Advertisement

ಆರು ತಿಂಗಳಲ್ಲಿ ಮುಗಿಯದ್ದು, ಮೂರೇ ದಿನಕ್ಕೆ ಮುಗೀತು!

12:39 PM Aug 29, 2017 | Team Udayavani |

ಧಾರವಾಡ: ಜಿಪಂ ಸಿಇಒ ಸೇರಿದಂತೆ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಕ್ಕೆ ಕಾರಣವಾಗಿದ್ದ ಜಿಪಂ ಅತಿಥಿ ಗೃಹ ಆವರಣದ ವಾಣಿಜ್ಯ ಸಂಕೀರ್ಣ ಕಟ್ಟಡ ಕಾಮಗಾರಿ ಕೇವಲ ಮೂರೇ ದಿನದಲ್ಲಿ ಪೂರ್ಣಗೊಂಡಿದ್ದು, ಹಲವು ಅನುಮಾನಗಳ ಜೊತೆಗೆ ವಿಸ್ಮಯ ಮೂಡಿಸಿದೆ.

Advertisement

ಹಕೀಕತ್ತೇನು..?: ಆ. 23ರಂದು ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಅವರು 65 ಲಕ್ಷ ರೂ.ಗಳ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಇದರಲ್ಲಿ ಜಿಪಂ ಸಿಇಒ ಸ್ನೇಹಲ್‌ ರಾಯಮಾನೆ ಮತ್ತು ಇತರ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಪೈಕಿ 18 ಲಕ್ಷ ರೂ. ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅತಿಥಿ ಗೃಹ ಆವರಣದ ವಾಣಿಜ್ಯ ಸಂಕೀರ್ಣವೂ ಒಂದಾಗಿತ್ತು.

2017ರ ಫೆಬ್ರವರಿಯಲ್ಲಿಯೇ ಕಾಮಗಾರಿ ಆರಂಭಗೊಂಡಿತ್ತು. ಆದರೆ, ಈ ಕಾಮಗಾರಿ ಮುಗಿಯುವ ಮುನ್ನವೇ ಕಾಮಗಾರಿ ಮುಕ್ತಾಯ ಪ್ರಮಾಣಪತ್ರ ನೀಡಿರುವ ಕುರಿತು ಜಿಪಂ ಅಧ್ಯಕ್ಷೆ ಚೈತ್ರಾ ಅವರು ಸಿಇಒ ಸ್ನೇಹಲ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವಿಸ್ತ್ರತ ವರದಿ ಕೂಡ ಪ್ರಸಾರವಾಗಿತ್ತು.  

ಮೂರೇ ದಿನದಲ್ಲಿ ಮುಗೀತು: ಇದೀಗ ಗಣೇಶನ ಹಬ್ಬವನ್ನೂ ಲೆಕ್ಕಿಸದೆ 18 ಲಕ್ಷ ರೂ. ವೆಚ್ಚದ ವಾಣಿಜ್ಯ ಸಂಕೀರ್ಣ ಕಾಮಗಾರಿಯನ್ನು ಸತತ ಮೂರು ದಿನಗಳ ಕಾಲ ಅಹೋರಾತ್ರಿ ಎನ್ನದೇ ಮಾಡಿ ಮುಗಿಸಲಾಗಿದೆ. ಕಾಮಗಾರಿ ಆರಂಭಗೊಂಡು ಆರು ತಿಂಗಳು ಆಮೆಗತಿಯಲ್ಲಿದ್ದ ಕೆಲಸ ಇದ್ದಕ್ಕಿದ್ದಂತೆ ವೇಗ ಪಡೆದುಕೊಂಡು ಪೂರ್ಣಗೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. 

ಆ.23ರ ಸಭೆಯಲ್ಲಿ ಈ ಕಟ್ಟಡದ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ, ಇಲ್ಲಿ ಉಳಿದ ಕಾಮಗಾರಿಗಳನ್ನು ಅಧಿಕಾರಿಗಳು ಖುದ್ದಾಗಿ ಪರಿಶೀಲನೆ ನಡೆಸಿದ್ದರು. ಆ. 25ರಂದು ಗಣೇಶನ ಹಬ್ಬವಿದ್ದರೂ 20 ಕ್ಕೂ ಹೆಚ್ಚು ಕಾರ್ಮಿಕರು ರಾತ್ರಿ ವರೆಗೂ ಇಲ್ಲಿ ಕೆಲಸ ಮಾಡಿದ್ದು ಕಂಡು ಬಂದಿತ್ತು. ಇದೀಗ ವಾಣಿಜ್ಯ ಸಂಕೀರ್ಣದ ಎಲ್ಲಾ ಮಳಿಗೆಗಳ ಪ್ಲಾಸ್ಟರಿಂಗ್‌ ಮುಗಿದು, ನೆಲಕ್ಕೆ ಕಲ್ಲು ಹೊಂದಿಸಿ, ಬಣ್ಣ ಬಳಿದು, ಫಲಕ ಕೂಡ ಬರೆಯಲಾಗಿದೆ.  

Advertisement

ಸಭೆ ಮುಂದೂಡಿದ್ದು ಯಾಕೆ?: ಜಿಪಂನ 240 ಕೋಟಿ ರೂ.ಗಳ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲು ನಿರಾಕರಿಸಿ ಸಾಮಾನ್ಯ ಸಭೆಯನ್ನು ಆ. 23ರಂದು ಮೊಟಕುಗೊಳಿಸಿ ಆ. 28ಕ್ಕೆ ನಡೆಸುವಂತೆ ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಸೂಚಿಸಿದ್ದರು.

ಇದೀಗ ಮತ್ತೆ ಆ. 30ಕ್ಕೆ ಮುಂದೂಡಲಾಗಿದೆ. ವಾಣಿಜ್ಯ ಮಳಿಗೆ ಸೇರಿದಂತೆ 65 ಲಕ್ಷ ರೂ.ಗಳ ಕಾಮಗಾರಿಯಲ್ಲಿ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಭೆಯನ್ನು ಮುಂದೂಡಲಾಗಿದೆ ಎನ್ನುವ ಮಾತು ಅಧಿಕಾರಿಗಳ ವಲಯದಲ್ಲಿಯೇ ಕೇಳಿ ಬರುತ್ತಿವೆ. ಇನ್ನು ಕೆಲವು ಜಿಪಂ ಸದಸ್ಯರು ಸಭೆ ಮುಂದೂಡಿರುವ ಕುರಿತು ಆಕ್ಷೇಪಿಸಿದ್ದಾರೆ ಎನ್ನಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next