ಸಿಡ್ನಿ: ಹುಚ್ಚಾಟವೊಂದು ಹೇಗೆ ನೆಲಕ್ಕೆ ಕೊಡವಿ ತಿವಿದು ಬಲಿ ತೆಗೆದುಕೊಳ್ಳಬಹುದು ಎಂಬುದಕ್ಕೆ ಆಸೀಸ್ ಆಟಗಾರರ ಬಾಲ್ ಟ್ಯಾಂಪರಿಂಗ್ ಹಗರಣ ಉತ್ತಮ ಉದಾಹರಣೆ.
ಪ್ರಕರಣದಿಂದ ಮನನೊಂದು ಆಸೀಸ್ ಕೋಚ್ ಲೇಹ್ಮನ್ ಹುದ್ದೆ ತಜಿಸಿದರು. ಸ್ಮಿತ್ ಹೆತ್ತವರು ತಲೆ ತಗ್ಗಿಸಿದರು. ಇದೀಗ ಡೇವಿಡ್ ವಾರ್ನರ್ ಪತ್ನಿ ಕ್ಯಾಂಡೀಸ್, ಗಂಡನ ಕೃತ್ಯಕ್ಕೆ ತಾನೂ ಕಾರಣ ಎಂದು ನೊಂದು ನುಡಿದಿದ್ದಾರೆ.
ಬಾಲ್ ಟ್ಯಾಂಪರಿಂಗ್ ಪ್ರಕರಣದ ಬಗ್ಗೆ ತೀವ್ರ ನೋವು ವ್ಯಕ್ತಪಡಿಸಿರುವ ಕ್ಯಾಂಡೀಸ್ ವಾರ್ನರ್, “ಎಲ್ಲವೂ ನನ್ನದೇ ತಪ್ಪು ಎನ್ನುವಂತೆ ಭಾಸವಾಗುತ್ತಿದೆ. ಘಟನೆ ನನ್ನನ್ನು ಕೊಲ್ಲುತ್ತಿದೆ. ನನ್ನನ್ನು ಸಂಪೂರ್ಣವಾಗಿ ಕೊಲ್ಲುತ್ತಿದೆ’ ಎಂದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಗಂಡನ ವರ್ತನೆಯನ್ನು ಕ್ಷಮಿಸುವಂತೆ ನಾನು ಕೇಳುತ್ತಿಲ್ಲ ಎಂದಿರುವ ಕ್ಯಾಂಡೀಸ್, “ಘಟನೆಯಿಂದ ನೊಂದುಕೊಂಡಿರುವ ನನ್ನನ್ನು ಡೇವಿ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಸಮಾಧಾನಿಸುತ್ತಿದ್ದಾರೆ. ಮಕ್ಕಳನ್ನೂ ಸಾಂತ್ವನಿಸುತ್ತಿದ್ದಾರೆ’ ಎಂದರು.
“ಘಟನೆ ನಡೆದ ದಿನ ಡೇವ್ ಮನೆಗೆ ಬಂದರು. ಬೆಡ್‌ರೂಮ್‌ನಲ್ಲಿ ಅವರು ನನ್ನತ್ತ ದಿಟ್ಟಿಸುವಾಗ ಅವರ ಕಣ್ಣುಗಳು ತೊಯ್ದಿದ್ದವು. ನಮ್ಮಿಬ್ಬರನ್ನು ಗಮನಿಸಿ ಏನೆಂದೇ ಅರ್ಥವಾಗದ ಇಬ್ಬರು ಪುಟಾಣಿ ಹೆಣ್ಣುಮಕ್ಕಳು ಪ್ರಶ್ನಾರ್ಥಕವಾಗಿ ನನ್ನತ್ತಲೇ ಹರಿಸಿದ ನೋಟ ಆ ದಿನ ನನ್ನ ಹೃದಯ ಹಿಂಡಿತ್ತು…’ ಎಂದು ಹೇಳುತ್ತ ಕ್ಯಾಂಡೀಸ್ ಭಾವುಕರಾದರು.
ಟೆಸ್ಟ್ ಸರಣಿಯ ವೇಳೆ ಡೇವಿಡ್ ವಾರ್ನರ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ನಡುವೆ ಆಮತಿನ ಜಟಾಪಟಿ ನಡೆದಿತ್ತು. ದಕ್ಷಿಣ ಆಫ್ರಿಕಾ ಆಟಗಾರ ಡಿ ಕಾಕ್ ಅವರು ವಾರ್ನರ್ ಪತ್ನಿಯನ್ನು ಆ ಸಂದರ್ಭದಲ್ಲಿ ಅವಮಾನಿಸಿದ್ದು ಪ್ರಕರಣಕ್ಕೆ ಪ್ರೇರೇಪಿಸಿತು ಎನ್ನುವ ಮಾತುಗಳೂ ಕೇಳಿ ಬಂದಿದ್ದವು.