ಶಿವಮೊಗ್ಗ: “ಬಿಜೆಪಿಯ ಶಾಸಕರು ಹುಲಿಗಳಿದ್ದಂತೆ. ಯಾರಿಂದಲೂ ಅವರನ್ನು ಮುಟ್ಟಲು ಸಾಧ್ಯವಿಲ್ಲ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಐದು ಶಾಸಕರನ್ನು ಸೆಳೆಯುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಶಾಸಕರನ್ನು ಸೆಳೆಯೋದು ಅಷ್ಟು ಸುಲಭವಲ್ಲ ಎಂದರು.
ಜಾರಕಿಹೊಳಿ ಬದ್ರರ್ ಸೇರಿದಂತೆ ಹಲವರು ಸರಕಾರಕ್ಕೆ ಗಡುವು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿಯವರು ಸರಕಾರ ಉರುಳಿಸುವ ಕೆಲಸ ಮಾಡಲ್ಲ. ತಾನಾಗಿಯೇ ಸರಕಾರ ಉರುಳಿ ಹೋಗಲಿದೆ. ಬಳಿಕ, ರಾಜ್ಯದಲ್ಲಿ ಬಿಜೆಪಿ ಅಧಿ ಕಾರಕ್ಕೆ ಬರಲಿದೆ. ನಾವು ಆಪರೇಷನ್ ಕಮಲ ಮಾಡಿದರೆ ಕಾಂಗ್ರೆಸ್-ಜೆಡಿಎಸ್‌ನವರು ತಪ್ಪು ಎನ್ನುತ್ತಾರೆ. ಇನ್ನೊಂದು ಕಡೆ ಬಿಜೆಪಿ ಶಾಸಕರನ್ನು ತಮ್ಮ ಪಕ್ಷಕ್ಕೆ ಸೆಳೆಯುತ್ತೇವೆ ಎನ್ನುತ್ತಾರೆ. ತಪ್ಪು-ಸರಿ ಯಾವುದು ಎಂಬುದನ್ನು ರಾಜ್ಯದ ಜನರೇ ನಿರ್ಧರಿಸುತ್ತಾರೆ ಎಂದರು.
ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಪರಿವಾರದವರು ಹಾಗೂ ಪಕ್ಷದ ರಾಷ್ಟ್ರೀಯ ನಾಯಕರು ಹೇಳಿದರೆ ಲೋಕಸಭೆ ಚುನಾವಣೆಗೆ ಸ್ಪ ರ್ಧಿಸಲು ಸಿದ್ಧ. ಆದರೆ, ಯಾರೋ ಹೇಳಿದರು ಎಂದ ಮಾತ್ರಕ್ಕೆ ನಾನು ಅಭ್ಯರ್ಥಿಯಾಗಲು ಸಾಧ್ಯವಿಲ್ಲ. ಪಕ್ಷದ ನಾಯಕರು, ಹಿರಿಯರು ಅದನ್ನು ಬಯಸಿದರೆ ಅವರ ಮಾತನ್ನು ಮೀರುವುದಿಲ್ಲ.
– ಕೆ.ಎಸ್. ಈಶ್ವರಪ್ಪ, ಶಾಸಕ