Advertisement
ಅಮ್ಮನ ಮಡಿಲಿನ ನಂತರ ಕೂಸನ್ನು ಬೆಚ್ಚಗಿಡುವ ಎರಡನೇ ತಾಣವೇ ತೊಟ್ಟಿಲು. ಅದನ್ನು, ಕೂಸಿನ ಎರಡನೇ ಅಮ್ಮ ಅಂದರೆ ತಪ್ಪಾಗದೇನೋ. ಹಾಗಾಗಿಯೇ ನಮ್ಮ ಹಿರಿಯರು ತೊಟ್ಟಿಲನ್ನು ಜಡ ವಸ್ತುವಿನಂತೆ ಕಾಣದೆ, ಅದರೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದ್ದರು. ಹೆಣ್ಣಿನ ಪಾಲಿಗೆ, ತೊಟ್ಟಿಲು ಎಂಬುದು ತವರುಮನೆಯ ನಂಟಿನ ಸಂಕೇತ. ತೊಟ್ಟಿಲು ಹೊತ್ಕೊಂಡು, ತೌರ್‌ಬಣ್ಣ ಉಟ್ಕೊಂಡು, ಅಪ್ಪ ಕೊಟ್ಟೆಮ್ಮೆ ಹೊಡ್ಕೊಂಡು, ತಿಟØತ್ತಿ ತಿರುಗಿ ನೋಡ್ಯಾಳ…ಅಂತ ಜಾನಪದ ಗೀತೆಯೇ ಇದೆಯಲ್ಲ… ಕೊನೆತನಕ ತವರ ನೆನಪಾಗಿ ಉಳಿವ ವಸ್ತುಗಳಲ್ಲಿ ತೊಟ್ಟಿಲೂ ಒಂದು. ಅಂಥ ತೊಟ್ಟಿಲಿನ ತಯಾರಿಕೆಯಿಂದಲೇ ಹೆಸರುವಾಸಿಯಾದ ಊರು, ಧಾರವಾಡ ಜಿಲ್ಲೆಯ ಕಲಘಟಗಿ.
ಕಲಘಟಗಿ ತೊಟ್ಟಿಲುಗಳ ಪ್ರಮುಖ ಆಕರ್ಷಣೆಯೇ ಅವುಗಳ ಗುಣಮಟ್ಟ ಮತ್ತು ಅವುಗಳ ಮೇಲಿರುವ ಚಿತ್ತಾರಗಳು. ತೇಗ/ ಸಾಗುವಾನಿ ಮರದಿಂದ ತಯಾರಿಸಲ್ಪಡುವ ಈ ತೊಟ್ಟಿಲುಗಳು 100-150 ವರ್ಷ ಬಾಳಿಕೆ ಬರುತ್ತವಂತೆ. ಅಂದರೆ, ತಾಯಿಯ ತೊಟ್ಟಿಲು ಮೊಮ್ಮಗಳ ಕಾಲದವರೆಗೂ ಗಟ್ಟಿಮುಟ್ಟಾಗಿ ಇರುತ್ತದೆ. ತೊಟ್ಟಿಲಿನ ಮೇಲೆ, ಶ್ರೀರಾಮನ ಪಟ್ಟಾಭಿಷೇಕ, ಕೃಷ್ಣನ ಬಾಲಲೀಲೆ, ಶಿವ-ರಾಮನ ಪ್ರಸಂಗಗಳು, ಲವ-ಕುಶರ ಕಥೆ, ಧರ್ಮರಾಯನ ಸಭೆ, ಮೆಕ್ಕಾ, ಮದೀನಾ, ಏಸುವಿನ ಬಾಲಲೀಲೆ… ಹೀಗೆ ಹಲವು ಕಥೆಗಳನ್ನು ಸಾರುವ ಚಿತ್ತಾರಗಳಿರುತ್ತವೆ. ಒಂದು ತೊಟ್ಟಿಲು ತಯಾರಿಕೆಗೆ ಕನಿಷ್ಠ ಒಂದು ತಿಂಗಳು ಬೇಕು ಅನ್ನುತ್ತಾರೆ, ತೊಟ್ಟಿಲು ತಯಾರಕ ಮಾರುತಿ ಶಿವಪ್ಪ ಬಡಿಗೇರ್.
