ಉಡುಪಿ: ಹೊನ್ನಾವರದ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ಅಧಿಕಾರ ಪಡೆದ ಬಿಜೆಪಿಯ ಸ್ವಾರ್ಥ ರಾಜಕೀಯ ನಿಲುವನ್ನು ಜನರಿಗೆ ಮುಟ್ಟಿಸುವ ಉದ್ದೇಶದಿಂದ ನ. 24ರಂದು ಕುಮಟಾದಲ್ಲಿ ಜನಜಾಗೃತಿ ಸಮಾವೇಶವನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ ಎಂದು ರಾಜ್ಯ ಮುಖ್ಯ ವಕ್ತಾರ ಐವನ್ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಿಜೆಪಿ ಹೇಗೆ ಕೋಮು ಸಂಘರ್ಷ ಸೃಷ್ಟಿಸಿ ರಾಜ್ಯ, ಕೇಂದ್ರದಲ್ಲಿ ಗೆಲುವು ಸಾಧಿಸಿದೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ. ಇದೀಗ ಸಿಬಿಐ ತನಿಖೆ ಮುಗಿದಿದ್ದು, ಪರೇಶ್‌ರದ್ದು ಕೊಲೆಯಲ್ಲ, ಸಹಜ ಸಾವು ಎಂದು ಬಿ ರಿಪೋರ್ಟ್ ಸಲ್ಲಿಸಿದೆ. ಕೊಲೆ ಪ್ರಕರಣವನ್ನು ಅಂದಿನ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಸಿಒಡಿ ವಹಿಸಿದ್ದರೆ, ಸಂಸದೆ ಶೋಭಾ ಕರಂದ್ಲಾಜೆ, ಅನಂತ್‌ಕುಮಾರ್ ಹೆಗಡೆ ಸಹಿತ ಮೊದಲಾದ ಬಿಜೆಪಿ ನಾಯಕರು ಸಿಬಿಐ ತನಿಖೆಗೆ ಆಗ್ರಹಿಸಿದ್ದರು ಎಂದರು.
ಕುಮಟಾ ಸಮಾವೇಶದಲ್ಲಿ ಕರಾವಳಿ ಜಿಲ್ಲೆಗಳ ಲಕ್ಷಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ. ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸಹಿತ 40 ಶಾಸಕರು ಭಾಗವಹಿಸಲಿದ್ದಾರೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಭಾಸ್ಕರ್ ರಾವ್ ಕಿದಿಯೂರು, ಬಿ. ಕುಶಾಲ ಶೆಟ್ಟಿ, ಅಣ್ಣಯ್ಯ ಶೇರಿಗಾರ್, ಕೀರ್ತಿ ಶೆಟ್ಟಿ, ಜಯ ಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.