ರಾಯಚೂರು: ಕಾಂಗ್ರೆಸ್ ನವರು ನಡೆಸುತ್ತಿರುವುದು ಭಾರತ್ ಜೋಡೋ ಅಲ್ಲ, ಫ್ಯಾಮಿಲಿ ಪ್ಯಾಕ್ ಪಾದಯಾತ್ರೆ ಎಂದು ಕಂದಾಯ ಸಚಿವ ಆರ್.ಅಶೋಕ ಟೀಕಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೇ ಸಿದ್ದರಾಮಯ್ಯ ಹಿಂದೆ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಆಗ ಸೋನಿಯಾ ಗಾಂಧಿ ಬಂದಿದ್ದರಾ? ಬಂಡೆ ಅಂತಿರಲ್ಲ ಅವರು ಕೂಡ ಪಾದಯಾತ್ರೆ ಮಾಡಿದಾಗ ಯಾರೂ ಪಾಲ್ಗೊಂಡಿದ್ದರು? ಇದು ಫ್ಯಾಮಿಲಿ ವರ್ಚಸ್ಸು, ಐಡೆಂಟಿಟಿ ಉಳಿಸಿಕೊಳ್ಳಲು ಮಾಡುತ್ರಿರುವ ಪಾದಯಾತ್ರೆ. ಇವರು ಒಂದು ದಿನ ಕುಟುಂಬ ಬಿಟ್ಟು ಜನತೆ ಜೊತೆ ನಿಂತಿಲ್ಲ. ಇವರ ಪಾದಯಾತ್ರೆ ನೋಡಿದಾಗ ಹಸು, ಕರು ಗುರುತು ಮತ್ತೆ ಬಂದಿದೆ ಎನಿಸುತ್ತದೆ ಎಂದರು.
ಸೋರುತಿಹುದು ಕಾಂಗ್ರೆಸ್ ಮನೆಯ ಮಾಳಿಗೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇವತ್ತು ಅವರ ಕಾಲದ 20 ಸಚಿವರು ವಿವಿಧ ಕೇಸ್ ಗಳಲ್ಲಿ ಅಲೆದಾಡುತ್ತಿದ್ದಾರೆ. ಇವರು ಡೀಲ್ ಮಾಸ್ಟರ್ ಗಳು. ತಾನು ಕಳ್ಳ ಪರರ ಬಂಬ ಎನ್ನುವಂತಾಗಿದೆ ಕಾಂಗ್ರೆಸ್ ನವರ ಸ್ಥಿತಿ. ಸಿದ್ದರಾಮಯ್ಯನವರೇ ಮೋದಿ ಬಗ್ಗೆ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ರೀತಿಯಾಗಿದೆ. ಮೋದಿ ಯಾರು ಎಂದು ಪಾಕಿಸ್ತಾನ, ಚೀನಾಕ್ಕೆ ಹೋಗಿ ಕೇಳಲಿ ಎಂದು ಅಶೋಕ್ ಹೇಳಿದರು.
ಇದನ್ನೂ ಓದಿ:ರೋಹಿತ್ ಅಭಿಮಾನಿಯನ್ನು ಹತ್ಯೆಗೈದ ವಿರಾಟ್ ಕೊಹ್ಲಿ ಫ್ಯಾನ್: ಏನಿದು ‘ಫ್ಯಾನ್ಸ್ ವಾರ್’?
ಕಳೆದ ಎರಡು ವರ್ಷದಿಂದ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಜನರ ಜೊತೆ ಕುಳಿತು ಮಾತನಾಡಿದಾಗ ಮನೆ ಬಾಗಿಲಿಗೆ ಪರಿಹಾರ ಸಿಗುತ್ತದೆ. ಲಂಬಾಣಿ ತಾಂಡಾ, ಕುರುಬರ ಹಟ್ಟಿ ಬಗ್ಗೆ ಯಾವ ಸರ್ಕಾರಗಳು ಗಮನ ಹರಿಸಿರಲಿಲ್ಲ. ನಮ್ಮ ಸರ್ಕಾರಿಂದ ಅವುಗಳನ್ನು ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ 60 ಸಾವಿರ ಜನರಿಗೆ ಸ್ಥಳದಲ್ಲೇ ಹಕ್ಕು ಪತ್ರಗಳನ್ನು ನೀಡಲಾಗುವುದು. ನವೆಂಬರ್ ಕೊನೆ ವೇಳೆಗೆ ರಾಜ್ಯಾದ್ಯಂತ 1.5 ಲಕ್ಷ ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು. ಮೂರು ತಿಂಗಳ ಕಾಲ ಈ ಪ್ರಕ್ರಿಯೆ ಜಾರಿಯಲ್ಲಿರತ್ತದೆ ಎಂದರು.
ಬೆಂಗಳೂರು ಸೇರಿ ರಾಜ್ಯದಲ್ಲಿ ಸರ್ಕಾರಿ ಜಾಗ ಒತ್ತುವರಿ ಕುರಿತು ಪ್ರತಿ ವಾರ ಒತ್ತುವರಿಗೆ ಸಂಬಂಧಿಸಿದ ಅರ್ಜಿ ವಿಲೇವಾರಿ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಬೆಂಗಳೂರಿನ ಪೂರ್ವ ಭಾಗದಲ್ಲಿ ಲಕ್ಷಾಂತರ ಜನ ನೋವು ಅನುಭವಿಸಿದ್ದಾರೆ. ದೊಡ್ಡವರ ಸ್ಥಳ ಒತ್ತುವರಿ ಮಾಡಿದ್ದರೂ ಒಡೆದು ಹಾಕುವಂತೆ ಸೂಚಿಸಿದ್ದೇನೆ. ನ್ಯಾಯಾಲಯ ತಡೆಯಾಜ್ಞೆ ತೆರವಿಗೆ ಒತ್ತು ನೀಡಲಾಗುತ್ತಿದೆ ಎಂದರು.