Advertisement

ಇದು ಬರೀ ಬೆಳಗಲ್ಲೋ ಅಣ್ಣಾ…

12:57 PM Jan 06, 2018 | Team Udayavani |

ಚಿಕ್ಕಪುಟ್ಟ ಸಂಗತಿಗಳಲ್ಲಿಯೇ ಬ್ರಹ್ಮಾಂಡ ಅಡಗಿರೋದು . “ಬಿಗ್‌ ಥಿಂಗ್ಸ್‌ ಕಮ್‌ ಇನ್‌ ಸ್ಮಾಲ್‌ ಪ್ಯಾಕೇಜಸ್‌’ ಎಂದು ಹಿರಿಯರು ಹೇಳಿದ್ದು ಸುಮ್ಮನೆಯೇ ಅಲ್ಲ. ಮುಂಜಾವು ಕೂಡಾ ಹಾಗೆಯೇ. ಅದನ್ನು ಕಾಣುವುದಕ್ಕು ಅದೃಷ್ಟ ಬೇಕು…

Advertisement

“ಈ ಚಳೀಲಿ ಬೆಳ್‌ ಬೆಳಗ್ಗೆ ಯಾರಪ್ಪಾ ಅಷ್ಟ್ ಬೇಗ ಏಳ್ತಾರೆ’ ಅಂತ ರಗ್ಗು ಹೊದ್ದು ಬೆಚ್ಚಗೆ ಮುದುಡಿಕೊಳ್ಳುವವರಿಗೆ ಅವರು ಎಂಥ ಮಾಂತ್ರಿಕ ಕ್ಷಣಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದಾರೆ ಎಂದು ಗೊತ್ತಿರುವುದಿಲ್ಲ. ಯಾವುದಪ್ಪಾ ಅಂಥ ಮಾಂತ್ರಿಕ ಕ್ಷಣ ಅಂತ ಯೋಚಿಸ್ತಿದ್ದೀರಾ? ಅದುವೇ ಸುಂದರ ಬೆಳಗು! ಕೇಳ್ಳೋಕೆ ತುಂಬಾ ಸಿಂಪಲ್‌, ದಿನವೂ ಆಗುತ್ತೆ, ಯಾವಾಗ ಬೇಕಾದರೂ ನೋಡಬಹುದು… ಅಂತೆಲ್ಲಾ ಅನ್ನಿಸಬಹುದು.

“ಅಯ್ಯೋ ಅಷ್ಟೇನಾ? ಅದರಲ್ಲೇನಿದೆ?’ ಎಂದು ಕೆಲವರು ಮೂಗು ಮುರಿಯಲೂಬಹುದು. ಆದರೆ, “ಅಷ್ಟರಲ್ಲೇ’ ಎಲ್ಲಾ ಇರೋದು! ಚಿಕ್ಕಪುಟ್ಟ ಸಂಗತಿಗಳಲ್ಲಿಯೇ ಬ್ರಹ್ಮಾಂಡ ಅಡಗಿರೋದು . “ಬಿಗ್‌ ಥಿಂಗ್ಸ್‌ ಕಮ್‌ ಇನ್‌ ಸ್ಮಾಲ್‌ ಪ್ಯಾಕೇಜಸ್‌’ ಎಂದು ಹಿರಿಯರು ಹೇಳಿದ್ದು ಸುಮ್ಮನೆಯೇ ಅಲ್ಲ. ಮುಂಜಾವು ಕೂಡಾ ಹಾಗೆಯೇ. ಅದನ್ನು ಕಾಣುವುದಕ್ಕೂ ಅದೃಷ್ಟ ಬೇಕು.

ವಾರದ ದಿನಗಳಲ್ಲಿ ಬೆಳಗ್ಗಿನ ಶಿಫ‌ುr, ನೈಟ್‌ ಶಿಫ‌ುr ಎಂದು ಕೆಲಸದಲ್ಲೇ ಮುಳುಗಿರುವ ನಗರಜೀವಿಗಳು ವಾರಾಂತ್ಯವನ್ನು ನಿದ್ದೆ, ಶಾಪಿಂಗ್‌ ಎಂದು ವಿಶ್ರಾಂತಿಯಲ್ಲಿ ಕಳೆದುಬಿಡುವುದೇ ಹೆಚ್ಚು. ಹತ್ತಿರ ಕುಳಿತವರನ್ನೇ ಮಾತಾಡಿಸಲು ಪುರುಸೊತ್ತಿಲ್ಲದವರು ಇನ್ನು ಹೊರಗಡೆಯ ಪ್ರಪಂಚದತ್ತ ಗಮನ ಹರಿಸುವುದೆಲ್ಲಿ ಬಂತು!

