Advertisement

“ಹಿಂದೂ ಧರ್ಮದಿಂದ ಹೊರಹೋಗಲು ಬಿಡಲ್ಲ

12:30 AM Dec 30, 2018 | Team Udayavani |

ಬೆಂಗಳೂರು: “ಲಿಂಗಾಯತರು ಹಿಂದೂ ಧರ್ಮದ ಸಹೋದರರು. ತಾವು ಹಿಂದೂ ಬಿಟ್ಟು ಹೊರಹೋಗುತ್ತೇವೆ ಎಂದರೆ, ಬಿಟ್ಟುಬಿಡ್ತೀವಾ? ಸಾಧ್ಯವೇ ಇಲ್ಲ’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

Advertisement

ಅರಮನೆ ಮೈದಾನದಲ್ಲಿ ಅಖೀಲ ಹವ್ಯಕ ಮಹಾಸಭಾ ಹಮ್ಮಿಕೊಂಡ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಲಿಂಗಾಯತರು ಹಿಂದೂ ಧರ್ಮ ಬಿಡಬಾರದು. ಹೀಗೆ ಹಿಂದೂ ಧರ್ಮದಿಂದ ಹೊರಹೋಗುತ್ತೇವೆ ಎಂದರೆ ನಾವು ಬಿಟ್ಟುಬಿಡ್ತೀವಾ? ಖಂಡಿತಾ ಇಲ್ಲ. ನಾನು ಯಾರನ್ನೂ ಅಖಂಡ ಹಿಂದೂ ಧರ್ಮವನ್ನು ತೊರೆಯಲು ಬಿಡುವುದಿಲ್ಲ. ಹಾಗೆಯೇ ವೀರಶೈವ-ಲಿಂಗಾಯತ ಒಡೆಯಬಾರದು ಎಂದು ಕಿವಿಮಾತು ಹೇಳಿದರು.

ವೀರಶೈವ-ಲಿಂಗಾಯತರು ಜಗಳವಾಡಬಾರದು ಎಂಬ ನನ್ನ ಹೇಳಿಕೆಗೆ “ನಮಗೆ ನೀವೇನು ಸಂಬಂಧ? ನೀವು ನಮ್ಮ ಬಗ್ಗೆ ಯಾಕೆ ಮಾತನಾಡುತ್ತೀರಾ?’ ಎಂದು ಕೆಲವರು ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದೂ ಉಂಟು. ಆದರೆ, ನಮಗೆ ಎಲ್ಲರ ಸಂಬಂಧವೂ ಇದೆ. ಇದಕ್ಕೆ ಲಿಂಗಾಯತರೂ ಹೊರತಾಗಿಲ್ಲ. ಅಣ್ಣ-ತಮ್ಮಂದಿರು ಜಗಳವಾಡಿದಾಕ್ಷಣ ಒಬ್ಬರನ್ನೊಬ್ಬರು ಬಿಟ್ಟುಹೋಗಲು ಆಗುತ್ತದೆಯೇ? ಹಿಂದೂ ಪರೀಧಿಯಲ್ಲೇ ಎಲ್ಲರೂ ಸುತ್ತುವರಿದಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇಡೀ ಜಗತ್ತಿನಲ್ಲಿರುವ ಮಾನವರಲ್ಲಿ ಭಾರತೀಯರು. ಆ ಭಾರತೀಯರಲ್ಲಿ ಹಿಂದೂಗಳು. ಆ ಹಿಂದೂಗಳಲ್ಲಿ ಬೇರೆ ಬೇರೆ ಜಾತಿ-ಉಪಜಾತಿಗಳು ಇವೆ. ಅನೇಕ ಕಾರಣಗಳಿಗೆ ಬ್ರಾಹ್ಮಣರೂ ಸೇರಿದಂತೆ ವಿವಿಧ ಜಾತಿಗಳಲ್ಲಿ ವಿಘಟನೆಗಳಾಗಿರಬಹುದು. ಅವರೆಲ್ಲರನ್ನೂ ಒಟ್ಟಾಗಿ ಕಾಣುವುದೇ ನನ್ನ ಅಪೇಕ್ಷೆ. ಈ ನಿಟ್ಟಿನಲ್ಲಿ ಹವ್ಯಕರ ಜವಾಬ್ದಾರಿ ಹೆಚ್ಚಿದೆ. ಗುರು ಸ್ಥಾನದಲ್ಲಿ ನಿಂತು, ಧರ್ಮ ಮತ್ತು ಸಂಸ್ಕೃತಿಯ ಪ್ರಸಾರ ಮತ್ತು ಆ ಮೂಲಕ ಕಲ್ಯಾಣ ಮಾಡುವ ಹೊಣೆ ಹವ್ಯಕರ ಮೇಲಿದೆ ಎಂದು ಹೇಳಿದರು.

