೈಗೊಂಡಿರುವ ಅಭಿವೃದ್ಧಿ ಗಮನಾರ್ಹ ಸಾಧನೆ ತೃಪ್ತಿ ಸಂತೋಷ ತಂದಿದೆ ಎಂದರು.

Advertisement

ಜಿಲ್ಲಾಡಳಿತ ನೀಡಿದ ಪಟ್ಟಿಯಂತೆ ಕ್ಷೇತ್ರದಲ್ಲಿ ಪ್ರಸಕ್ತ 1266ಕೋಟಿ ರೂ, ಅನುದಾನದ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಉದ್ಘಾಟನೆ ಮಾಡುವ ಮೂಲಕ ಇವೆಲ್ಲ ಸುಳ್ಳು ಎನ್ನುವವರಿಗೆ ಉತ್ತರ ನೀಡಿದ್ದಾರೆ. ಕ್ಷೇತ್ರದಲ್ಲಿ 50ಸೇತುವೆ ಮಂಜೂರಿ 
ತಂದಿದ್ದೇನೆ.ನಮ್ಮ ಹಳ್ಳಿ ನಮ್ಮಗ್ರಾಮ ಯೋಜನೆಯಡಿ 150ಕೋಟಿ ರೂ.ಗಳಿಗೂ ಅಧಿಕ ಅನುದಾನ ಮಂಜೂರಿ ತಂದು 15ಸೇತುವೆ, 45ಕಿ. ಮೀ. ಕಾಂಕ್ರೀಟ್‌ ರಸ್ತೆ ಕಾಮಗಾರಿ ನಡೆದಿದೆ. ಕ್ಷೇತ್ರದಲ್ಲಿನ ಅನಾರೋಗ್ಯ ಪೀಡಿತರ ನೆರವಿಗೆ 3.5ಕೋಟಿ ರೂ,ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವಿತರಿಸಲಾಗಿದೆ. ಗುಣಮಟ್ಟದ ಶಿಕ್ಷಣ ಪಡೆಯಲು ಬಡಮಕ್ಕಳಿಗೆ ಅನುಕೂಲ ಆಗುವಂತೆ ಹೊನ್ನಾವರ ತಾಲೂಕಿಗೆ 2ಅಂಬೇಡ್ಕರ ಶಾಲೆ ಮಂಜೂರಿ ತಂದಿದ್ದು,ಮಂಕಿಯಲ್ಲಿ 17ಕೊಟಿ 70ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ನಡೆದಿದೆ. ಸ್ವಂತ ನಿವೇಶನವನ್ನೂ ಮಂಜೂರಿ ಪಡೆಯಲಾಗಿದೆ. ಹೆರಂಗಡಿಯಲ್ಲಿ 22ಕೋಟಿ ಅಂದಾಜು ವೆಚ್ಚದಲ್ಲಿ ಅಂಬೇಡ್ಕರ ಶಾಲೆ ಅನುಷ್ಠಾಗೊಳ್ಳಲಿದೆ. ಕಳೆದ 25ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಆಗಿರದ ಸಾಧನೆಯನ್ನು ಈ ಐದು ವರ್ಷದಲ್ಲಿ ಮಾಡಿರುವ ಬಗ್ಗೆ ಹೆಮ್ಮೆ ಇದೆ. ಅಭಿವೃದ್ಧಿ ವಿಷಯದಲ್ಲಿ ಪಕ್ಷ ರಾಜಕಾರಣ ಸಲ್ಲದು. ತಮ್ಮ ಈ ಎಲ್ಲ ಸಾಧನೆಗಳಿಗೆ ವಿವಿಧ ಇಲಾಖೆ ಅಧಿಕಾರಿಗಳ, ಮಾಧ್ಯಮದವರ, ಬಡವರ, ಇಲ್ಲಿನ ಪರಿಸ್ಥಿತಿ, ಜನಪ್ರತಿನಿಧಿಗಳ ಸಹಕಾರ ಕಾರಣವಾಗಿದೆ ಎಂದರು.

ಮಾಗೋಡ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ: ಮಾಗೋಡ ವಿದ್ಯಾರ್ಥಿನಿ ಮೇಲೆ ಹಲ್ಲೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಅದಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರಲ್ಲೇ ಕೇಳಬೇಕಿದೆ. ತಮ್ಮ ಕುಮ್ಮಕ್ಕಿದೆ ಎನ್ನುವವರು ದಾಖಲೆ ನೀಡಲಿ. ಮಾಧ್ಯಮಗಳು ಹೇಳಿಕೆಗಳನ್ನು ಆರೋಪಗಳನ್ನು ಪುರಾವೆ ಇಲ್ಲದೇ ಪ್ರಕಟಿಸಬಾರದು. ಆ ಹುಡುಗ ಬೀನಾ ವೈದ್ಯ
ಶಿಕ್ಷಣ ಸಂಸ್ಥೆಯಲ್ಲಿ 10ತಿಂಗಳು ಕೆಲಸ ಮಾಡಿದ್ದಾನೆ. ಪಗಾರು ಕೊಡಲಿಲ್ಲ ಎನ್ನುವವರು ದಾಖಲೆ ನೀಡಲಿ. ಆತ 2ತಿಂಗಳ ವೇತನ ತೆಗೆದುಕೊಂಡು ಹೋದಬಗ್ಗೆ ದಾಖಲೆ ಶಿಕ್ಷಣ ಸಂಸ್ಥೆಯಲ್ಲಿದೆ. ಬೀನಾ ವೈದ್ಯ ಶಿಕ್ಷಣ ಸಂಸ್ಥೆ ಕಟ್ಟಲು 15ಕೋಟಿ ಸಾಲ ಮಾಡಿದ್ದೇನೆ. ಶಿಕ್ಷಣ ಕ್ಷೇತ್ರದಲ್ಲಿ ಕೀಳು ರಾಜಕೀಯ ಮಾಡಬಾರದು ಎಂದು ಮಾಗೋಡು ಮಹಿಳಾ ವಾಹಿನಿಯ ಆರೋಪಗಳಿಗೆ ಮಂಕಾಳ ವೈದ್ಯರು
ಪ್ರತಿಕ್ರಿಯಿಸಿದರು.

ತಾಪಂ ಅಧ್ಯಕ್ಷ ಉಲ್ಲಾಸ ನಾಯ್ಕ, ಉಪಾಧ್ಯಕ್ಷೆ ಲಲಿತಾ ಈಶ್ವರ ನಾಯ್ಕ, ತಾಪಂ ಇಒ, ಜಿಪಂ ಸದಸ್ಯರಾದ ಶಿವಾನಂದ ಹೆಗಡೆ ಕಡತೋಕಾ, ಸವಿತಾ ಕೃಷ್ಣ ಗೌಡ, ಕೆಪಿಸಿಸಿ ಸದಸ್ಯ ವಿನೋದ ನಾಯ್ಕ ಕರ್ಕಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next