Advertisement

ನೇತಾರರ ಆಸ್ತಿ  ಮೇಲೂ ಐಟಿ ಕಣ್ಣು

06:55 AM Sep 12, 2017 | Harsha Rao |

ಹೊಸದಿಲ್ಲಿ: ಜನಪ್ರತಿನಿಧಿಗಳೇ ಹುಷಾರಾಗಿರಿ. ಐಟಿ ಅಧಿಕಾರಿಗಳು ಯಾವುದೇ ಕ್ಷಣದಲ್ಲಿ ನಿಮ್ಮ ಮನೆ ಬಾಗಿಲು ತಟ್ಟಬಹುದು!

Advertisement

ಒಂದು ಚುನಾವಣೆಯಿಂದ ಮತ್ತೂಂದು ಚುನಾವಣೆಗೆ ಜನಪ್ರತಿನಿಧಿಗಳ ಆಸ್ತಿಯಲ್ಲಿ  ಬೆರಗು ಮೂಡಿಸುವಷ್ಟು ಹೆಚ್ಚಳ ಕಂಡುಬರುತ್ತಿರುವ ಬಗ್ಗೆ ಕೇಂದ್ರ ಸರಕಾರವನ್ನು ಸುಪ್ರೀಂಕೋರ್ಟ್‌ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಇಂಥ ಕುಬೇರರ ಮೇಲೆ ಐಟಿ ಇಲಾಖೆ ಕಣ್ಣು ನೆಟ್ಟಿದೆ. ಪರಿಣಾಮ, ಮ್ಯಾಜಿಕ್‌ ಮಾಡಿದಂತೆ ಆಸ್ತಿಪಾಸ್ತಿಯನ್ನು ಐದೈದು ಪಟ್ಟು ಹೆಚ್ಚಳ ಮಾಡಿಕೊಂಡಿರುವ ನೇತಾರರಿಗೆ ಈಗ ಬಿಸಿ ಮುಟ್ಟತೊಡಗಿದೆ.

ವಿಧಾನಸಭೆ, ಲೋಕಸಭೆ ಚುನಾವಣೆಗಳ ಬಳಿಕ ಯಾರ್ಯಾರ ಆಸ್ತಿಯಲ್ಲಿ ದಿಢೀರ್‌ ಏರಿಕೆ ಕಂಡು ಬಂದಿದೆಯೋ ಅಂಥವರ ವ್ಯವಹಾರಗಳನ್ನು ಪರಿಶೀಲಿಸುವುದಾಗಿ ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿದವಿತ್‌ನಲ್ಲಿ ತಿಳಿಸಿದೆ. ಕಳೆದ ವಾರವಷ್ಟೇ ಈ ವಿಚಾರ ವಾಗಿ ಸರಕಾರವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತಲ್ಲದೆ, ಸೆ.12ರೊಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿತ್ತು.

“7 ಸಂಸದರು ಮತ್ತು 98 ಶಾಸಕರ ಆಸ್ತಿಪಾಸ್ತಿ ಹೆಚ್ಚಳದ ಕುರಿತು ಪರಿಶೀಲನೆ ನಡೆಸುತ್ತೇವೆ. ಮೇಲ್ನೋಟಕ್ಕೆ ಈ ಜನಪ್ರತಿನಿಧಿಗಳ ವಿರುದ್ಧ ಆದಾಯ ತೆರಿಗೆ ಇಲಾಖೆಗೂ ಕೆಲವೊಂದು ಸಾಕ್ಷ್ಯಗಳು ದೊರೆತಿವೆ. ಇನ್ನೂ 42 ಮಂದಿ ಶಾಸಕರು, ಲೋಕಸಭೆಯ 9, ರಾಜ್ಯಸಭೆಯ 11 ಸಂಸದರ ಆಸ್ತಿಯ ಕುರಿತು ಪ್ರಾಥಮಿಕ ತನಿಖೆ ನಡೆಸಲಾಗಿದೆ. ಈ ಸಚಿವರ ಹೆಸರುಗಳನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸು ತ್ತೇವೆ’ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತಿಳಿಸಿದೆ.

