ಹೊಸದಿಲ್ಲಿ : ಮುಂದಿನ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ (ಆಪ್) ಮುಖ್ಯ ವಾಹಿನಿಯ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಮಾತ್ರವಲ್ಲದೆ ತನ್ನ ಹೆಸರನ್ನೇ ಹೋಲುವ ಇನ್ನೊಂದು “ಆಪ್” (AAP) ಪಕ್ಷದ ವಿರುದ್ಧ ಹೋರಾಡಬೇಕಾದ ಸಂಭಾವ್ಯತೆ ಇದೆ.
ಕೇಜ್ರಿವಾಲರ ಆಪ್ ಗೆ ಎದುರಾಳಿಯಾಗಲಿರುವ ಪಕ್ಷದ ಹೆಸರು ಆಪ್ ಕೀ ಅಪ್ನಿ ಪಾರ್ಟಿ (ಪೀಪಲ್ಸ್) ಅರ್ಥಾತ್ ಆಪ್ !
”ನಮ್ಮ ಪಕ್ಷದ ಹೆಸರನ್ನೇ ಹೋಲುವ, ಧ್ವನಿಸುವ ಈ ಪಕ್ಷ ಚುನಾವಣಾ ಕಣಕ್ಕಿಳಿದರೆ ಮತದಾರರಲ್ಲಿ ಭಾರೀ ಗೊಂದಲ ಉಂಟಾಗುವ ಸಾಧ್ಯತೆ ಇದೆ; ನಮ್ಮ ವೋಟ್ ಬ್ಯಾಂಕ್ ಸರ್ವನಾಶವಾಗುವ ಸಾಧ್ಯತೆ ಇದೆ; ಆದುದರಿಂದ ಜನತಾ ಪ್ರಾತಿನಿಧ್ಯ ಕಾಯಿದೆಯ ಪ್ರಕಾರ ನಮ್ಮ ಪಕ್ಷದ ಹೆಸರನ್ನು ಹೋಲುವ ಈ ಹೊಸ ಪಕ್ಷದ ನೋಂದಾವಣೆಯನ್ನು ರದ್ದು ಮಾಡಬೇಕು” ಎಂದು ಕೇಜ್ರಿವಾಲರ AAP ಮೊದಲು ಚುನಾವಣಾ ಆಯೋಗವನ್ನು ಸಂಪರ್ಕಿಸಿತ್ತು.
ಆದರೆ ಚುನಾವಣಾ ಆಯೋಗ ಆಪ್ ಮನವಿಯನ್ನು ತಿರಸ್ಕರಿಸಿತ್ತು. ಹಾಗಾಗಿ ಅರವಿಂದ ಕೇಜ್ರಿವಾಲರು ಚುನಾವಣಾ ಆಯೋಗದ ಜು.16ರ ಆದೇಶದ ರದ್ದತಿ ಮತ್ತು ತುರ್ತು ನ್ಯಾಯ ಕೋರಿ ಇದೀಗ ದಿಲ್ಲಿ ಹೈಕೋರ್ಟ್ ಮೆಟ್ಟಲೇರಿದ್ದಾರೆ. ಇದರ ವಿಚಾರಣೆಯನ್ನು ಹೈಕೋರ್ಟ್ ನ.13ಕ್ಕೆ ನಿಗದಿಸಿದೆ.
ಜಸ್ಟಿಸ್ ಸಿದ್ಧಾರ್ಥ ಮೃದುಲಾ ಅವರು ಚುನಾವಣಾ ಆಯೋಗಕ್ಕೆ ಮತ್ತು ಆಪ್ ಕೀ ಅಪ್ನಿ ಪಾರ್ಟಿ (ಪೀಪಲ್ಸ್) ಗೆ ನೊಟೀಸ್ ಜಾರಿ ಮಾಡಿದ್ದಾರೆ. ನೂತನ ಆಪ್ ಪಕ್ಷದ ನೋಂದಾವಣೆ ರದ್ದತಿ ವಿಷಯದಲ್ಲಿ ನಿಮ್ಮ ನಿಲುವೇನು ಎಂಬುದನ್ನು ನ.13ರೊಳಗೆ ಉತ್ತರಿಸಿ ಎಂದು ನೊಟೀಸಿನಲ್ಲಿ ಹೇಳಿದ್ದಾರೆ.