ಅದಕ್ಕೂ ಮಿಗಿಲಾಗಿ ಗಗನಚುಂಬಿಗಳಿಂದ ತುಂಬಿರುವ ನಮ್ಮ ನಗರದಲ್ಲಿ ಸರಿಯಾಗಿ ಆಕಾಶವೇ ಕಾಣುವುದಿಲ್ಲ, ಇನ್ನು ಸೂರ್ಯೋದಯ, ಸೂರ್ಯಾಸ್ತ ಕಾಣುವುದು ದೂರದ ಮಾತೇ ಸರಿ. ಅದಕ್ಕೇ ಸ್ವಲ್ಪ ದೂರಕ್ಕೆ, ಅಂದರೆ ನಗರದ ಸುತ್ತಮುತ್ತಲಿರುವ, ನೀವು ಬೆಳಗನ್ನು ಸಾûಾತ್ಕರಿಸಿಕೊಳ್ಳಬಹುದಾದ ಕೆಲ ಪ್ರಶಸ್ತ ತಾಣಗಳ ಪುಟ್ಟ ಪಟ್ಟಿಯನ್ನು ನಿಮ್ಮ ಮುಂದಿರಿಸುತ್ತಿದ್ದೇವೆ…

Advertisement

1. ಹೆಸರಘಟ್ಟ ಸರೋವರ: ತಿಳಿ ನೀಲಿ ನೀರ ಮೇಲೆ ಸೂರ್ಯನ ಹೊಂಬಣ್ಣ ಬಿದ್ದಾಗ ಉಂಟಾಗುವ ಜಾದೂವನ್ನು ಪದಗಳಲ್ಲಿ ಹಿಡಿದಿಡಲಾಗದು. ಅದನ್ನು ಕಾಣಬೇಕೆಂದರೆ ಹೆಸರಘಟ್ಟ ಕೆರೆಗೆ ಬನ್ನಿ. ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಉದ್ದೇಶದಿಂದ ಸುಮಾರು 1000 ಎಕರೆಗಳಷ್ಟು ಜಾಗದಲ್ಲಿ ನಿರ್ಮಾಣವಾದ ಕೆರೆ ಹೆಸರಘಟ್ಟ.

ಈ ಕೆರೆ ನಿರ್ಮಾಣವಾಗಿದ್ದು ಇಂದು ನೆನ್ನೆಯಲ್ಲ, 1894ನೇ ಇಸವಿಯಲ್ಲಿ! ಇಲ್ಲಿ ಸೂರ್ಯೋದಯದ ಸೊಬಗನ್ನು ಸವಿಯುವುದರ ಜೊತೆಗೆ ಪಕ್ಷಿಗಳನ್ನೂ ನೋಡಬಹುದು. ಅಪರೂಪದ ಪಕ್ಷಿಗಳನ್ನು ಇಲ್ಲಿ ಕಾಣಬಹುದಾದ್ದರಿಂದ ಈ ಪ್ರದೇಶ ಪಕ್ಷಿಪ್ರೇಮಿಗಳ, ಛಾಯಾಗ್ರಾಹಕರ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಹೆಸರಘಟ್ಟ ಹುಲ್ಲುಗಾವಲ ಪ್ರದೇಶದಲ್ಲಿ ಬೈಕ್‌ ಸವಾರಿ ಮಾಡುವುದು ಥ್ರಿಲ್ಲಿಂಗ್‌ ಅನುಭವ.
ದೂರ: 20 ಕಿ.ಮೀ.

