Advertisement

ಕನಸಿನಲ್ಲಿದ್ದೇನೆ: ಹಿಮಾದಾಸ್‌

06:00 AM Jul 14, 2018 | Team Udayavani |

ಹೊಸದಿಲ್ಲಿ: ಮಕ್ಕಳ ಜತೆ ಫ‌ುಟ್‌ಬಾಲ್‌ ಆಡುತ್ತಿದ್ದ ಅಸ್ಸಾಂನ ಸಾಮಾನ್ಯ ಹಳ್ಳಿಯೊಂದರ ಬಾಲಕಿ ಹಿಮಾ ದಾಸ್‌ ಆ್ಯತ್ಲೆಟಿಕ್ಸ್‌ನಲ್ಲಿ ವಿಶ್ವ ಚಾಂಪಿಯನ್‌ ಆಗಿ ಮಿಂಚಿದ ಕಥೆಯಿದು. ಫಿನ್‌ಲ್ಯಾಂಡ್‌ನ‌ಲ್ಲಿ ನಡೆಯುತ್ತಿರುವ ಐಎಎಎಫ್ ವಿಶ್ವ ಅಂಡರ್‌ 20 ಆ್ಯತ್ಲೆಟಿಕ್‌ ಕೂಟದ ವನಿತೆಯರ 400 ಮೀ. ಓಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ 18ರ ಹರೆಯದ ಹಿಮಾದಾಸ್‌ ದೇಶದ ಗಮನವನ್ನು ತನ್ನತ್ತ ಸೆಳೆದಿದ್ದಾರೆ. 

Advertisement

ಅಸ್ಸಾಂನ ನಾಗಾಂವ್‌ ಜಿಲ್ಲೆಯ ಕಂಧುಲಿಮರಿ ಗ್ರಾಮದ ರೈತ ಕುಟುಂಬದ ಮಗಳು ಹಿಮಾದಾಸ್‌ ವಿಶ್ವ ಮಟ್ಟದ ಅಂಡರ್‌ 20 ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ವನಿತೆ ಎನಿಸಿಕೊಂಡಿದ್ದಾರೆ. ಈ ಹಿಂದೆ 2016ರಲ್ಲಿ ಪೋಲೆಂಡಿನಲ್ಲಿ ನಡೆದ ಐಎಎಎಫ್ ವಿಶ್ವ ಅಂಡರ್‌ 20 ಕೂಟದ ಜಾವೆಲಿನ್‌ನಲ್ಲಿ ನೀರಜ್‌ ಚೋಪ್ರ ಚಿನ್ನ ಜಯಿಸಿದ್ದರು. 

ಕನಸಿನಲ್ಲಿದ್ದೇನೆ
ನನಗೆ ನಂಬಲಿಕ್ಕೆ ಆಗುತ್ತಿಲ್ಲ. ಪದಕ ಗೆಲ್ಲುತ್ತೇನೆಂದು ನಾನು ಇಲ್ಲಿಗೆ ಬಂದಿಲ್ಲ. ಆಶ್ಚರ್ಯವಾಗುತ್ತಿದೆ. ಕನಸಿನ ಗುಂಗಿ  ನಲ್ಲಿದ್ದೇನೆ ಎಂದು ಹಿಮಾ ದಾಸ್‌ ಪ್ರತಿಕ್ರಿಯೆ ನೀಡಿದರು. ನನ್ನ ಕುಟುಂಬದ ಪರಿಸ್ಥಿತಿ ನನಗೆ ತಿಳಿದಿದೆ. ನಾವು ಜೀವನ ನಿರ್ವಹಣೆಗೆ ಎಷ್ಟೊಂದು ಒದ್ದಾಡಿದ್ದೇವೆ ಎಂಬುದು ಗೊತ್ತಿದೆ. ಆದರೆ ದೇವರು ದೊಡ್ಡವ. ಅವರು ಎಲ್ಲರಿಗೂ ಏನಾದರೂ ಕೊಡುತ್ತಾನೆ ಎಂದು ದಾಸ್‌ ನುಡಿದರು.


