ವಾಷಿಂಗ್ಟನ್: ಉದ್ಯಾನಗಳು ಹಾಗೂ ಕಾಡು ಬೆಳೆಸುವಾಗ ಕನಿಷ್ಠ ನಾಲ್ಕೈದು ವರ್ಷಗಳವರೆಗೆ ಅವು ಖಾಲಿ ಬಿದ್ದ ಭೂಮಿಯಂತೆ ಕಾಣುತ್ತವೆ. ಅಲ್ಲಿ ನೆಟ್ಟ ಗಿಡಗಳು ಆಳೆತ್ತರ ಬೆಳೆಯುವರೆಗೂ ಅಂತಹ ಕಾಡಿನಲ್ಲಿ ಅಥವಾ ಉದ್ಯಾನದಲ್ಲಿ ತಿರುಗಾಡುವುದು ಅಷ್ಟು ಮುದ ನೀಡುವುದಿಲ್ಲ. ಹೀಗಾಗಿ ಈಗಾಗಲೇ ಬೆಳೆದು ನಿಂತ ಮರಗಳನ್ನೇ ತಂದು ಕಾಡಿನಲ್ಲಿ ನೆಟ್ಟರೆ ಹೇಗಿರುತ್ತದೆ?
ಇಂಥದ್ದೊಂದು ಪ್ರಯೋಗ ಈಗಾಗಲೇ ಸಾಕಷ್ಟು ಬಾರಿ ನಡೆದಿವೆಯಾದರೂ, ನಗರದಲ್ಲಿ ಮೂಲಸೌಕರ್ಯ ಯೋಜನೆಗೆ ಅಡ್ಡಿಯಾದ ಮರಗಳನ್ನು ಕಡಿಯುವುದರ ಬದಲಿಗೆ ಹೀಗೆ ಒಂದೆಡೆಯಿಂದ ಇನ್ನೊಂದೆಡೆಗೆ ಮರಗಳನ್ನು ಬುಡಸಮೇತ ಹೊತ್ತೂಯ್ದು ನೆಡಲಾಗಿದೆ. ಆದರೆ ತನ್ನ ಉದ್ಯೋಗಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಲು ವಿಶಿಷ್ಟ ಕೆಲಸದ ವಾತಾವರಣವನ್ನು ನಿರ್ಮಿಸಲು ಹೆಸರಾದ ವಿಶ್ವದ ಇ-ಕಾಮರ್ಸ್ ಕಂಪನಿಗಳಲ್ಲೊಂದಾದ ಅಮೆಜಾನ್ ತನ್ನ ಕ್ಯಾಂಪಸ್‌ನಲ್ಲಿ ನಿರ್ಮಿಸಿದ ಕಾಡಿನಲ್ಲಿ ಸುಮಾರು 55 ಅಡಿ ಎತ್ತರದ ಮರಗಳನ್ನು ತಂದು ನೆಟ್ಟಿದೆ!
ಅಷ್ಟೇ ಅಲ್ಲ ಈ ಕಾಡಿಗೆ ಕಂಪನಿ ಗ್ಲಾಸ್ ಹೊದಿಕೆಯನ್ನೂ ನಿರ್ಮಿಸಿದೆ! ಸುಮಾರು 80 ರಿಂದ 135 ಅಡಿ ಎತ್ತರದ ಛಾವಣಿಯನ್ನು ಮೂರು ಗೋಳಾಕೃತಿಯಲ್ಲಿ ನಿರ್ಮಿಸಿರುವ ಈ ಅತ್ಯಾಧುನಿಕ ಕಾಡು ಸೋಮವಾರ ಅನಾವರಣಗೊಳ್ಳಲಿದೆ. ಕಳೆದ ಐದಾರು ವರ್ಷಗಳಿಂದ ಈ ಯೋಜನೆ ನಡೆಯುತ್ತಿದ್ದು, ಈಗ ಪೂರ್ಣಗೊಂಡಿದೆ.
ಕೆಲಸಗಾರರು ಬೇಸರವಾದಾಗ ಈ ಕಾಡಿನಲ್ಲಿ ಕುಳಿತು ವಿರಮಿಸಬಹುದು ಅಥವಾ ಇಲ್ಲೇ ಕುಳಿತು ಕೆಲಸ ಮಾಡ ಬಹುದಾದ ವಾತಾವರಣವನ್ನೂ ಕಲ್ಪಿಸಲಾಗಿದೆ. ಪ್ರತ್ಯೇಕ ಮರದ ಆಸನ ಹಾಗೂ ಡೆಸ್ಕ್ ವ್ಯವಸ್ಥೆ ಒದಗಿಸಿದ್ದು, ವೈಫೈ ಕೂಡ ಇದೆ. ಒಂದು ದೊಡ್ಡ ಹಾಗೂ ಎರಡು ಸಣ್ಣ ಗೋಳಾ ಕಾರದ ಮೇಲ್ಛಾವಣಿ ಇದ್ದು, ಇಲ್ಲಿ ತಿರುಗಾಡಲು ಮರದ ಸೇತುವೆಗಳನ್ನು ನಿರ್ಮಿಸಲಾಗಿದೆ.
ಅಂದಹಾಗೆ ಈ ಅಮೆಜಾನ್ ಕಾಡಿಗೆ ಜನಸಾಮಾನ್ಯರಿಗೆ ಪ್ರವೇಶವಿಲ್ಲ. ಕೇವಲ ಉದ್ಯೋಗಿಗಳಿಗೆ ಮಾತ್ರ ಪ್ರವೇಶ. ಅಲ್ಲದೆ ಕಾಡಿಗೆ ಹೋಗುವ ಪ್ರತಿ ಉದ್ಯೋಗಿಯ ವಿವರ ಹಾಗೂ ಸಮಯ ದಾಖಲಿಸಲಾಗುತ್ತದೆ. ಇನ್ನೊಂದೆಡೆ ನೇಮಕಾತಿ ಸಂದರ್ಶನವನ್ನೂ ಈ ಕಾಡಿನಲ್ಲೇ ಮಾಡಲಾಗುತ್ತದೆಯಂತೆ.