2. ನಂದಿ ಹಿಲ್ಸ್‌: ಬೆಂಗಳೂರಿಗರ ಅಚ್ಚುಮೆಚ್ಚಿನ ಪಿಕ್‌ನಿಕ್‌ ಸ್ಪಾಟ್‌ ಯಾವುದೆಂದು ಸಮೀಕ್ಷೆ ನಡೆಸಿದರೆ ಮೊದಲ ಸ್ಥಾನ ಪಡೆಯುವುದೆಂದು ಕಣ್ಮುಚ್ಚಿ ಹೇಳಬಹುದಾದ ಜಾಗ ನಂದಿ ಹಿಲ್ಸ್‌. ಅಸಂಖ್ಯ ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ಈ ಜಾಗ ಕಾಣಿಸಿಕೊಂಡಿದೆ.

ಈ ಸಮಯದಲ್ಲಿ ಅಂದರೆ ಚಳಿಗಾಲದಲ್ಲಿ ಕವಿಯುವ ಮಂಜಿನ ನಡುವೆ ಮುಂಜಾವನ್ನು ಸವಿಯಲು ವಾರಾಂತ್ಯದಲ್ಲಿ ಹೆಚ್ಚಿನ ಜನರು ಬರುತ್ತಾರೆ. ಇಲ್ಲಿಗೆ ಬರುವಾಗ ಸ್ವೆಟರ್‌ ಅಲ್ಲವೇ ಜಾಕೆಟ್‌ ತರಲು ಮರೆಯದಿರಿ. ಟಿಪ್ಪು ಡ್ರಾಪ್‌, ಭೋಗನರಸಿಂಹ ದೇವಸ್ಥಾನ, ಗಾಂಧಿ ಉಳಿದುಕೊಂಡಿದ್ದ ಮನೆ ಇನ್ನೂ ಹಲವು ಸ್ಥಳಗಳನ್ನು ನೋಡಬಹುದು.
ದೂರ: 60 ಕಿ.ಮೀ.

3. ಮಂಚನಬೆಲೆ ಅಣೆಕಟ್ಟು: ಮೈಸೂರು ರಸ್ತೆಯಲ್ಲಿ ರಾಜರಾಜೇಶ್ವರಿ ದಂತ ವೈದ್ಯಕೀಯ ಕಾಲೇಜಿನ ಬಳಿ ಬಲಕ್ಕೆ ತಿರುಗಿಕೊಂಡರೆ ದೊಡ್ಡ ಆಲದ ಮರಕ್ಕೆ ಹೋಗುವ ರಸ್ತೆಯನ್ನು ಸೇರುತ್ತದೆ. ಅದೇ ದಾರಿಯಲ್ಲಿ ಮುಂದುವರಿದು ದೊಡ್ಡ ಆಲದ ಮರವನ್ನು ದಾಟಿ ಮುಂದಕ್ಕೆ ಹೋದರೆ ರಾಮೋಹಳ್ಳಿಯ ಮಂಚನಬೆಲೆ ಡ್ಯಾಂ ಸಿಗುತ್ತೆ.

ಹತ್ತಿರದ ಗುಡ್ಡವನ್ನು ಇಳಿದು ಗೇಟು ದಾಟಿದರೆ ಸೀದಾ ಡ್ಯಾಂ ಬಳಿಗೆ ಹೋಗಿಬಿಡಬಹುದು. ಆದರೆ ಈಚೆಗೆ ಕೆಲ ಸಮಯದಿಂದ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಆದರೆ ಅಷ್ಟಕ್ಕೇ ನಿರಾಶರಾಗಬೇಕಿಲ್ಲ. ಗುಡ್ಡದಿಂದ ಇಳಿಯುವ ದಾರಿಯಲ್ಲಿಯೇ ಕಾಣುವ ಅರ್ಕಾವತಿಯ ನೋಟ ಸ್ವರ್ಗಸದೃಶ! ಅಲ್ಲದೆ ಸಮೀಪವಿರುವ ಗುಡ್ಡಗಳನ್ನು ಹತ್ತಿದರೆ ಪುಟ್ಟ ಟ್ರೆಕ್ಕಿಂಗ್‌ ಅನುಭವದ ಜೊತೆಗೆ ಅಪರೂಪದ ನೋಟವನ್ನೂ ನೋಡಬಹುದು.
ದೂರ: 40 ಕಿ.ಮೀ. 