Related Articles
ಕೂಸು ಕಂದಮ್ಮನ ರೇಷಿಮೆ ಮೈಯನ್ನು ಎಷ್ಟು ಜೋಪಾನ ಮಾಡಿದರೂ ಸಾಲದು. ಹಾಗಿದ್ದಮೇಲೆ, ಮಗುವಿನ ತೊಟ್ಟಿಲಿಗೆ ಕೃತಕ ಬಣ್ಣವೇ? ಸಾಧ್ಯವೇ ಇಲ್ಲ. ಕಲಘಟಗಿ ತೊಟ್ಟಿಲನ್ನು ಚಂದಗಾಣಿಸುವುದು ಅಪ್ಪಟ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಬಣ್ಣಗಳು. ಅರಗಿನಿಂದ ತಯಾರಿಸಿದ ಬಣ್ಣ, ಹುಣಸೆಬೀಜವನ್ನು ನೀರಿನಲ್ಲಿ ನೆನೆಸಿ, ಕುದಿಸಿ ಸಿದ್ಧಪಡಿಸಿದ ಬಣ್ಣ, ಜೇಡಿಮಣ್ಣು ಮುಂತಾದವನ್ನು ಬಳಸುತ್ತಾರೆ. ಅರಗು ಮತ್ತು ರಾಳವನ್ನು ಸಮಾನ ಅನುಪಾತದಲ್ಲಿ ಬೆರೆಸಿ, ಅದಕ್ಕೆ ಬಣ್ಣದ ಪುಡಿ ಮಿಶ್ರಣ ಮಾಡಿ ಒಂದು ಹದದ ಶಾಖದಲ್ಲಿ ಬೇಯಿಸಲಾಗುತ್ತದೆ. ಅದು ಗಟ್ಟಿಯಾಗುವ ಮೊದಲು ವಿವಿಧ ಬಣ್ಣಗಳ ಕಡ್ಡಿಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತದೆ. ಒಂದು ಕೈಯಲ್ಲಿ ಕಟ್ಟಿಗೆಯಿಂದ ಅದನ್ನು ಬೆಂಕಿಯಲ್ಲಿ ಕಾಯಿಸುತ್ತಲೇ, ತೊಟ್ಟಿಲಿಗೆ ಸಿದ್ಧಗೊಂಡ ಮರದ ತುಂಡಿಗೆ ಅಂಟಿಸುತ್ತಾ ಕೇದಿಗೆ ಎಲೆಯಲ್ಲಿ ಚಿತ್ರಗಳನ್ನು ರಚಿಸಲಾಗುತ್ತದೆ. ನಂತರ ಎಣ್ಣೆ ಲೇಪಿಸಲಾಗುತ್ತದೆ.
Advertisement
ಬೆಲೆ ಕಟ್ಟಲಾಗದ ಕಲೆ…ತೊಟ್ಟಿಲುಗಳ ಆರಂಭಿಕ ಬೆಲೆ 15 ಸಾವಿರ ರೂ.ಗಳಿಂದ 20 ಸಾವಿರ ರೂ. ಇದೆ. ಸ್ಟಾಂಡ್ ಸಮೇತ ಬೇಕು ಎಂದರೆ ಬೆಲೆ 75 ಸಾವಿರದಿಂದ 1 ಲಕ್ಷದವರೆಗೂ ಆಗುತ್ತದೆ. ಒಂದು ತೊಟ್ಟಿಲಿಗೆ ಲಕ್ಷ ರೂಪಾಯಿಯಾ ಅಂತ ಹುಬ್ಬೇರಿಸಬೇಡಿ. ಇದು ಕೇವಲ ತೊಟ್ಟಿಲು ಮಾತ್ರವಲ್ಲ! ಮನೆಯ ಅಂದ ಹೆಚ್ಚಿಸುವ ಅಪರೂಪದ ಕಲಾಕೃತಿಯೂ ಹೌದು. ಈಗ ಆಧುನಿಕತೆಗೆ ಹೊರಳುತ್ತಿರುವ ತೊಟ್ಟಿಲುಗಳಲ್ಲಿ ಬೇರಿಂಗ್ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಒಂದು ಬಾರಿ ತೂಗಿ ಬಿಟ್ಟರೆ ಕನಿಷ್ಠ ಅರ್ಧ ಗಂಟೆ ಹಗುರವಾಗಿ ತೂಗುವಂಥ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ತೊಟ್ಟಿಲು ಮಾಡುವ ಕೈಗಳು…
