Advertisement

ಆಫ್ರಿಕಾ ಪ್ರವಾಸ ವೇಳೆ ವೇಗಿಗಳ ಮೇಲೆ ಭರವಸೆ: ಪ್ರಸಾದ್‌

09:36 AM Dec 23, 2017 | Team Udayavani |

ಕೋಲ್ಕತಾ: ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆಂದು ಆರಿಸಲಾದ ಟೀಮ್‌ ಇಂಡಿಯಾದ 5 ಮಂದಿ ವೇಗಿಗಳ ತಂಡ, ಆ ರಾಷ್ಟ್ರಕ್ಕೆ ತೆರಳುವ ಅತ್ಯುತ್ತಮ ಮಟ್ಟದ ವೇಗದ ಬೌಲಿಂಗ್‌ ಪಡೆಯಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಪ್ರಸಾದ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

“ಎದುರಾಳಿಗಳ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡಲಾರೆ. ತಮ್ಮ ತಂಡದ ಬಗ್ಗೆ ಹೇಳುವುದಾದರೆ, ಇದು ದಕ್ಷಿಣ ಆಫ್ರಿಕಾ ಪ್ರವಾಸಗೈಯುವ ತಂಡಗಳಲ್ಲೇ ಅತ್ಯುತ್ತಮ ದರ್ಜೆಯ ವೇಗದ ಬೌಲಿಂಗ್‌ ಪಡೆಯನ್ನು ಹೊಂದಿದೆ. ಬೌಲಿಂಗಿನಲ್ಲಿ ವೈವಿಧ್ಯವಿದೆ. ನಂಬರ್‌ ವನ್‌ ತಂಡವೆಂಬ ಗರಿಮೆ ಇದೆ. ನಮ್ಮದು ಅತ್ಯಂತ ಸಮತೋಲಿತ ತಂಡ. ತವರಿನಲ್ಲಿ ನಾವು ಸತತವಾಗಿ ಗೆಲ್ಲುತ್ತ ಬಂದಿದ್ದೇವೆ. ದಕ್ಷಿಣ ಆಫ್ರಿಕಾ ಪ್ರವಾಸವನ್ನೂ ಗೆಲುವಿನಿಂದ ಆರಂಭಿಸಿದರೆ ನೈತಿಕ ಬಲ ಲಭಿಸಿದಂತಾಗುತ್ತದೆ’ ಎಂದು ಪ್ರಸಾದ್‌ ಹೇಳಿದರು.

3 ಪಂದ್ಯಗಳ ಟೆಸ್ಟ್‌ ಸರಣಿಗೆ ಭಾರತ ತಂಡವನ್ನು ಈಗಾಗಲೇ ಅಂತಿಮಗೊಳಿಸಲಾಗಿದ್ದು, ವೇಗಿಗಳ ವಿಭಾಗದಲ್ಲಿ ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಇಶಾಂತ್‌ ಶರ್ಮ ಮತ್ತು ಜಸ್‌ಪ್ರೀತ್‌ ಬುಮ್ರಾ ಅವರಿಗೆ ಅವಕಾಶ ಲಭಿಸಿದೆ. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಹೆಚ್ಚುವರಿ ಆಯ್ಕೆಯಾಗಿದ್ದಾರೆ.

“ಯಾದವ್‌ ಮತ್ತು ಶಮಿ ಗಂಟೆಗೆ 140 ಕಿ.ಮೀ. ವೇಗದಲ್ಲಿ ಬೌಲಿಂಗ್‌ ಮಾಡಿದರೂ ಚೆಂಡನ್ನು ಸ್ವಿಂಗ್‌ ಮಾಡಬಲ್ಲರು. ಭುವಿ ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್‌ ಮಾಡಲು ಶಕ್ತರು. ಇಶಾಂತ್‌ ಅನುಭವಿ ಬೌಲರ್‌. ಬುಮ್ರಾ ಅವರನ್ನು ಟೆಸ್ಟ್‌ ತಂಡಕ್ಕೆ ಸೇರಿಸಿಕೊಂಡಿದ್ದರಿಂದ ವೇಗದ ಬೌಲಿಂಗ್‌ ವಿಭಾಗದಲ್ಲಿ “ವೆರೈಟಿ’ ಕಾಣಬಹುದಾಗಿದೆ. ಒಟ್ಟಾರೆ ನಮ್ಮ ಬೌಲಿಂಗ್‌ ವಿಭಾಗದಲ್ಲಿ 5 ವಿವಿಧ ನಮೂನೆಯ ವೈವಿಧ್ಯ ಗೋಚರಿಸುತ್ತಿದೆ’ ಎಂದರು.

ರಹಾನೆ ಬಗ್ಗೆ ಚಿಂತೆ ಇಲ್ಲ
ಈ ಸಂದರ್ಭದಲ್ಲಿ ಉಪಕಪ್ತಾನನೂ ಆಗಿರುವ ಅಜಿಂಕ್ಯ ರಹಾನೆ ಅವರ ಬ್ಯಾಟಿಂಗ್‌ ವೈಫ‌ಲ್ಯದ ಪ್ರಶ್ನೆಯೂ ತೂರಿಬಂತು. ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿಯ 5 ಇನ್ನಿಂಗ್ಸ್‌ಗಳಲ್ಲಿ ರಹಾನೆ ಕೇವಲ 17 ರನ್‌ ಮಾಡಿದ್ದರು. “ರಹಾನೆ ವಿದೇಶಗಳಲ್ಲಿ ನಮ್ಮ ತಂಡದ ಕೀ ಬ್ಯಾಟ್ಸ್‌ಮನ್‌. ಅವರು ಬಹುತೇಕ ಎಲ್ಲ ವಿದೇಶಿ ಟ್ರ್ಯಾಕ್‌ಗಳಲ್ಲೂ ರನ್‌ ಬಾರಿಸಿದ್ದನ್ನು ಪ್ರಶಂಸಿಸಲೇಬೇಕು. ರಹಾನೆ ಫಾರ್ಮ್ ಬಗ್ಗೆ ನನಗೇನೂ ಚಿಂತೆ ಇಲ್ಲ. ಪರಿಸ್ಥಿತಿಯನ್ನು ನಿಭಾಯಿಸುವಷ್ಟು ಅನುಭವವನ್ನು ಅವರು ಹೊಂದಿದ್ದಾರೆ’ ಎಂದರು ಪ್ರಸಾದ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next