4. ಹೆಬ್ಟಾಳ ಕೆರೆ: ಹೆಸರಘಟ್ಟ ಕೆರೆಯಂತೆಯೇ ಹೆಬ್ಟಾಳ ಕೆರೆಯೂ ಪಕ್ಷಿಪ್ರೇಮಿಗಳ ತಾಣ. ಸೂರ್ಯೋದಯದ ಹೊನ್ನಿನ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಸೂಕ್ತ ಸ್ತಳವೂ ಹೌದು. ನಗರಕ್ಕೆ ಹತ್ತಿರವೇ ಇರುವ ಈ ಜಾಗ ವಾಕಿಂಗ್‌ ಮಾಡುವವರಿಂದ, ಪುಸ್ತಕ ಓದುವವರಿಂದ ಮತ್ತು ಛಾಯಾಗ್ರಾಹಕರಿಂದ ತುಂಬಿರುತ್ತದೆ. ಹೆಬ್ಟಾಳ ಫ್ಲೈ ಓವರ್‌ ಮೇಲಿನಿಂದಲೂ ಕೆರೆಯ ಸುಂದರ ನೋಟ ಸಿಗುತ್ತದೆ.
ದೂರ: 14 ಕಿ.ಮೀ. 

5. ಕಣ್ವಾ ಡ್ಯಾಂ: ರಾಮನಗರದ ಬಳಿಯಿರುವ ಕಣ್ವಾ ಡ್ಯಾಂ ಹಸಿರಿಂದ ಸಮೃದ್ಧವಾಗಿರುವ ಗುಡ್ಡಗಳಿಂದ ಸುತ್ತುವರಿಯಲ್ಪಟ್ಟಿದೆ. ಕೃಷಿಯ ಉದ್ದೇಶದಿಂದ ಸೃಷ್ಟಿಯಾದ ಈ ಅಣೆಕಟ್ಟು ಸುಮಾರು 770 ಹೆಕ್ಟೇರುಗಳಷ್ಟು ವಿಸ್ತಾರವಾಗಿದೆ. ನಗರ ಪ್ರದೇಶದಿಂದ ದೂರ ಹೋಗಲಿಚ್ಛಿಸುವವರು ಈ ಸ್ಥಳಕ್ಕೆ ಭೇಟಿ ನೀಡಬಹುದು. ಸುಂದರ ಹಿನ್ನೆಲೆಯಲ್ಲಿ ಮುಂಜಾವಿನ ಮಧುರ ಕ್ಷಣಗಳನ್ನು ಸವಿಯಬಹುದು.
ದೂರ: 62 ಕಿ.ಮೀ.

6. ತುರಹಳ್ಳಿ ಫಾರೆಸ್ಟ್‌: ನಗರದ ರಾಕ್‌ ಕ್ಲೈಂಬಿಂಗ್‌ ಪ್ರಿಯರ ಮೆಚ್ಚಿನ ತಾಣವಿದು. ಬೃಹತ್‌ ಬಂಡೆಗಳಿಂದ ಕೂಡಿರುವ ತುರಹಳ್ಳಿ ಫಾರೆಸ್ಟ್‌ ಕನಕಪುರ ರಸ್ತೆಯಲ್ಲಿ ಸಿಗುತ್ತೆ. ವಾಹನಗಳನ್ನು ಪಾರ್ಕ್‌ ಮಾಡಿ ಒಂದಷ್ಟು ಕಿ.ಮೀ. ನಡೆದು, ಒಂದಷ್ಟು ಎತ್ತರವನ್ನು ಹತ್ತಿದರೆ ವ್ಯೂ ಪಾಯಿಂಟ್‌ ತಲುಪಿಬಿಡಬಹುದು. ಇಲ್ಲಿಂದ ಬೆಂಗಳೂರು ನಗರದ ಸುಂದರ ದೃಶ್ಯ ಕಾಣಸಿಗುತ್ತದೆ. ಈ ಎತ್ತರದಿಂದ ಸೂರ್ಯೋದಯದ ಸೊಗಸನ್ನೂ ಅನುಭವಿಸಬಹುದು. 
ದೂರ: 20 ಕಿ.ಮೀ.

* ಹವನ

Advertisement

Udayavani is now on Telegram. Click here to join our channel and stay updated with the latest news.

Next