ಸುಪ್ರೀಂ ಕೋರ್ಟ್‌ ಏನು ಹೇಳಿತ್ತು?: ಒಂದು ಕಡೆ ನೀವು ಚುನಾವಣಾ ಸುಧಾರಣೆ ಬಗ್ಗೆ ಮಾತ ನಾಡುತ್ತೀರಿ. ಆದರೆ ಒಂದು ಚುನಾವಣೆಯಿಂದ ಮತ್ತೂಂದು ಚುನಾವಣೆ ಬರುವುದರ ನಡುವೆ ದೇಶದ ಅನೇಕ ಶಾಸಕರು ಹಾಗೂ ಸಂಸದರ ಆಸ್ತಿಗಳು ದುಪ್ಪಟ್ಟಾಗುವುದು ಹೇಗೆ? ಅದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ನ್ಯಾ| ಚಲಮೇಶ್ವರ ನೇತೃತ್ವದ ಪೀಠ ಕೇಂದ್ರ ಸರಕಾರವನ್ನು ಪ್ರಶ್ನಿಸಿತ್ತು. ಬರೀ ಮಾತುಗಳನ್ನು ಆಡುವ ಬದಲು, ಅಗತ್ಯ ಮಾಹಿತಿಗಳನ್ನು ಒಪ್ಪಿಸಿ ಎಂದು ನ್ಯಾಯಪೀಠ ನಿರ್ದೇಶಿಸಿತ್ತು.

Advertisement

ಒಂದೇ ಅವಧಿಯಲ್ಲಿ ಆಸ್ತಿ ಶೇ.40,000ದಷ್ಟು ಹೆಚ್ಚಳ
5 ವರ್ಷಗಳಲ್ಲಿ  ಕೆಲವು ಜನಪ್ರತಿನಿಧಿ ಗಳ ಆಸ್ತಿಯ ಪ್ರಮಾಣವು ಶೇ.40 ಸಾವಿರ ದಷ್ಟು ಹೆಚ್ಚಳವಾಗಿದೆ. ಆ ಪೈಕಿ ಕೇರಳ ಕಾಂಗ್ರೆಸ್‌ ಶಾಸಕ ವಿಷ್ಣುನಾಥ್‌ ಪ್ರಮುಖರು. 2008ರಲ್ಲಿ ಇವರಲ್ಲಿದ್ದದ್ದು ಕೇವಲ 5,632 ರೂ. ಮೊತ್ತದ ಆಸ್ತಿ. ಆದರೆ, 2013ರಲ್ಲಿ ಇದು 25.02 ಲಕ್ಷ ರೂ.ಗೆ ತಲುಪಿದೆ. ಅಂದರೆ, ಇವರ ಆಸ್ತಿಯ ಪ್ರಮಾಣದಲ್ಲಿ ಶೇ.44,325ರಷ್ಟು ಹೆಚ್ಚಳವಾಗಿದೆ ಎಂದು ಕಳೆದ ಫೆಬ್ರವರಿಯಲ್ಲಿ ಡಿಎನ್‌ಎ ವರದಿ ಮಾಡಿತ್ತು. ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದ್ದ ಅಫಿದವಿತ್‌ಗಳು ಹಾಗೂ ಮಾಹಿತಿ ಹಕ್ಕು ಕಾಯ್ದೆಯನ್ವಯ ಪಡೆದ ಮಾಹಿತಿಗಳನ್ನು ಆಧರಿಸಿ ಈ ವರದಿಯನ್ನು ನೀಡಲಾಗಿತ್ತು. ಜತೆಗೆ, 2009-14ರ ಅವಧಿ ಯಲ್ಲಿ ನಾಲ್ವರು ಲೋಕಸಭೆ ಸಂಸದರ ಆಸ್ತಿ ಶೇ. 1,200ರಷ್ಟು  ಏರಿಕೆಯಾಗಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಎಸ್ಪಿ ನಾಯಕ ಮುಲಾಯಂ ಸಿಂಗ್‌ ಯಾದವ್‌, ಸಚಿವ ಅರ್ಜುನ್‌ ರಾಂ ಮೇಘವಾಲ್‌ ಅವರ ಆಸ್ತಿ ಶೇ.500ರಷ್ಟು  ಹೆಚ್ಚಳವಾಗಿದೆ ಎಂದೂ ವರದಿ ಹೇಳಿತ್ತು.

ಟಾಪ್‌ 5 ಸಂಸದರು 
– ಕಮಲೇಶ್‌ ಪಾಸ್ವಾನ್‌ (ಬಿಜೆಪಿ) – ಶೇ.5,649
– ಇ.ಟಿ.ಮೊಹಮ್ಮದ್‌ ಬಶೀರ್‌(ಮುಸ್ಲಿಂ ಲೀಗ್‌) – ಶೇ.2,081
– ಸಿಸಿರ್‌ ಕುಮಾರ್‌ ಅಧಿಕಾರಿ (ಟಿಎಂಸಿ) – ಶೇ.1,700
– ಡಾ|  ಪಿ.ವೇಣುಗೋಪಾಲ್‌(ಎಐಎಡಿಎಂಕೆ) – ಶೇ.1,281
– ಡಾ| ರಾಮಶಂಕರ್‌ ಕಥೇರಿಯಾ (ಬಿಜೆಪಿ) – ಶೇ.869

(ಡಿಎನ್‌ಎ ವರದಿ)

Advertisement

Udayavani is now on Telegram. Click here to join our channel and stay updated with the latest news.

Next