ನಾನು ಯಾವ ಗುರುಪೀಠಗಳಿಗೂ ಸೇರಿದವನಲ್ಲ. ಯಾವುದೇ ಗುಂಪಿಗೆ ಸೇರದೇ ತಟಸ್ಥವಾಗಿದ್ದೇನೆ ಎಂದು ಸ್ಪಷ್ಟಪಡಿಸಿದ ಪೇಜಾವರ ಸ್ವಾಮೀಜಿ, ವಿಶ್ವ ಹವ್ಯಕ ಸಮ್ಮೇಳನಕ್ಕೆ ಸ್ವರ್ಣವಲ್ಲಿ ಗುರುಗಳೂ ಬರಬೇಕಾಗಿತ್ತು. ಬಾರದಿದ್ದರೂ ಅವರ ಬಗ್ಗೆ ನನಗೆ ಬೇಸರ ಇಲ್ಲ ಎಂದರು.

Advertisement

ನಮ್ಮ ಉದ್ಧಾರ ನಾವೇ ಮಾಡ್ಕೊಬೇಕು: ಸ್ವಾಮೀಜಿ
ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಮಾತನಾಡಿ, ಸಮಾಜವನ್ನು ಯಾರೋ ಬಂದು ಉದ್ಧಾರ ಮಾಡುವುದಿಲ್ಲ. ನಮ್ಮ ಉದ್ಧಾರ ನಾವೇ ಮಾಡಿಕೊಳ್ಳಬೇಕು. ಇದಕ್ಕಾಗಿ ನಮ್ಮ ಮುಂದಿರುವ ಮಾರ್ಗ ಸಂಘಟನೆ. ಸರ್ಕಾರ ನಮ್ಮ ಸಮಾಜಕ್ಕೆ ಏನಾದರೂ ಮಾಡಬೇಕು ಎಂದಾದರೆ, ಮೊದಲು ನಾವು ಸಂಘಟಿತರಾಗಬೇಕು. ಆದರೆ, ಇದಕ್ಕೆ ಕೆಲವು ಶಕ್ತಿಗಳು ಅಡ್ಡಿಯಾಗಬಹುದು. ಸಮಾಜ ಬಾಂಧವರು ಈ ಸಮ್ಮೇಳನಕ್ಕೆ ಬರದಂತೆ ಮಾಡುವ ಪ್ರಯತ್ನಗಳೂ ನಡೆದಿವೆ. ಹಾಗಂತ, ಅವರ್ಯಾರ ಮೇಲೂ ನಮಗೆ ಅಸೂಯೆ, ದ್ವೇಷ ಇಲ್ಲ. ಸಮಾಜಕ್ಕೆ ಒಳ್ಳೆಯದಾವುದಾದರೆ, ಎಲ್ಲ ತ್ಯಾಗಕ್ಕೂ ಸಿದ್ಧ ಎಂದರು.

ಮಾಜಿ ಸಚಿವ ಎಸ್‌. ಸುರೇಶ್‌ಕುಮಾರ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರನ್ನು ವ್ಯಂಗ್ಯ, ಅಪಹಾಸ್ಯ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಅದಕ್ಕೆ ಕಿವಿಗೊಡದೆ, ಸಮುದಾಯ ಬಾಂಧವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉನ್ನತಿ ಸಾಧಿಸುವಲ್ಲಿ ನಿರತರಾಗಿದ್ದಾರೆ. ಇದರೊಂದಿಗೆ ಸಮಾಜದಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಸೂಚಿ-ದಾರದಿಂದ ಪರಸ್ಪರ ಬೆಸೆಯುವ ಕೆಲಸ ಆಗಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಮಾತನಾಡಿ, “ವೀರಶೈವ-ಲಿಂಗಾಯತ ಸೇರಿದಂತೆ ಯಾವುದೇ ಜಾತಿ-ಧರ್ಮಗಳಲ್ಲಿ ಭಕ್ತರಲ್ಲಿ ಗೊಂದಲ ಇಲ್ಲ. ಎಲ್ಲದರಲ್ಲೂ ಅಮಂಗಳ ಎನ್ನುವುದ ಇದ್ದೇ ಇರುತ್ತದೆ. ಆದರೆ, ಶಾಶ್ವತವಾಗಿರುವುದು ಯಾವುದು ಎನ್ನುವುದನ್ನು ತಿಳಿಯಬೇಕು. ಅಗ್ನಿ ಬೆಳಕಿನ ಪ್ರತೀಕ. ನಮ್ಮ ಸಂಸ್ಕೃತಿಯ ವಿಚಾರಕ್ಕೆ ಬಂದರೆ ಹುಷಾರ್‌ ಎಂಬ ಎಚ್ಚರಿಕೆಯನ್ನೂ ಆ ಅಗ್ನಿ ಕೊಡುತ್ತದೆ ಎಂದು ಎಚ್ಚರಿಸಿದರು.

