Advertisement

ಭವಿಷ್ಯ ಊಹಿಸುವುದು ಅಸಾಧ್ಯ, ನಿಭಾವಣೆಯೂ ಕಷ್ಟಸಾಧ್ಯ…

11:44 AM Jun 04, 2020 | mahesh |

ಉಡುಪಿ: ರಾಜ್ಯಕ್ಕೆ ವಿಶೇಷವಾಗಿ ಕರಾವಳಿ ಭಾಗಕ್ಕೆ ಹೊರ ರಾಜ್ಯದವರ ಪ್ರವೇಶ ಗುರುವಾರ ಮತ್ತೆ ಆರಂಭವಾಗಲಿದ್ದು, ಇದುವರೆಗೆ ಕಂಡ ಕೋವಿಡ್ ಪ್ರಕರಣಗಳಿಗಿಂತ ಹೆಚ್ಚಿನ ಪ್ರಕರಣಗಳ ಅಲೆಗಳು ಅಪ್ಪಳಿಸುವ ಸಾಧ್ಯತೆಗಳು ಕಾಣಿಸುತ್ತಿವೆ. ಈಗಿರುವ ನಿಯಮಾವಳಿ ಪ್ರಕಾರ ಮಹಾರಾಷ್ಟ್ರ ರಾಜ್ಯದಿಂದ ಬಂದವರಿಗೆ ಮಾತ್ರ ಸಾಂಸ್ಥಿಕ ಕ್ವಾರಂಟೈನ್‌ ವಿಧಿಸಲಾಗುತ್ತಿದೆ. ಇದು ಏಳು ದಿನಗಳ ಕಾಲ. ಅನಂತರ ಏಳು ದಿನ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಇತರ ರಾಜ್ಯಗಳಿಂದ ಬರುವವರು ನೇರವಾಗಿ ಮನೆಗೆ ಹೋಗಿ ಅಲ್ಲಿ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಈ ರೀತಿ ಬಂದವರಲ್ಲಿ ಕೆಮ್ಮು, ಶೀತ, ಉಸಿರಾಟದ ಸಮಸ್ಯೆ ಇದ್ದರೆ ಮಾತ್ರ ಅಂಥವರ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ.

Advertisement

ಸಾಂಸ್ಥಿಕ ಕ್ವಾರಂಟೈನ್‌ ಸಾಧ್ಯವೆ?
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂಬರುವ ದಿನಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಕಾರ್ಯಸಾಧ್ಯವೆ ಎಂಬ ವಿಷಯ ಚರ್ಚೆಗೆ ಬಂದಿದೆ. ಜೂ. 18ರಂದು ದ್ವಿತೀಯ ಪಿಯುಸಿ, ಜೂ. 25ರಿಂದ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ. ಇನ್ನೊಂದೆಡೆ ಶಾಲಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಶಾಲೆ ಆರಂಭವಾದರೆ ಹಾಸ್ಟೆಲ್‌ಗ‌ಳಿಗೂ ವಿದ್ಯಾರ್ಥಿಗಳು ಬರುತ್ತಾರೆ. ಹೀಗಿರುವಾಗ ಸಾಂಸ್ಥಿಕ ಕ್ವಾರಂಟೈನ್‌ ಹೇಗೆ ನಿಭಾಯಿಸುವುದು ಎಂದು ಸಭೆಯಲ್ಲಿ ಪಾಲ್ಗೊಂಡ ಶಾಸಕರು ಪ್ರಶ್ನಿಸಿದ್ದಾರೆ.

ಹೋಂ ಕ್ವಾರಂಟೈನ್‌ ನಿಗಾ ಹೇಗೆ?
ಬರುವವರನ್ನು ಹೋಂ ಕ್ವಾರಂಟೈನ್‌ ಮಾಡಿ ಸ್ಥಳೀಯ ಕೋವಿಡ್‌ ವಾರಿಯರ್ ಮೂಲಕ ನಿಗಾ ವಹಿಸಬೇಕಾಗುತ್ತದೆ ಎಂಬ ಸಲಹೆ ಸಭೆಯಲ್ಲಿ ಬಂದಿದೆ. ಆದರೆ ಇದು ಕೇವಲ ಚರ್ಚೆ ಮಾತ್ರ. ನಿರ್ಧಾರ ಇನ್ನಷ್ಟೇ ಬರಬೇಕಾಗಿದೆ. ಗುರುವಾರ ಬೆಂಗಳೂರಿನಲ್ಲಿ ಡಾ| ಸುಧಾಕರ್‌ ಸಿಎಂ ಜತೆ ಮಾತನಾಡಿ ಹೊಸ ಆದೇಶವನ್ನು ಕೊಡಿಸಬಹುದು. ಆದರೆ ಇದರ ಜಾರಿಯನ್ನು ಸಾರ್ವಜನಿಕರು ಎಷ್ಟು ಪಾಲಿಸಬಹುದು ಎಂಬುದೇ ಯಕ್ಷ ಪ್ರಶ್ನೆ. ಈಗಾಗಲೇ ಸಾಂಸ್ಥಿಕ ಕ್ವಾರಂಟೈನ್‌ ಮುಗಿಸಿ ಹೋಂ ಕ್ವಾರಂಟೈನ್‌ಗೆ ಹೋಗಿರುವವರೂ ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇನ್ನು ನೇರ ಬಂದವರು….

