Advertisement

ಸರಳತೆ-ಸಮಾನತೆಯ ಸಮಾಜ ನಿರ್ಮಿಸೋಣ: ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ

05:30 PM May 14, 2024 | Team Udayavani |

ಉದಯವಾಣಿ ಸಮಾಚಾರ
ಕೋಹಳ್ಳಿ: ಸತ್ಸಂಗದಲ್ಲಿ ಪಾಲ್ಗೊಂಡು ಶೃದ್ಧೆ, ಭಕ್ತಿ, ಜ್ಞಾನದ ಅನುಭವವನ್ನು ಪಡೆದು ಗುರುವಿಗೆ ಶರಣಾಗಬೇಕು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ಅವರು ಸಮೀಪದ ಕೊಟ್ಟಲಗಿ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ದೇವರ ಆರಾಧನಾ ಮಹೋತ್ಸವದ ನಿಮಿತ್ತ ನಡೆದ ಶಿವಾನುಭವಗೋಷ್ಠಿ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಕೂಡಲಸಂಗಮ ದೇವರ ಒಲಿಸಲು ಬಂದ ಪ್ರಸಾದ ಕಾಯುವ ಕೆಡಿಸಲಾಗದು ಎಂಬ ವಿಷಯದ ಕುರಿತು ಮಾತನಾಡಿ, ಸಂಸಾರದಲ್ಲಿ ಆಸ್ತಿ, ಅಂತಸ್ತು, ಸಂಪತ್ತಿಗೆ ಆಸೆ ಮಾಡದೇ ಗುರುವಿನಲ್ಲಿ ಭಕ್ತಿ, ಭಾವದಿಂದ ದುಡಿಯಬೇಕು. ಜೀವನದ ಸಂಸಾರದ ಬಂಡಿ ಸಾಗಲೆಂದು ನಿಸ್ವಾರ್ಥವಾಗಿ ದುಡಿದರೆ ಮುಕ್ತಿ ಪಡೆಯಲು ಸಾಧ್ಯವಿದೆ.

ಕಾಯಕ, ದಾಸೋಹ, ಪ್ರಸಾದ ಈ ಮೂರು ತತ್ವಗಳ ಮೂಲಕ ಕಾಯಕವನ್ನು ಮಾಡಬೇಕು. ಕಾಯಕದಲ್ಲಿ ಸತ್ಯ, ಶುದ್ಧವಾದ ಮನಸ್ಸಿನಿಂದ ದಾಸೋಹ ನೀಡಬೇಕು. ನಾವು ಗಳಿಸಿದ ಸಂಪತ್ತಿನಲ್ಲಿ ಸ್ವಲ್ಪ ಭಾಗವನ್ನು ದಾಸೋಹಕ್ಕೆ ನೀಡಬೇಕು. ದಾಸೋಹದ ಪ್ರಸಾದವನ್ನು ವಿನಿಮಯ ಮಾಡಿಕೊಂಡು ಸ್ವೀಕರಿಸಬೇಕು. ಶರಣರು ಕಂಡ ಸರಳತೆಯ, ಸಮಾನತೆಯ, ದಾಸ್ಯಮುಕ್ತ ಸಮಾಜ ಮಾಡಬೇಕು ಎಂದರು.

ವಿಜಯಪೂರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮಿಜಿ ನೇತೃತ್ವ ವಹಿಸಿ ಮಾತನಾಡಿ, ಭಗವಂತ ಕೊಟ್ಟ ಈ ಶರೀರವು ಅಪರೂಪದ ಕಾಣಿಕೆ. ಶರೀರಕ್ಕೆ ವಿವೇಕ ಕೊಟ್ಟು ಭೂಮಿಗೆ ಕಳುಹಿಸಿದ ಭಗವಂತ ನೋಡಬೇಕಾದರೆ ಒಳ್ಳೆಯ ಪ್ರಸಾದಕಾಯುವ ಕಾರ್ಯವನ್ನು ಮಾಡುವ ಮೂಲಕ ಭಗವಂತನಿಗೆ ಹತ್ತಿರವಾಗಬೇಕು. ಪ್ರಸಾದ ಕಾಯುವನಾಗಬೇಕಾದರೆ, ಸತ್ಯ, ಶುದ್ದವಾದ
ಕಾಯಕದಿಂದ ಜೀವನ ನಡೆಸಬೇಕು. ಅಧ್ಯಾತ್ಮವೆಂಬುದು ನಮ್ಮ ದೇಶಕ್ಕೆ ಕೊಟ್ಟ ಕೊಡುಗೆ. ಯಾವ ದೇಶದಲ್ಲಿ ಸಿಗದೇ ಇರುವ ಅಧ್ಯಾತ್ಮದ ರುಚಿಯನ್ನು ಸಿದ್ದೇಶ್ವರ ಶ್ರೀಗಳು ನಮ್ಮ ಭಾರತ ದೇಶದಲ್ಲಿ ಪ್ರವಚನದಿಂದ ಮೂಡಿಸಿದ್ದಾರೆ ಎಂದರು.

ಕಕಮರಿಯ ಅಭಿನವ ಗುರಲಿಂಗ ಸ್ವಾಮಿಜಿ, ಗುರುದೇವಾಶ್ರಮದ ಆತ್ಮಾರಾಮ ಸ್ವಾಮಿಜಿ, ಕಾಗವಾಡದ ಯತೀಶಾನಂದ ಸ್ವಾಮಿಜಿ, ಸವಿತಾನಂದ ಸ್ವಾಮಿಜಿ, ಅನ್ನಪೂರ್ಣ ತಾಯಿವರು, ಸಿದರಾಯ ಯಲಡಗಿ, ಅಪ್ಪಸಾಬ ಬಿರಾದಾರ, ರವಿ ಸಂಕ, ಗುರುಬಸು ಬಂಡಗರಗೋಟ್ಟಿ, ಗುರು ಮುಗ್ಗನ್ನವರ ಸೇರಿದಂತೆ ಅನೇಕ ಸದ್ಬಕ್ತ ಮಂಡಳಿಯ ಸದಸ್ಯರು ಇದ್ದರು. ಮಹೇಶ ಬಂಡರಗೊಟ್ಟಿ ಸ್ವಾಗತಿಸಿ, ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next