ಆಕೆ ಛಲವಾದಿ 
ಅವಳು  ಛಲವಾದಿ. ಏನಾದರೂ ಮಾಡಬೇಕೆಂದು ಬಯಸಿದರೆ ಯಾರ ಮಾತನ್ನೂ ಕೇಳದೆ ಮುನ್ನುಗ್ಗುತ್ತಾಳೆ. ಅಂತಹ ದಿಟ್ಟ ಹುಡುಗಿ. ಹೀಗಾಗಿ ಅವಳಿಂದ ಈ ಸಾಧನೆ ಮಾಡುವಂತಾಗಿದೆ. ಅವಳು ದೇಶಕ್ಕಾಗಿ ಒಳ್ಳೆಯ ಸಾಧನೆ ಮಾಡುವ ಭರವಸೆ ನನಗಿದೆ ಎಂದು ತಂದೆ ರಂಜಿತ್‌ ಹೇಳಿದ್ದಾರೆ.
ದೈಹಿಕವಾಗಿಯೂ ಅವರು ಬಲಿಷ್ಠಳು. ನಮ್ಮಂತೆ ಅವರು ಚೆಂಡನ್ನು ಬಲವಾಗಿ ಕಿಕ್‌ ಮಾಡಬಲ್ಲಳು. ಮಕ್ಕಳ ಜತೆ ಫ‌ುಟ್‌ಬಾಲ್‌ ಆಡಬೇಡ ಎಂದರೆ ನಮ್ಮ ಮಾತನ್ನು ಕೇಳುವುದಿಲ್ಲ ಎಂದು ಅವಳ ಚಿಕ್ಕಪ್ಪ ಜಾಯ್‌ ದಾಸ್‌ ತಿಳಿಸಿದ್ದಾರೆ. ಅಲ್ಪ ಆದಾಯವಿರುವ ಕಾರಣ ಅವರ ಜೀವನ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ. ಆದರೂ ಈ ಕ್ಷಣ ಅವರೆಲ್ಲ ಮಗಳ ಸಾಧನೆಯನ್ನು ಸಂಭ್ರಮಿಸುವುದನ್ನು ಬಿಡಲಿಲ್ಲ.

ಶಿಕ್ಷಕರು ಕಾರಣ
ದಾಸ್‌ ತನ್ನ ಹಳ್ಳಿಯಲ್ಲಿ ಮಣ್ಣಿನಂಗಳದಲ್ಲಿ ಫ‌ುಟ್‌ಬಾಲ್‌ ಆಡುತ್ತಿದ್ದಾಗ ಓಡುವ ವೇಗವನ್ನು ಗಮನಿಸಿದ ಆಕೆಯ ಶಾಲೆಯ ಶಿಕ್ಷಕರು ಆ್ಯತ್ಲೆಟಿಕ್ಸ್‌ಗೆ ಸೇರಿಕೊಳ್ಳಲು ಸೂಚಿಸಿದರು. ತತ್‌ಕ್ಷಣವೇ ಯುವಜನ ಮತ್ತು ಕ್ರೀಡಾ ಇಲಾಖೆಯ ಆ್ಯತ್ಲೆಟಿಕ್‌ ಕೋಚ್‌ ನಿಪೋನ್‌ ದಾಸ್‌ ಅವರಿಗೆ ವಿಷಯ ತಿಳಿಸಲಾಯಿತು. ಅವರು ಇದು ಆಕೆಯ ಹಳ್ಳಿಯಿಂದ 150 ಕಿ.ಮೀ. ದೂರವಿರುವ ಗುವಾಹಾಟಿಗೆ ಬರು ವಂತೆ ಹೇಳಿದರು. ಆರಂಭದಲ್ಲಿ ಇದಕ್ಕೆ ಆಕೆಯ ಹೆತ್ತವರು ಒಪ್ಪಲಿಲ್ಲ. ಸಾಕಷ್ಟು ಬಾರಿ ಮನವೊಲಿಸಿದ ಬಳಿಕ ಒಪ್ಪಿದರು. ಗುವಾಹಾಟಿಗೆ ಬಂದ ದಾಸ್‌ ಇಂದಿರಾ ಗಾಂಧಿ ಆ್ಯತ್ಲೆಟಿಕ್‌ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿ ಈ ಸಾಧನ ಮಾಡುವಷ್ಟರಮಟ್ಟಿಗೆ ಬೆಳೆದರು.

ಆರು ಸದಸ್ಯರ ಬಡ ಕುಟುಂಬ
ಹಿಮಾ ದಾಸ್‌ ಅವರ ತಂದೆ ರಂಜಿತ್‌ ದಾಸ್‌ ಅವರಿಗೆ 0.4 ಎಕ್ರೆ ಜಾಗ ಮಾತ್ರ ಇರುವುದು. ತಾಯಿ ಜುನಾಲಿ ಗೃಹಿಣಿ, ಈ ಪುಟ್ಟ ಭೂಮಿ ಕುಟುಂಬದ ಆರು ಸದಸ್ಯರ ಆದಾಯ ಮೂಲ. ರಂಜಿತ್‌ ದಾಸ್‌ ಅವರ ನಾಲ್ಕು ಮಕ್ಕಳಲ್ಲಿ ಹಿಮಾ ದಾಸ್‌ ಹಿರಿಯವಳು. ಹಿಮಾದಾಸ್‌ಗೆ ಇಬ್ಬರು ಕಿರಿಯ ಸಹೋದರಿಯರು ಮತ್ತು ಓರ್ವ ಸಹೋದರ ಇದ್ದಾರೆ. ಕಿರಿಯಾಕೆ 10ನೇ ಓದುತ್ತಿದ್ದಾರೆ. ಇನ್ನಿಬ್ಬರು (ಅವಳಿ ಜವಳಿ-ಗಂಡು ಮತ್ತು ಹೆಣ್ಣು) 3ನೇ ತರಗತಿಯಲ್ಲಿದ್ದಾರೆ. ಧಿಂಗ್‌ನಲ್ಲಿರುವ ಕಾಲೇಜಿನಲ್ಲಿ ಹಿಮಾದಾಸ್‌ 12ನೇ ತರಗತಿ ಓದುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next