ಕೋವಿಡ್ ಗುಪ್ತಗಾಮಿನಿಯೇ?
ಈಗಾಗಲೇ ಸೋಂಕಿತರ ಸ್ಥಾನದಲ್ಲಿ ಅಗ್ರ ಸ್ಥಾನವನ್ನು ಉಡುಪಿ ಜಿಲ್ಲೆ ಗಳಿಸಿಯಾಗಿದೆ. ಇನ್ನು ಮುಂದೆ ವಿದೇಶದಿಂದ ಬಂದವರಿಂದ ಮಾತ್ರ ಗಂಟಲು ದ್ರವ ಸಂಗ್ರಹಿಸುತ್ತಾರೆ. ಇತರರಿಗೆ ಸೋಂಕಿನ ಲಕ್ಷಣಗಳಿದ್ದರೆ ಮಾತ್ರ ಗಂಟಲು ದ್ರವದ ಸಂಗ್ರಹ ನಡೆಯಲಿದೆ. ಈಗಿರುವ ಸನ್ನಿವೇಶದಲ್ಲಿ ಆರೋಗ್ಯ ಇಲಾಖೆಯವರ ಮಾಹಿತಿ ಪ್ರಕಾರ ಶೇ. 98 ಸೋಂಕಿತರಿಗೆ ಕೊರೊನಾ ಬಾಧೆಯ ಯಾವುದೇ ಲಕ್ಷಣಗಳಿಲ್ಲ. ಒಂದು ವೇಳೆ ಲಕ್ಷಣಗಳಿಲ್ಲದವರ ಮಾದರಿಯನ್ನು ಸಂಗ್ರಹಿ ಸದೆ ಇದ್ದರೆ ಪರಿಸ್ಥಿತಿ ಏನಾದೀತು ಎಂದು ಈಗಲೇ ಊಹಿಸಲು ಅಸಾಧ್ಯ. ಉಡುಪಿ ಪುಟ್ಟ ಜಿಲ್ಲೆಯಾದರೂ 12,613 ಮಂದಿಯ ಗಂಟಲು ದ್ರವ ಸಂಗ್ರಹಿಸಲಾಗಿತ್ತು. ಇತರ ದೊಡ್ಡ ಜಿಲ್ಲೆಗಳಿಗೆ ಹೋಲಿಸಿದರೆ ಇಷ್ಟೊಂದು ಮಾದರಿಗಳನ್ನು ಸಂಗ್ರಹಿಸಲೇ ಇಲ್ಲ. ಅಲ್ಲಿ ಕೊರೊನಾ ಗುಪ್ತಗಾಮಿನಿಯಾಗಿ ಹರಿಯುವುದು ತಿಳಿದುಬರುವಾಗ ಪರಿಸ್ಥಿತಿ ಯಾವ ಮಟ್ಟಕ್ಕೆ ಮುಟ್ಟಿರಬಹುದು ಎಂದು ಊಹಿಸಲು ಕಷ್ಟವಾಗುತ್ತದೆ.

ಎಷ್ಟು ಜನ ಬರಬಹುದು?
ಈಗಾಗಲೇ ಉಡುಪಿ ಜಿಲ್ಲೆಗೆ ಬರಲು ಸೇವಾಸಿಂಧು ಆ್ಯಪ್‌ನಲ್ಲಿ 7,000 ಪಾಸ್‌ಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಹೊಸ ಆದೇಶದ ಪ್ರಕಾರ ಸೇವಾಸಿಂಧುವಿನಲ್ಲಿ ದಾಖಲಿಸಿ ರಾಜ್ಯಕ್ಕೆ ಪ್ರವೇಶಿಸಬಹುದು. ಈಗ ಅನುಮತಿ ಬೇಕಿಲ್ಲ, ಅರ್ಜಿ ಸಲ್ಲಿಸುವುದು ಮಾತ್ರ ಕೆಲಸ. ಆದುದರಿಂದ ಮುಂದೆ ಪರಿಸ್ಥಿತಿ ಏನಾಗುತ್ತದೆಯೋ ಗೊತ್ತಿಲ್ಲ. ಜನರಂತೂ ಸ್ವಯಂ ಜಾಗ್ರತೆ ವಹಿಸುವುದು ಅಗತ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next