ಮೈಸೂರು: ಪ್ರಸ್ತುತ ಸಂದರ್ಭದಲ್ಲಿ ಕುಡಿಯುವ ನೀರು ಮಾರಾಟದ ವಸ್ತುವಾಗಿದ್ದು, ಪರಿಸರ ಮಾಲಿನ್ಯ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಸಿರಾಡಲು ಹಣ ನೀಡಿ ಗಾಳಿ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಪಿಜಿಎಂ ಪಾಟೀಲ್ ಆತಂಕ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಿಕ್ಷಣ ಇಲಾಖೆ, ಭಾರತೀಯ ಎಂಜಿನಿಯರ್‌ಗಳ ಸಂಸ್ಥೆ ಹಾಗೂ ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿ ನಾಶಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಹಲವು ಮಹತ್ತರದ ತೀರ್ಪುಗಳನ್ನು ನೀಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಿದೆ. ಆದರೆ ಜೂ.5ರಂದು ವಿಶ್ವಪರಿಸರ ದಿನವನ್ನು ಆಚರಿಸಿದರೆ ಸಾಕೆ? ಎಂಬುದನ್ನು ಗಮನಿಸಿದರೆ ನಾವು ಯಾವ ಸ್ಥಿತಿಗೆ ಬಂದು ನಿಂತಿದ್ದೇವೆ, ನಮ್ಮ ಪರಿಸರವನ್ನು ಹೇಗೆ ಇಟ್ಟುಕೊಂಡಿದ್ದೇವೆ ಎಂಬುದು ಗೊತ್ತಾಗಲಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ತಲೆಮಾರಿನವರ ಜೀವನ ಹೇಗೆ ಎಂಬ ಆತಂಕ ಮೂಡಲಿದ್ದು, ಮನುಷ್ಯ ಪರಿಸರದ ಅವಿಭಾಜ್ಯ ಅಂಗವೆಂದು ಹೇಳುತ್ತಾರೆ. ಆದರೆ ಮನುಷ್ಯ ತಮ್ಮ ಸ್ವಾರ್ಥ ಹಾಗೂ ದುರುದ್ದೇಶಗಳಿಂದ ಪರಿಸರವನ್ನು ನಾಶಪಡಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಪರಿಸರ ನಾಶದಿಂದಾಗಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ದೃಷ್ಟಿಯಿಂದ ವಿಶ್ವಸಂಸ್ಥೆ 1972ರಲ್ಲಿ ವಿಶ್ವ ಪರಿಸರ ದಿನ ಆಚರಿಸಲು ನಿರ್ಧರಿಸಿತು. ಈ ಹಿಂದೆ ನಮ್ಮ ಹಿರಿಯರು ಕುಡಿಯುವ ನೀರನ್ನು ಎಂದು ಖರೀದಿಸಿದವರಲ್ಲ, ಆದರೆ ಇಂದು ಕುಡಿಯುವ ನೀರು ಮಾರಾಟದ ವಸ್ತುವಾಗಿದ್ದು, ಪರಿಸರದ ನಾಶ ಹೀಗೆ ಮುಂದುವರೆದಲ್ಲಿ ಮುಂದಿನ ಪೀಳಿಗೆ ಹಣ ನೀಡಿ ಉಸಿರಾಡಲು ಗಾಳಿ ಪಡೆದುಕೊಳ್ಳಬೇಕಾಗುತ್ತದೆ. ಪರಿಸರ ಸಮತೋಲನದಿಂದ ಕೂಡಿದ್ದರೆ ಸಕಲವೂ ಸುಸ್ಥಿರವಾಗಿ ಇರಲಿದೆ ಇಲ್ಲವಾದಲ್ಲಿ ಪ್ರತಿಯೊಂದಕ್ಕೂ ಹಾಹಾಕಾರ ಉಂಟಾಗಲಿದ್ದು, ಈ ಬಗ್ಗೆ ಎಚ್ಚೆತ್ತುಕೊಳ್ಳುವುದು ಉತ್ತಮ ಎಂದರು.
ಪರಿಸರ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಆಯೋಜಿಸಿದ್ದ ಪ್ರಬಂಧ ಹಾಗೂ ಚಿತ್ರ ಬರೆಯುವ ಸ್ಪರ್ಧೆಗಳಲ್ಲಿ ವಿಜೇತರಾದ 18 ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಲಯ ಕಚೇರಿ ಹಿರಿಯ ಅಧಿಕಾರಿ ಎಂ.ಜಿ.ಯತೀಶ್, ಡಿಡಿಪಿಐ ಎಚ್.ಆರ್.ಬಸಪ್ಪ, ಪರಿಸರ ಅಧಿಕಾರಿ ಎಂ.ಜಿ.ರಘುರಾಮ್, ಎಂಜಿನಿಯರ್ ಸಂಸ್ಥೆ ಅಧ್ಯಕ್ಷ ಚಿನ್ನಸ್ವಾಮಿ, ಕಾರ್ಯದರ್ಶಿ ಬಿ.ವಿ.ರವೀಂದ್ರನಾಥ್ ಹಾಗೂ ಜನಜಾಗೃತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯನಿರ್ವಹಕ ನಿರ್ದೇಶಕ ವಿ.ಎನ್.ಮೂರ್ತಿ ಹಾಜರಿದ್ದರು.