ಡಾ.ಭಗವಾನ್‌ಗೆ ಪೇಜಾವರಶ್ರೀ ಪಂಥಾಹ್ವಾನ
ಬೆಂಗಳೂರು
: ರಾಮನ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವ ಡಾ.ಕೆ.ಎಸ್‌. ಭಗವಾನ್‌ ನನ್ನ ಜತೆ ಚರ್ಚೆಗೆ ಬರಲಿ. ಅವರ ಆರೋಪಗಳಿಗೂ ನಾನು ಉತ್ತರಿಸುತ್ತೇನೆ.

– ಹೀಗಂತ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಲೇಖಕ ಡಾ.ಭಗವಾನ್‌ ಅವರಿಗೆ ಪಂಥಾಹ್ವಾನ ನೀಡಿದರು. ಅರಮನೆ ಮೈದಾನದಲ್ಲಿ ಶನಿವಾರ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಭಗವಾನ್‌ ಬರೀ ಹಿಂಬದಿಯಿಂದ ಹೇಳಿಕೆಗಳನ್ನು ಕೊಡುತ್ತಾರೆ. ಎದುರಿಗೆ ಬರುವುದೇ ಇಲ್ಲ. ರಾಮನ ಬಗ್ಗೆ ಅವರ ಎಲ್ಲ ಆರೋಪಗಳಿಗೂ ಉತ್ತರ ಕೊಡಲು ನಾನು ಸಿದ್ಧನಿದ್ದೇನೆ. ಚರ್ಚೆಗೆ ಬರಲಿ. ಅಷ್ಟಕ್ಕೂ ಮಹಾತ್ಮ ಗಾಂಧಿ ಬಗ್ಗೆಯೂ ಭಗವಾನ್‌ ಅವಹೇಳನಕಾರಿಯಾಗಿ ಬರೆದಿದ್ದಾರೆ. ಅವರಿಗೆ ಯಾರೂ ಒಳ್ಳೆಯವರಾಗಿ ಕಾಣಿಸುವುದೇ ಇಲ್ಲ. ಹಾಗಾಗಿ, ಅಂತಹವರಿಗೆ ಮಹತ್ವ ಕೊಡುವ ಅಗತ್ಯವೇ ಇಲ್ಲ ಎಂದು ಸೂಚ್ಯವಾಗಿ ಚುಚ್ಚಿದರು.

ಸರ್ಕಾರ  ಅವರಿಗೆ ರಕ್ಷಣೆ ಕೊಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ  ಅವರು ಪ್ರಜೆಗೆ ರಕ್ಷಣೆ ಕೊಡುವುದು ಅನಿವಾರ್ಯ. ಈ ಬಗ್ಗೆ ನಮ್ಮ ಯಾವುದೇ ಆಕ್ಷೇಪವೂ ಇಲ್ಲ. ಆದರೆ, ಸರ್ಕಾರಕ್ಕೆ ಭಗವಾನ್‌ ಈ ರೀತಿ ತೊಂದರೆ ಕೊಡಬಾರದು ಎಂದ ಸ್ವಾಮೀಜಿ, ಹೀಗೇ ಮಾತಾಡ್ತಿದ್ರೆ ಅವರಿಗೆ (ಭಗವಾನ್‌ಗೆ) ಕಷ್ಟ ಆಗುತ್ತದೆ ಎಂದೂ ಎಚ್ಚರಿಸಿದರು.

ಷಮ್ಮುಖನ ಹತ್ಯೆ ವಿಚಾರದಲ್ಲಿ ಶ್ರೀರಾಮ ನಿರಪರಾಧಿ. ಶೂದ್ರ ವಿರೋಧಿಯೂ ಆಗಿರಲಿಲ್ಲ. ಭಗವಾನ್‌ ಅವರು ಆರೋಪ ಮಾಡುತ್ತಿರುವುದೆಲ್ಲಾ ಸುಳ್ಳು. ಚರ್ಚೆಗೆ ಬಂದರೆ, ಇಂತಹ ಎಲ್ಲ ಆರೋಪಗಳಿಗೆ ನಾನು ಉತ್ತರ ಕೊಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next