ಕಲಘಟಗಿಯ ಗೋಲಪ್ಪನ ಓಣಿಯ ಬಡಿಗೇರ ಕುಟುಂಬ ಮತ್ತು ಚಿತ್ರಗಾರ ಓಣಿಯ ಸಾವುಕಾರ ಕುಟುಂಬಗಳು ತಲೆತಲಾಂತರದಿಂದ ತೊಟ್ಟಿಲು ಮಾಡುವ ಕುಲಕಸುಬನ್ನು ಉಳಿಸಿಕೊಂಡು ಬಂದಿವೆ. ಸುಮಾರು ಆರೇಳು ತಲೆಮಾರುಗಳಿಂದ ಈ ಕುಟುಂಬಗಳ ಕಲಾವಿದರು ತೊಟ್ಟಿಲುಗಳನ್ನು ತಯಾರಿಸುತ್ತಿದ್ದಾರೆ. ಮಾರುತಿ ಬಡಿಗೇರ ಅವರ ಪತ್ನಿ ನಾಗರತ್ನ ಬಡಿಗೇರ್ ಮತ್ತು ತಾಯಿ ಪ್ರೇಮವ್ವ ಶಿವಪ್ಪ ಬಡಿಗೇರ ಅವರೂ ತೊಟ್ಟಿಲು ಮಾಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಖಾಸಗಿ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿರುವ ನಾಗರತ್ನ ಅವರು, ಬಿಡುವಿನ ವೇಳೆಯಲ್ಲಿ ಬಣ್ಣದ ಕೆಲಸದಲ್ಲಿ ಭಾಗಿಯಾಗುತ್ತಾರೆ. ತಾಯಿ ಪ್ರೇಮವ್ವ, ತಮ್ಮ ಇಳಿ ವಯಸ್ಸಿನಲ್ಲೂ ಮಗನ ಕೆಲಸಕ್ಕೆ ಸಾಥ್ ನೀಡುತ್ತಿದ್ದಾರೆ. ಆರ್ಡರ್ ಮಾಡಬೇಕು…
ಈ ತೊಟ್ಟಿಲುಗಳನ್ನು ನೀವು ತಕ್ಷಣಕ್ಕೆ ಮನೆಗೊಯ್ಯಲು ಸಾಧ್ಯವಿಲ್ಲ. ಮೊದಲೇ ತೊಟ್ಟಿಲು ತಯಾರಿಸಲು ಆರ್ಡರ್ ನೀಡಬೇಕು. ಕನಿಷ್ಠ ಒಂದು ತಿಂಗಳು ಮುಂಚೆಯೇ ಆರ್ಡರ್ ನೀಡಿದರೆ, ಹೇಳಿದ ಸಮಯಕ್ಕೆ ತೊಟ್ಟಿಲು ತಯಾರಿಸಲು ಸಾಧ್ಯ. ಪ್ರತಿವರ್ಷವೂ ನಮಗೆ 40-50 ಹರಕೆ ತೊಟ್ಟಿಲುಗಳಿಗೆ ಆರ್ಡರ್ ಸಿಗುತ್ತದೆ ಅಂತಾರೆ ಮಾರುತಿ ಬಡಿಗೇರ್. ವಿದೇಶದಲಿ ತೂಗುವ ತೊಟ್ಟಿಲು
ಪ್ಲಾಸ್ಟಿಕ್, ಕಬ್ಬಿಣ ಮುಂತಾದವುಗಳಿಂದ ತಯಾರಿಸಿದ ಕಸ್ಟಮೈಸ್ಡ್ ತೊಟ್ಟಿಲುಗಳ ಈ ಯುಗದಲ್ಲೂ ಕಲಘಟಗಿಯ ತೊಟ್ಟಿಲಿಗಳು ತಮ್ಮದೇ ಆದ ಚರಿಷ್ಮಾ ಕಾಪಾಡಿಕೊಂಡಿವೆ. ವಿದೇಶದಲ್ಲಿ ನೆಲೆಸಿರುವ ಭಾರತೀಯ ಕೂಸುಗಳನ್ನೂ ಕಲಘಟಗಿಯ ತೊಟ್ಟಿಲುಗಳು ಬೆಚ್ಚಗೆ ಮಲಗಿಸಿಕೊಳ್ಳುತ್ತಿರುವುದು ಅದಕ್ಕೆ ಸಾಕ್ಷಿ. ಡಾ. ರಾಜ್‌ಕುಮಾರ್ ಅವರೂ ಕಲಘಟಗಿ ತೊಟ್ಟಿಲ ಅಂದಕ್ಕೆ ಮಾರು ಹೋಗಿದ್ದರಂತೆ. ಯಶ್- ರಾಧಿಕಾ ದಂಪತಿಯ ಮಗುವಿಗೆ, ಅಂಬರೀಷ್ ಅವರು ಉಡುಗೊರೆಯಾಗಿ ಕೊಟ್ಟಿದ್ದೂ ಈ ತೊಟ್ಟಿಲನ್ನೇ. ತೊಟ್ಟಿಲನ್ನು ಗ್ರಾಹಕರಿಗೆ ಮಾರುವ ಮೊದಲು, ಅದಕ್ಕೆ ಪೂಜೆ ಮಾಡುತ್ತೇವೆ. ತೊಟ್ಟಿಲು ತಯಾರಿಸುವಾಗ ಅದಕ್ಕೆ ಕೈ, ಕಾಲು ತಾಗಿರುವುದರಿಂದ, ಅದಕ್ಕೆ ಸಾಂಪ್ರದಾಯಕವಾಗಿ ಪೂಜೆ ಮಾಡಿ, ಶುದ್ಧ ಮಾಡಿ ಕೊಡಲಾಗುತ್ತದೆ. ಐದು ಬಗೆಯ ಫಳಾರ (ಪ್ರಸಾದ) ಮಾಡಿ, ಓಣಿಯ ಮಕ್ಕಳಿಗೆಲ್ಲ ಹಂಚಿದ ನಂತರವೇ ತೊಟ್ಟಿಲನ್ನು ಗಿರಾಕಿಗಳ ಕೈಗಿಡುವುದು.
– ಮಾರುತಿ ಬಡಿಗೇರ್ ಸುನಿತಾ ಫ. ಚಿಕ್ಕಮಠ