Advertisement

ಐವನ್‌ ಕೈಪಿಡಿ ಸುಳ್ಳಿನ ಕಂತೆ: ಜಿತೇಂದ್ರ ಕೊಟ್ಟಾರಿ

01:00 AM Mar 19, 2019 | Team Udayavani |

ಮಂಗಳೂರು: ರಫೇಲ್‌ ಒಪ್ಪಂದದ ಬಗ್ಗೆ ಇತ್ತೀಚೆಗೆ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಬಿಡುಗಡೆ ಮಾಡಿರುವ ಸಾರ್ವಜನಿಕ ಕೈಪಿಡಿ ಸುಳ್ಳಿನ ಕಂತೆಯಾಗಿದೆ. ಇದು ಖಂಡನೀಯ ಎಂದು ಬಿಜೆಪಿ ಜಿಲ್ಲಾ ವಕ್ತಾರ ಜಿತೇಂದ್ರ ಕೊಟ್ಟಾರಿ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ರಫೇಲ್‌ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ರಾಷ್ಟ್ರಮಟ್ಟದಲ್ಲಿ ಕೈಪಿಡಿ ಬಿಡುಗಡೆ ಮಾಡಬೇಕಿತ್ತು. ಜಿಲ್ಲೆಗೆ ಸೀಮಿತವಾಗಿ ಜಿಲ್ಲಾ ಮುಖಂಡರು ಕೈಪಿಡಿ ಬಿಡುಗಡೆ ಮಾಡಿರುವುದೇ ಈ ವಿಷಯದಲ್ಲಿ ಸತ್ಯಾಂಶವಿಲ್ಲ ಎಂಬುದರ ದ್ಯೋತಕವಾಗಿದೆ. ರಫೇಲ್‌ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ಕ್ಲೀನ್‌ಚಿಟ್‌ ನೀಡಿದೆ. ಕಾಂಗ್ರೆಸ್‌ ಸುಪ್ರೀಂ ಕೋರ್ಟನ್ನು ಕೂಡ ನಂಬುವುದಿಲ್ಲ. ಕೈಪಿಡಿಯಲ್ಲಿರುವ ವಿಷಯ ಸುಳ್ಳು ಎಂಬ ಬಗ್ಗೆ ಚರ್ಚೆಗೆ ನಾವು ಸಿದ್ಧ. ಕಾಂಗ್ರೆಸ್‌ ವೇದಿಕೆ ಸಿದ್ಧಪಡಿಸಿದರೆ 012ಕೈಪಿಡಿಯಲ್ಲಿರುವ ವಿಷಯ ಸುಳ್ಳು ಎಂಬುದನ್ನು ಸಾಬೀತು ಮಾಡುತ್ತೇವೆ ಎಂದು ಹೇಳಿದರು.

ರಫೇಲ್‌ ವಿಷಯದ ಬಗ್ಗೆ ಕಾಂಗ್ರೆಸ್‌ ಬಳಿ ಯಾವುದೇ ಕುರುಹು, ಸಾಕ್ಷ್ಯ ಇಲ್ಲ. 2019ರ ಲೋಕಸಭಾ ಚುನಾವಣೆ ಎದುರಿಸುವಲ್ಲಿ ಆಡಳಿತ ವಿರೋಧಿ ಅಲೆ ಇಲ್ಲದೆ ಕಾಂಗ್ರೆಸ್‌ ಪರದಾಡುವ ಸ್ಥಿತಿಯಿದೆ. ಮೋದಿ ಅವರು ಹೇಳಿದ, “ನಾನು ತಿನ್ನುವುದಿಲ್ಲ, ನನ್ನ ಜತೆ ಇದ್ದವರನ್ನೂ ತಿನ್ನಲು ಬಿಡುವುದಿಲ್ಲ’ ಎಂಬ ಮಾತನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದ ಕೈಪಿಡಿಯಲ್ಲಿ ಉಲ್ಲೇಖೀಸಿ ಟೀಕಿಸಲಾಗಿದೆ ಎಂದರು.

ಕಾಂಗ್ರೆಸ್‌ಗೆ ತಿರುಗುಬಾಣ
ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಇದ್ದಾಗ ನಾವೂ ತಿನ್ನುತ್ತೇವೆ, ಜತೆಯಲ್ಲಿ ಇದ್ದವರನ್ನೂ ತಿನ್ನಲು ಬಿಡುತ್ತೇವೆ’ ಎಂಬ ಸ್ಥಿತಿಯಿತ್ತು. ಮೋದಿ ಸರಕಾರ ಸಬ್‌ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂಬ ಧ್ಯೇಯದೊಂದಿಗೆ ಜನಪರ ಆಡಳಿತ ನೀಡಿದೆ. ಅಲ್ಪಸಂಖ್ಯಾಕರು, ದಲಿತರು ಎಂದು ಪ್ರತ್ಯೇಕಿಸದೆ ದೇಶದ 125 ಕೋಟಿ ಜನರಿಗೂ ಯೋಜನೆಗಳನ್ನು ನೀಡಿದೆ. ಚೌಕೀದಾರ್‌ ಚೋರ್‌ ಹೇ ಎಂಬ ರಾಹುಲ್‌ ಗಾಂಧಿ ಆರೋಪ ಕಾಂಗ್ರೆಸ್‌ಗೆ
ಈಗ ತಿರುಗುಬಾಣವಾಗಿದ್ದು, ದೇಶಾದ್ಯಂತ ಯುವಜನತೆ ನಾನೂ ಚೌಕಿದಾರ ಎಂಬ ಅಭಿಯಾನ ಆರಂಭಿಸಿದ್ದಾರೆ ಎಂದರು.

ರಕ್ಷಣೆಯ ವಿಷಯದಲ್ಲಿ ಮೋದಿ ಸರಕಾರ ಕೈಗೊಂಡ ನಿರ್ಧಾರ ದೇಶದ ಜನತೆಗೆ ಗೊತ್ತಿದೆ. ನೋಟ್‌ ಬ್ಯಾನ್‌, ಕಪ್ಪು ಹಣ ವಿರುದ್ಧದ ಹೋರಾಟದಿಂದ ಕೆಲವು ಕಾಂಗ್ರೆಸ್‌ ನಾಯಕರಿಗೆ, ನಕ್ಸಲರಿಗೆ ಮಾತ್ರ ತೊಂದರೆಯಾಗಿದೆ. ಆದರೂ ಕಾಂಗ್ರೆಸ್‌ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯುತ್ತಿದೆ. ಜನರು ಇದನ್ನು ಒಪ್ಪುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಉತ್ತರ ನೀಡಲಿದ್ದಾರೆ ಎಂದು ಜಿತೇಂದ್ರ ಕೊಟ್ಟಾರಿ ಹೇಳಿದರು.
ಮಾಜಿ ಕಾರ್ಪೊರೇಟರ್‌ ಪ್ರೇಮಾನಂದ ಶೆಟ್ಟಿ, ಸತೀಶ ಪ್ರಭು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next