Advertisement

ನಯನಕ್ಕೊಂದು ಚೌಕಟ್ಟು ಕನಸಿಗಲ್ಲ…

01:38 PM Jun 28, 2020 | mahesh |

ಅಷ್ಟಕ್ಕೂ ಅದೆಷ್ಟು ಕೆಟ್ಟ ಬದುಕು ನನ್ನದು ಎಂದು ಚಿಂತಿಸುವ ಪ್ರಾಯ ನನ್ನದಲ್ಲ. ಅಷ್ಟು ಯೋಚಿಸುತ್ತಾ ಕುಳಿತುಕೊಳ್ಳಲು ತಾಳ್ಮೆಯಾಗಲಿ, ಸಮಯವಾಗಲಿ ಇರಲಿಲ್ಲ. ನಿದ್ದೆ ಎಂದು ಕಣ್ಣು ಮುಚ್ಚಿದೊಡನೆ ಕಂಡದ್ದೆಲ್ಲ ಕನಸು. ಅದರಲ್ಲಿಯೂ ಹೊಟ್ಟೆ ತುಂಬಾ ಊಟ, ಮೈ ತುಂಬಾ ಬಟ್ಟೆ, ಸೋರದ ಸೂರು ಇವುಗಳೊಡನೆ ನನ್ನಮ್ಮನ ಕಣ್ಣಲ್ಲಿ ಸಂತೋಷ, ನೆಮ್ಮದಿ ಇಷ್ಟೇ ಇದ್ದವು.

Advertisement

ಬದುಕು ಹೂವಿನ ಹಾಸಿಗೆ, ಅದ್ಯಾರೋ ನೆಟ್ಟ ಗಿಡ ಇನ್ಯಾರೋ ಎರೆದ ನೀರು. ಹೂವನ್ನು ಕೊಯ್ದು ಕಟ್ಟಿದವರಿನ್ಯಾರೊ. ಅದು ನನ್ನ ಹಸಿವನಿಂಗಿಸುವ ಹೂವಾಗಿತ್ತು. ಓಡುವ ಕಾರಿಗೆ, ದುಬಾರಿ ಚಪ್ಪಲಿಗೆ, ಬ್ರ್ಯಾಂಡ್‌ ಹೆಸರಲ್ಲಿ ತೆಗೆದುಕೊಳ್ಳುವ ಇನ್ನೇನೋ ಕೆಲಸಕ್ಕೆ ಬಾರದ ವಸ್ತುಗಳಿಗೆ, ಫ್ಯಾಷನ್‌ ಹರಕಲು ಬಟ್ಟೆಗೆ ಕೊಡುವ ಹಣದಲ್ಲಿಲ್ಲದ ಚೌಕಾಸಿ ನನ್ನ ಹಸಿವಿಂಗಿಸುವ ಹೂವಿಗೆ..

ಬಿಡಿ..! ಮುಡಿಯುವ ಹೂವಿಗಿಂತ, ಉಟ್ಟ ಮೈ ಮುಚ್ಚುವ ಉಡುಗೆ, ಇಟ್ಟ ಹಣೆಯ ಬೊಟ್ಟಿಗಿಂತಲೂ ಕುರುಡು ಪಾಶ್ಚಾತ್ಯ ವೇಷ-ಭೂಷಣಗಳಲ್ಲೇ ಕಳೆದು ಹೋಗುವಂತಾಗಿದೆ ಓಡುತ್ತಿರುವ ಪ್ರಸ್ತುತ ಜಗತ್ತು. ಪುಟ್ಟ ಬಾಯಿಯಲ್ಲಿ ಬೆಟ್ಟದ ವೇದಾಂತ ಮಾರುವ ಹೂ ಮಾರಿಗೆ ಮೂರು ಮಾರಿದರೆ ಒಪ್ಪತ್ತಿನ ಊಟ. ಕೈಗಳು ಸಣ್ಣದು ಯೋಚನೆ, ಯೋಜನೆಯ ಹಂಗಿಲ್ಲ, ಮೋಸ ವಂಚನೆಯ ಅರಿವಿಲ್ಲ ಹೋದ ದಾರಿ ಖುಷಿ ಪಟ್ಟಂತಿತ್ತು. ಇನ್ನೂ ಖುಷಿ ಪಡುವಂತಿತ್ತು.
ಕಳೆದುಹೋದ ಕಾಲ..

ಹೊಳೆ, ತೊರೆ, ಕಾಡು, ಗುಡ್ಡ ನನ್ನಲ್ಲಿ ನಾನೇ ಮಾತಾಡಿ ನಡೆದಿದ್ದೆ. ಸಿಕ್ಕ ಚೂರಿ ಹಣ್ಣು, ಸೀಬೆಹಣ್ಣು, ಕಲ್ಲೆಸೆದ ನೇರಳೆ ಹಣ್ಣು ಒಂದೆರಡು ಬಿದ್ದಾಗ ಪಟ್ಟ ಖುಷಿ. ಬೆಳಗಾಗುತ್ತಿದ್ದಂತೆ ಕೇಳುತ್ತಿದ್ದ ಹಕ್ಕಿಯ ಚಿಲಿ-ಪಿಲಿ, ಆಚೆ- ಈಚೆ ಮನೆಯವರೊಂದಿಗಿನ ಆಟ, ಅಲೆದಾಟ. ಇವನ್ನೆಲ್ಲ ಮೆಲುಕು ಹಾಕುತ್ತ ಕುಳಿತರೆ ಬದುಕಿನಲ್ಲಿ ಯೋಚಿಸಿ ತೆಗೆದುಕೊಂಡ ನಿರ್ಧಾರಗಳಿಗಿಂತ ಅದಾಗೇ ಮಾಡಿದ ಕೆಲಸಗಳಲ್ಲೇ ಏನೋ ಸಂತಸ. ಈಗ ಬೆಳೆದಿದ್ದೇನೆ. ಕನಸು ಪುಟ್ಟದಾಗಿಲ್ಲ ಹಸಿದ ಹೊಟ್ಟೆಯಿಲ್ಲ. ಇದ್ದದ್ದರಲ್ಲಿ ನೆಮ್ಮದಿಯೂ ಕಾಣುತ್ತಿಲ್ಲ. ಕನಸು ಮಲಗಿದಾಗ ಬೀಳುತ್ತಿಲ್ಲ. ನೆನೆದಾಗಲೆಲ್ಲ ಕಣ್ಣೆದುರು ಬಂದು ನನಸಾಗಿಸೆಂದು ಪೀಡಿಸುತ್ತಿದ್ದೆ.

ನನಸಾಗಿಸುವ ದಾರಿಯಲ್ಲೇ ಮುಂದುವರಿಯುತ್ತಿದ್ದೇನೆ. ಏಳು-ಬೀಳುಗಳು ಸಹಜ ಬಿದ್ದಾಗ ಎರಡೇಟು ಬಿದ್ದರೂ ಮುಂದೆ ಸಾಗುವುದೇ ಬದುಕು. ನಯನಕ್ಕೊಂದು ಚೌಕಟ್ಟು ಕನಸಿಗಲ್ಲ. ಕಾಡಿಸುವ ದೇವರಾಟದಲ್ಲಿ ನನ್ನಾಟವೆಲ್ಲಿ? ಕಲ್ಪನೆಯ ಬದುಕಿನ ಮೆರವಣಿಗೆ.

Advertisement


ಕಾವ್ಯಾರಾವ್‌ ಕೊಕ್ಕಡ

Advertisement

Udayavani is now on Telegram. Click here to join our channel and stay updated with the latest news.

Next